ವಿರೋಧ ಪಕ್ಷ ಕೂಡ ಸರಕಾರದ ಭಾಗವೇ: ಕೋಟ


ಬ್ರಹ್ಮಾವರ: ಸರಕಾರ ಎಂದರೆ ಆಡಳಿತ ಪಕ್ಷ ಮಾತ್ರವಲ್ಲ ವಿರೋಧ ಪಕ್ಷ ಕೂಡ ಸರಕಾರದ ಭಾಗವೇ. ಜನರಿಂದ ಆಯ್ಕೆಯಾದ ಎಲ್ಲ ಜನಪ್ರತಿನಿಗಳು ಕೂಡ ಸರಕಾರದ ಭಾಗವಾಗುತ್ತಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸಾಬ್ರಕಟ್ಟೆಯಲ್ಲಿ ಡಿಸಿಸಿ ಬ್ಯಾಂಕ್‌ನ ಸ್ಥಳಾಂತರಗೊಂಡ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಸರಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಿದಾಗ ಹಲವಾರು ಮಂದಿ ಹಲವು ಮಾತುಗಳನ್ನು ಆಡಿದ್ದರು. ಆದರೆ ನಾನು ಅಂದಿನ ಮುಖ್ಯಮಂತ್ರಿಯನ್ನು ಅಭಿನಂದಿಸಿದ್ದೆ. ಏಕೆಂದರೆ ರಾಜ್ಯದ ಹಲವು ಭಾಗದಲ್ಲಿ ಇಂದಿಗೂ ತುತ್ತು ಅನ್ನಕ್ಕೆ ಪರದಾಡುವ ಮಂದಿ ಇದ್ದಾರೆ. ಈ ಯೋಜನೆ ಹಲವು ಮಂದಿಯ ಹಸಿವನ್ನು ತಣಿಸುತ್ತದೆ ಎಂದು ಅಭಿನಂದಿಸಿದೆ. ಆದರೆ ಅನುಷ್ಠಾನದಲ್ಲಿ ಆಗುವ ಲೋಪವನ್ನು ವಿರೋಧ ಪಕ್ಷವಾಗಿ ನಾವು ಕಣ್ಗಾವಲನ್ನೂ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ.
ಕ್ರಾಂತಿಕಾರಿ ಯೋಜನೆಗಳು ಎಲ್ಲ ಸರಕಾರಗಳು ಜಾರಿಗೆ ತಂದಿದೆ. ಆದರೆ ದೇಶದ ೨೦ರಷ್ಟು ಮಂದಿಗೆ ಸರಿಯಾದ ಸೂರಿಲ್ಲ, ೩೦ ಶೇ. ದಷ್ಟು ಮಂದಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯವಿಲ್ಲ. ದೇಶದ ೧೮ಸಾವಿರ ಹಳ್ಳಿಗಳಿಗೆ ಮೊನ್ನೆ ಮೊನ್ನೆಯವರೆಗೆ ವಿದ್ಯುತ್ ಸಂಪರ್ಕವಿರಲಿಲ್ಲ ಎನ್ನುವುದು ಖೇದಕರ ಸಂಗತಿ ಎಂದರು.
ಈ ಸಂದರ್ಭ ನೂತನ ಎರಡು ನವೋದಯ ಗುಂಪುಗಳನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ವಹಿಸಿ, ಮಾತನಾಡಿ, ಜಿಲ್ಲಾ ಬ್ಯಾಂಕ್‌ನಿಂದ ಜನರಿಗೆ ಏನು ಕೊಡಲು ಸಾಧ್ಯವೋ ಅದನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ನಮ್ಮದು ಎಲ್ಲರನ್ನೂ ಬೆಳೆಸುವ ಚಿಂತನೆಯಾಗಿದೆ ಎಂದರು.
ಸಂಘಗಳಿಗೆ ೦ಶೇ. ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಇದೆ. ಅದಕ್ಕೆ ಸಂಘದಲ್ಲಿ ಶೇ.೭೫ರಷ್ಟು ಮಹಿಳೆಯರಿರಬೇಕು ಮತ್ತು ೭೫ಶೇ. ಮಂದಿ ಬಿಪಿಎಲ್ ಕಾರ್ಡ್ ಹೊಂದಿರಬೇಕು ಎಂದರು.
ವೇದಿಕೆಯಲ್ಲಿ ಶಿರಿಯಾರ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರದೀಪ್ ಬಳ್ಳಾಲ್, ಕಟ್ಟಡ ಮಾಲೀಕ ಅಶೋಕ್ ಪ್ರಭು, ಸಹಕಾರಿ ಸಂಘಗಳ ಉಪನಿಂಬಂಧಕ ಪ್ರವೀಣ್ ನಾಯಕ್, ಬ್ಯಾಂಕ್‌ನ ನಿರ್ದೇಶಕರಾದ ರಮೇಶ್ ಶೆಟ್ಟಿ, ರಾಜೇಶ್ ರಾವ್, ರಘುರಾಮ್ ಶೆಟ್ಟಿ, ರವೀಂದ್ರ ಬಿ. ವಿವಿಧ ವ್ಯವಸಾಯಿಕ ಸಂಘಗಳ ಅಧ್ಯಕ್ಷರಾದ ಶಾಂತರಾಮ ಶೆಟ್ಟಿ ಬಾರ್ಕೂರು, ಶ್ರೀಧರ ಪಿ.ಎಸ್, ತಿಮ್ಮಪ್ಪ ಹೆಗ್ಡೆ, ತಿಮ್ಮ ಪೂಜಾರಿ, ಸುರ್ ಕುಮಾರ್ ವೈ, ಮಂಜಯ್ಯ ಶೆಟ್ಟಿ, ಗಂಗಾಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಘವೇಂದ್ರ ಶೆಟ್ಟಿ ನಿರೂಪಿಸಿ, ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು, ರಾಜು ಪೂಜಾರಿ ವಂದಿಸಿದರು.

Leave a Comment