ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ ಯತ್ನ: ಆರೋಪಿ ಬಂಧನ

ಬ್ರಹ್ಮಾವರ: ಬೆಳ್ಳಂಬೆಳಗ್ಗೆ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಳಿಗನೂರು ನಿವಾಸಿ ಹೊನ್ನಪ್ಪ ೩೪ ಬಂಧಿತ ಆರೋಪಿಯಾಗಿದ್ದು, ಪ್ರಸ್ತುತ ಐರೋಡಿ ಗ್ರಾಮದ ಮಾಬುಕಳದ ಅಲ್ಸೆಬೆಟ್ಟು ಮಹಾಕಾಳಿ ದೇವಸ್ಥಾನದ ಬಳಿ ವಾಸಿಸುತ್ತಿದ್ದ. ಸಂತೆಕಟ್ಟೆಯ ನವಮಿ ಬೇಕರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ಘಟನೆ ಹಿನ್ನೆಲೆ
ಬ್ರಹ್ಮಾವರದ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸಕ್ಕಿದ್ದ ಕಾಪು ಮೂಲದ ಮಹಿಳೆ ವಾಪಾಸು ಕಾಪುವಿಗೆ ಹೋಗುವ ಸಂದರ್ಭ ಡ್ರಾಪ್ ಕೊಡುವ ನೆಪದಲ್ಲಿ ಮಾರ್ಗ ಬದಲಿಸಿ ನೀಲಾವರದ ಸಮೀಪ ಅತ್ಯಾಚಾರಕ್ಕೆ ಯತ್ನಿಸಿದ್ದ. ಶ್ಯಾಮಿಲಿ ಶನಾಯದ ಬಳಿ ಆರೋಪಿ ಮಹಿಳೆಯನ್ನು ಹತ್ತಿಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರಲ್ಲಿ ಆರೋಪಿಯ ನೀಲಿ ಬಣ್ಣದ ಪ್ಲಾಟಿನಾ ಗಾಡಿಯನ್ನು ಬಳಸಿದ್ದ. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಉಡುಪಿ ಎಸ್‌ಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಠಾಣೆ ಪಿಎಸ್‌ಐ ರಾಘವೇಂದ್ರ ಸಿ. ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

Leave a Comment