ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಬರ್ಗಿಯವರಿಗೊಂದು All The Best ಹೇಳುತ್ತಾ…

-ವಸಂತ್ ಗಿಳಿಯಾರ್

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ಬಿ. ನಿಂಬರ್ಗಿಯವರಿಗೆ ಧಿಡೀರ್ ವರ್ಗಾವಣೆ ಆದೇಶ ಬಂದಿದೆ. ಉಡುಪಿ ಜಿಲ್ಲೆ ನೋಡಿದ ಕೆಲವೇ ಕೆಲವು ಶ್ರೇಷ್ಠ ಪೊಲೀಸ್ ವರಿಷ್ಠಾಧಿಕಾರಿಗಳ ಸಾಲಿನಲ್ಲಿ ನಿಂಬರ್ಗಿಯವರೂ ಓರ್ವರು.. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನ ಹತೋಟಿಯಲ್ಲಿಡುವಲ್ಲಿ ನಿಂಬರ್ಗಿಯವರ ಪರಿಶ್ರಮವನ್ನ ಬಹಳ ಸೂಕ್ಷ್ಮವಾಗಿಯೇ ಗಮನಿಸುತ್ತಲೇ ಬಂದವನು ನಾನು. ಅವತ್ತು ಮಧುಕರ್ ಶೆಟ್ಟರ ಮರಣ ವಾರ್ತೆ ತಲುಪುವಾಗ ನಿಂಬರ್ಗಿಯವರು ತನ್ನ ಪತ್ನಿಯ ಜೊತೆ ಊರಿಗೆ ಹೊರಟಿದ್ದರು. ಬಸ್ಸು ಕುಂದಾಪುರದ ಸನಿಹವಿದ್ದಾಗ ಮಧುಕರ್ ಶೆಟ್ಟರ ಸಾವಿನ ಸುದ್ದಿ ತಲುಪುತ್ತದೆ! ತಕ್ಷಣವೇ ಅಲ್ಲೇ ಬಸ್ಸಿನಿಂದ ಇಳಿದು ಊರಿಗೆ ಹೋಗುವುದನ್ನ ಕ್ಯಾನ್ಸಲ್ ಮಾಡಿದ ಎಸ್.ಪಿ. ಮನೆಗೆ ತೆರಳಿದ್ದಲ್ಲ! ನೇರವಾಗಿ ವಡ್ಡರ್ಸೆ ರಘುರಾಮ ಶೆಟ್ಟರ ಮನೆಗೆ ಹೋಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಡಬೇಕಾದ ಕೆಲಸವನ್ನ ಅವರ ಮನೆಯಲ್ಲೇ ರಾತ್ರಿ ಹನ್ನೆರಡು ಗಂಟೆಯ ತನಕವೂ ಕುಳಿತು ನಿರ್ವಹಿಸಿ ಮತ್ತೆ ಮನೆಗೆ ಹೋಗಿ ಮಲಗಿದ್ದರು. ಶೀರೂರು ಶ್ರೀ ಮರಣದ ಪ್ರಕರಣದಲ್ಲಿ ಎಲ್ಲಿಯೂ ಗೊಂದಲಕ್ಕೆ ಅವಕಾಶ ಸಿಗದಂತೆ ತನ್ನ ಚಾಕಚಕ್ಯತೆಯಿಂದ ಅದನ್ನು ನಿಭಾಯಿಸಿದ್ದು ಅವರ ಆರ್ಹತೆಗೊಂದು ಉದಾಹರಣೆ.. ಇನ್ನು ಹಿರಿಯಡ್ಕದ ಗೋ ಧಲ್ಲಾಳಿ ಹಸನಬ್ಬ ಸಾವಿನ ಪ್ರಕರಣದಲ್ಲಿ ಯಾವ ಮುಲಾಜಿಗೂ ಒಳಗಾಗದೆ ತಪ್ಪು ಮಾಡಿದ ತನ್ನದೇ ಇಲಾಖೆಯ ಅಧಿಕಾರಿಯನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದು ಜಿಲ್ಲೆಯಲ್ಲೇ ನಡೆದ ಮೊದಲ ಪ್ರಕರಣವದು!

ಹಸನಬ್ಬ ಪ್ರಕರಣ ಇಡೀ ಜಿಲ್ಲೆಯನ್ನೇ ಕೋಮು ಧಳ್ಳುರಿಯಲ್ಲಿ ಸುಟ್ಟು ಹಾಕಿ ಬಿಡುವ, ಜಿಲ್ಲೆಯ ಸೌಹಾರ್ಧತೆಯನ್ನು ಕದಡಿಸಿ ಬಿಡುವ ಸಾಧ್ಯತೆಗಳಿತ್ತು! ಆದರೆ ನಿಂಬರ್ಗಿ ಹಾಗಾಗದಂತೆ ಬಹಳ ಜಾಣ್ಮೆಯಿಂದ ಅದನ್ನು ನಿರ್ವಹಿಸಿದರು! ಕಾಂಗ್ರೆಸ್ ನಡೆಸಿದ ಬಂದ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಮಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳು ಮೂಕ ಪ್ರೇಕ್ಷಕರಾಗಿ ನಿಂತಿದ್ದ ಹೊತ್ತಲ್ಲಿ ಖುದ್ದು ಎಸ್ಪಿಯೇ ಲಾಠಿ ಬೀಸಿ ಆಗಬಹುದಾದ ಅನಾಹುತವನ್ನ ಹದ್ದುಬಸ್ತಿಗೆ ತಂದದ್ದು ಒಂದು ನಾಯಕತ್ವದ ನಡೆಯಾಗಿ ಗೋಚರಿಸಿತ್ತು.

ಡ್ರಗ್ಸ್ ಮಾಫಿಯಾದ ವಿರುದ್ದ ಮ್ಯಾರಾಥಾನ್ ಮಾಡುವ ಮೂಲಕ, ಜಾಗೃತಿ ಮೂಡಿಸುವ ಕೆಲಸ, ಕಾಲೇಜು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವುದು, ಪೋನ್ ಇನ್ ಕಾರ್ಯಕ್ರಮದ ಮೂಲಕ ಸಾಮಾನ್ಯನ ಕೈಗೂ ಎಟುಕುವ ಅಧಿಕಾರಿಯಾಗಿ ಮೆಚ್ಚುಗೆಗೊಳಿಸಿದ್ದು, ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳನ್ನ ಶೀಘ್ರವೇ ಬಂಧಿಸಿದ್ದು ಮುಂತಾದ ಕಾರಣಕ್ಕೆ ನಿಂಬರ್ಗಿಯವರ ಬಗ್ಗೆ ಜನತೆಗೆ ತುಂಬು ಭರವಸೆಗಳಿತ್ತು.. ಎಲ್ಲಕ್ಕಿಂತಲೂ ನಿಂಬರ್ಗಿಯವರಲ್ಲಿ ಎಲ್ಲರ ಮಾತನ್ನೂ ಚೆನ್ನಾಗಿ ಆಲಿಸುವ ದೊಡ್ಡ ತಾಳ್ಮೆ ಇದ್ದಿತ್ತು! ಯಾರೂ ಕೂಡ ನಿಂಬರ್ಗಿಯವರನ್ನ ಖುದ್ದು ಹೋಗಿ ಮಾತಾಡಿ ಬರಬಹುದಾಗಿತ್ತು. ಅಚ್ಚರಿ ಎಂದರೆ ನಿಂಬರ್ಗಿಯವರಲ್ಲಿ ಹೋದ ಪ್ರತೀ ಪ್ರಕರಣಗಳ ಬಗ್ಗೆಯೂ ಆ ಮನುಷ್ಯ ತಾವೇ ಸ್ವತಃ ಆಸಕ್ತಿ ವಹಿಸಿ ಅದನ್ನ ಇತ್ಯರ್ಥಗೊಳಿಸುತ್ತಿದ್ದರು. ನಾನಿಲ್ಲಿ ದಾಖಲಿಸಲೇ ಬೇಕಾದ ಎಸ್.ಪಿ.ಯವರ ಇನ್ನೊಂದು ಮುಖ್ಯವಾದ ಗುಣ ನಿಂಬರ್ಗಿಯವರು ಯಾವುದೇ ಪ್ರಚಾರಗಳಿಗೆ ಹಾತೊರೆದವರಲ್ಲ! ಯಾರ ಓಲೈಕೆಗೂ ಮಣಿದವರೂ ಅಲ್ಲ!

ನಿಂಬರ್ಗಿಯವರ ಧಿಡೀರ್ ವರ್ಗಾವಣೆ ಅಗತ್ಯವಿರಲಿಲ್ಲ. ಅವರು ಅವಧಿಯನ್ನ ಮುಗಿಸಿಯೇ ತೆರಳಬೇಕು ಎನ್ನುವುದು ನನ್ನ ಅಭಿಮತ. ಸರ್ಕಾರ ಈ ಆದೇಶವನ್ನ ಹಿಂಪಡೆಯಬಲ್ಲುದು ಎನ್ನುವ ವಿಶ್ವಾಸವಿದೆ ನನಗೆ.. ಯಾವ ಅಧಿಕಾರಿಯೂ ಯಾವ ಜಾಗದಲ್ಲಿಯೂ ಶಾಶ್ವತವಲ್ಲ, ಆದರೂ ಸಣ್ಣ ಸಣ್ಣ ಅವಧಿಗೆ ಒಂದೂರಿನಿಂದ ಇನ್ನೊಂದೂರಿಗೆ ವರ್ಗಾವಣೆ ಮಾಡುವುದರಿಂದಾಗಿ ಅವರ ಬದುಕಿನಲ್ಲೂ ಕೆಲವು ಸಡನ್ ಮಾರ್ಪಾಡುಗಳನ್ನ ಮಾಡಿಕೊಳ್ಳಬೇಕಾಗುತ್ತದೆ ಮಕ್ಕಳ ಶಿಕ್ಷಣ, ಇನ್ನೊಂದು ಮತ್ತೊಂದು ಏನೋ ಒಂದು ಅಲ್ಲವೆ? ಹಾಗಾಗಿ ಸರ್ಕಾರ ವರ್ಗಾವಣೆ ಮಾಡುವ ಮೊದಲು ಸಣ್ಣದೊಂದು ಸುಳಿವನ್ನಾದರೂ ಕೊಡಬೇಡವೆ? ಏನಂತೀರಿ? ಏನೇ ಇರಲಿ all the best ನಿಂಬರ್ಗಿ ಸಾರ್..

Leave a Comment