ಬಾರ್ಕೂರಿನ ಇತಿಹಾಸಕ್ಕೆ ಅಪಮಾನ ಮಾಡಲು ಹೊರಟವರಿಗೆ ನಮ್ಮ ಧಿಕ್ಕಾರವಿದೆ

ಬಾರ್ಕೂರಿನಲ್ಲಿ ಅಳುಪೋತ್ಸವ ನಡೆಯುತ್ತಿದೆ. ನಿನ್ನೆ ಅಲ್ಲಿ ಏನೇನು ಏರ್ಪಾಟು ನಡೆದಿದೆ ಎಂಬುದನ್ನ ಸುಮ್ಮನೆ ನೋಡಲೆಂದು ಹೋಗಿದ್ದೆವು! ಜಿಲ್ಲಾಧಿಕಾರಿಗಳು ನಿನ್ನೆ ಸ್ಥಳ ಪರಿಶೀಲನೆಗೆ ಬಂದಿದ್ದರು. ಆಳುಪೋತ್ಸವ ನಡೆಯುವುದು ಬಾರ್ಕೂರಿನ ಕೋಟೆಯ ಬಳಿ . ಅದರೊಳಗೆ ಜೆಸಿಬಿ ಯಂತ್ರಗಳನ್ನ ನುಗ್ಗಿಸಿ ವಿಶಾಲವಾದ ಮೈದಾನವನ್ನಾಗಿಸಿದ್ದಾರೆ.. ಕೋಟೆಯಿದ್ದ ಜಾಗದ ಒಂದು ಕಡೆ ದೊಡ್ಡ ಸುರಂಗವನ್ನು ಮುಚ್ಚಿದ ದೃಶ್ಯ ಕಂಡು ಬಂತು! ಹಳೆ ಕಾಲದ ಅತೀ ಮುಖ್ಯವಾದ ಶಿಲಾಕಲ್ಲುಗಳು ಜೆಸಿಬಿ ಹಲ್ಲುಗಳ ದಾಳಿಗೊಳಗಾಗಿ ಭಗ್ನಗೊಂಡಿದೆ!

ಕೋಟೆ ಕಾಯುವ ಭೈರವನ ಪಾದ

ಪುರಾತನ ಇತಿಹಾಸ ಹೊಂದಿರುವ ಬಾರ್ಕೂರಿನಲ್ಲಿ ಕಲ್ಲು ಕಲ್ಲುಗಳೂ ಕಥೆ ಹೇಳುತ್ತಿವೆ. ಕೋಟ್ಯಾಂತರ ಹಣವನ್ನ ಸುರಿದು ಸಾಂಸ್ಕೃತಿಕ ಜಾತ್ರೆಯನ್ನ ಮಾಡುವ ಬದಲು ಅದನ್ನ ಸಂರಕ್ಷಿಸುವ ಕಡೆ ಸರ್ಕಾರ ಯಾಕೆ ಗಮನ ಹರಿಸಲಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮದು ಭಂಜಕ ಸಂಸ್ಕೃತಿಯಲ್ಲ ಅಥವ ಉತ್ಸವಾದಿಗಳನ್ನ ಧಿಕ್ಕರಿಸುವ ಮನೋತನವೂ ಅಲ್ಲ. ಸಾಂಸ್ಕೃತಿಕ ಉತ್ಸವವನ್ನ ಮಾಡಲಿಕ್ಕೆ ಬಾರ್ಕೂರಿನಲ್ಲಿ ಬೇರೆಡೆ ಬೇಕಾದಷ್ಟು ಸ್ಥಳವಿದೆ, ಕಾಲೇಜು ಮೈದಾನಗಳಿವೆ ಹೌದಲ್ಲವೆ? ಆದರೆ ಇವರೇಕೆ ಕೋಟೆಯನ್ನೇ ಅಗೆದು ನೆಲಸಮ ಮಾಡಿ ಏನನ್ನೋ ಹುಡುಕಲು ಹೊರಟವರಂತೆ ಏನೋ ಮಾಡಲು ಹೋಗಿದ್ದಾರಲ್ಲಾ? ಪುರಾತತ್ವ ಇಲಾಖೆಯ ಅಡಿ ಬರುವ ಎಲ್ಲಾ ಸ್ಥಳಗಳನ್ನ ಇಲಾಖೆಯೇ ಉತ್ಖನನ ಮಾಡತಕ್ಕದ್ದು. ಆಸೂಕ್ಷ್ಮತೆ ನಮ್ಮ ಸರ್ಕಾರದ ಅರಿವಿಗೆ ಬಾರದೆ ಹೋಯಿತೆ? ಇದರಲ್ಲಿ ಬಹಳ ದೊಡ್ಡ ಮಟ್ಟದ ಹಗರಣವಾಗುತ್ತದೆ ಎಂದೇನೂ ನಾನು ಹೇಳಲಾರೆ, ಆಳುಪೋತ್ಸವ ನಡೆಸಕೂಡದು ಎಂದೂ ಹೇಳುತ್ತಿಲ್ಲ. ಆದರೆ ಸಂರಕ್ಷಿಸಬೇಕಾದ ಸ್ಥಳವನ್ನ ಅಗೆದು ತೆಗೆದು ಚರಿತ್ರೆಯ ಅಮೂಲ್ಯ ಸಾಕ್ಷಿಗಳನ್ನ ಹಾಳುಗೆಡವಲು ಇವರಿಗೆ ಪರವಾನಿಗೆ ಕೊಟ್ಟಿದ್ದು ಯಾರು?

ಮುಚ್ಚಲಾದ ಸುರಂಗ

ಸರ್ಕಾರದ ಮತ್ತು ಈ ಆಡಳಿತ ವ್ಯವಸ್ಥೆಯ ವಿರುದ್ದ ಪತ್ರಿಕೆ ಸಮಾನ ಮನಸ್ಕರನ್ನ ಜೋಡಿಸಿಕೊಂಡು ’ಬಾರ್ಕೂರು ಉಳಿಸಿ’ ಎನ್ನುವ ನೆಲೆಯಲ್ಲಿ ಕಾನೂನು ಹೋರಾಟಕ್ಕೂ ಸಿದ್ದವಿದೆ.. ಚಾರಿತ್ರಿಕ ದಾಖಲೆಗಳನ್ನ ನಾಶ ಮಾಡಿದಂತಹ ಪ್ರಕರಣವನ್ನ ಇವರುಗಳ ಮೇಲೆ ದಾಖಲಿಸಲೇ ಬೇಕಿದೆ. ಇಂದಿನವರಿಗಲ್ಲದಿದ್ದರೂ ಮುಂದಿನವರಿಗಾದರೂ ಈ ಎಚ್ಚರಿಕೆಯೊಂದು ಅತೀ ಅಗತ್ಯ. ಮೊದಲು ಇದನ್ನ ಸಂರಕ್ಷಿಸುವ ಕೆಲಸವನ್ನ ನಡೆಸಲಿ, ಆನಂತರ ಇದರ ಉತ್ಸವಗಳನ್ನ ನಡೆಸಲಿ. ಬಾರ್ಕೂರಿನ ಇತಿಹಾಸಕ್ಕೆ ಅಪಮಾನ ಮಾಡಲು ಹೊರಟವರಿಗೆ ನಮ್ಮ ಧಿಕ್ಕಾರವಿದೆ

-ವಸಂತ್ ಗಿಳಿಯಾರ್

Leave a Comment