ಬೀಜಾಡಿ ಸನಿಹದಲ್ಲಿದೆ ಸಾವಿನ ದಾರಿ !!

ಜಿಲ್ಲಾಧಿಕಾರಿಗಳೇ ಇತ್ತ ಗಮನಿಸಿ .. .

ರಾಷ್ಟ್ರಪಥ ಅರವತ್ತಾರರ ಬೀಜಾಡಿ ಗೋಪಾಡಿ ಸಮೀಪದಲ್ಲಿ ಸರ್ವೀಸ್ ರಸ್ತೆಯ ಅವಾಂತರಕ್ಕೆ ಮುಕ್ತಿ ಎಂದು? ಅಪಾಯವೊಂದು ಘಟಿಸಿದಾಗಲೇ ನಾವು ಎಚ್ಚಿತ್ತುಕೊಳ್ಳುವುದೇ? ಅಥವಾ ಅಪಾಯ ನಡೆಯದಂತೆ ಜಾಗೃತರಾಗುವುದೆ? ಗೊತ್ತಿಲ್ಲ. ಇಲ್ಲಿ ದಿನಕ್ಕೆ ಕನಿಷ್ಟ ಒಂದಾದರೂ ಅಪಘಾತ ನಡೆಯುತ್ತಲೇ ಇದೆ.. ಕಳೆದ ನವೆಂಬರ್ ತಿಂಗಳಿನಿಂದಲೂ ಹಲವಾರು ಪ್ರತಿಭಟನೆಗಳು ನಡೆಯುತ್ತಲೇ ಬಂದವು. ಅದರ ಮುಂದಾಳತ್ವವನ್ನ ಸ್ಥಳಿಯ ಪತ್ರಕರ್ತರಾದ ಚಂದ್ರಶೇಖರ್ ಬೀಜಾಡಿ ವಹಿಸಿದ್ದರು.

ನೂರಾರು ನಾಗರಿಕರು ಜೊತೆಯಾಗಿದ್ದರು ಮಿತ್ರ ಸಂಗಮ ಬೀಜಾಡಿಯ ಗೆಳೆಯರು ಜೊತೆಯಾದರು. ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಶ್ರೀಲತಾ ಸುರೇಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ವೈಲೆಟ್ ಬೆರೆಟ್ಟೋ ಮುಂತಾದವರು ಪೂರ್ಣವಾಗಿ ಪಾಲ್ಗೊಂಡಿದ್ದರು..

ಇಲ್ಲಿ ಕ್ಯಾಟಲ್ ಪಾಸ್ ಆಗುವುದು ಎಂದು ಹೆದ್ದಾರಿ ಪ್ರಾಧಿಕಾರದ ನಕ್ಷೆಯಲ್ಲಿತ್ತು.. ಅಂಡರ್ ಪಾಸ್ ಆದರೆ ಊರು ಇಬ್ಬಾಗವಾಗುತ್ತದೆ ಎನ್ನುವ ಧ್ವನಿ ಎದ್ದು ಜಯಪ್ರಕಾಶ್ ಹೆಗ್ಡೆಯವರಿಗೆ ಒಂದಷ್ಟು ಸಮಾನ ಮನಸ್ಕರು ಮನವಿ ಕೊಟ್ಟರು. ಅದು ಯಶ ಕಂಡಿತು. ನಂತರ ಅಲ್ಲೊಂದು ಡೈವರ್ಷನ್ ಕೊಡುವಂತೆಯೂ ಮನವಿ ಸಲ್ಲಿಸಿದರು. ಅದರಲ್ಲೂ ದೆಹಲಿ ಮಟ್ಟದ ತನಕ ತಾವೇ ಹೊರಟು ಜಯಪ್ರಕಾಶ್ ಹೆಗ್ಡೆಯವರ ಬೆಂಬಲದೊಂದಿಗ್ ಅದಕ್ಕೂ ಅಸ್ತು ಮುದ್ರೆ ಬಿದ್ದಿತು..

ಇದೀಗ ಸರ್ವೀಸ್ ರಸ್ತೆಗೆ ಆಳವನ್ನ ಮಾಡಿ ಹಾಗೆ ಬಿಟ್ಟಿದೆ ನವಯುಗ ಕಂಪೇನಿ.. ದಿನವಹಿ ಅಪಘಾತಗಳಾಗುತ್ತಿದ್ದರೂ ಜಿಲ್ಲಾಡಳಿತ ಇದನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲವಲ್ಲಾ? ನವಯುಗ ಕಂಪೇನಿಯವರು ನಮಗೆ ಜೆಲ್ಲಿಯ ಸಮಸ್ಯೆ ಇದೆ ಎನ್ನುವ ಸುಳ್ಳು ಕಾರಣವನ್ನ ನೀಡುತ್ತಲೇ ಇದೆ. ಆದರೆ ನಯವುಗ ಕಂಪೇನಿಯಲ್ಲಿ ನೂರಾರು ಲೋಡ್ ಜೆಲ್ಲಿ ಸ್ಟಾಕ್ ಇರುವ ಖಚಿತ ಮಾಹಿತಿ ನಮಗಿದೆ. ಹಾಗಿದ್ದರೆ ಇವರು ಯಾರನ್ನ ವಂಚಿಸಲು ಹೊರಟಿದ್ದಾರೆ?

ಇವತ್ತು ಜಿಲ್ಲಾಧಿಕಾರಿಗಳು ಸರ್ವೀಸ್ ರಸ್ತೆಯನ್ನ ವೀಕ್ಷಿಸಲು ಬರುವುದು ಎನ್ನುವುದಾಗಿ ಸ್ಥಳಿಯ ಪಂಚಾಯಿತಿಗೆ ಮಾಹಿತಿ ಬಂದಿತ್ತು. ಹಾಗಾಗಿ ಈಡೀ ದಿವಸ ಜಿಲ್ಲಾ ಪಂಚಾಯತ್ ಸದ್ಯಸ್ಯರನ್ನೂ ಒಳಗೊಂಡಂತೆ ಜಿಲ್ಲಾಧಿಕಾರಿಗಳಿಗೆ ಕಾಯುತ್ತಲೇ ಕಳೆದರು. ಆದರೂ ಜಿಲ್ಲಾಧಿಕಾರಿಗಳು ಕರೆಗೆ ಸ್ಪಂದಿಸಲಿಲ್ಲ. ಕೊನೆಗವರು ಮರಳಿಗೆ ಸಂಬಂಧಿಸಿದ ಬಹುಮುಖ್ಯವಾದ ಸಭೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ..

ಪಡುಬಿದ್ರೆಯಿಂದ ಕುಂದಾಪುರದ ತನಕ ಜಿಲ್ಲಾಧಿಕಾರಿಗಳು ರಸ್ತೆಯನ್ನ ವೀಕ್ಷಿಸುವುದಾಗಿ ಬಂದಿದ್ದ ಹೇಳಿಕೆಗಾಗಿ ಜನ ಬಿಸಿಲಲ್ಲೇ ಇನ್ನೂರಕ್ಕೂ ಹೆಚ್ಚು ಮಂದಿ ನಾಗರೀಕರು, ಹೋರಾಟ ಸಮೀತಿ ಸದಸ್ಯರು ಕಾದು ನಿಂತಿದ್ದರು. ಜಿಲ್ಲಾಧಿಕಾರಿಗಳ ಬದಲು ಸಹಾಯಕ ಆಯುಕ್ತರು ಬರುವುದು ಎಂದಾಗಿತ್ತು, ಆದರೆ ಅವರು ಸಾಸ್ತಾನದ ತನಕ ಮಾತ್ರವೇ ಪರಿಶೀಲನೆ ನಡೆಸಿ ಸಾಲಿಗ್ರಾಮದ ಗಣೇಶ್ ಗ್ರ್ಯಾಂಡ್ ಹೋಟೇಲಿನಲ್ಲಿ ಬೋಂಡ ಬಜ್ಜಿ ತಿಂದು ರಸಾಯನ ಕುಡಿದು ವಾಪಾಸಾದರು ಎಂಬ ಸುದ್ದಿ ಕಾಯುತ್ತ ನಿಂತವರಿಗೆ ತಲುಪುತ್ತದೆ.. !!

ಇದಕ್ಕೆಲ್ಲ ಒಂದು ಅರ್ಥವಿದೆಯಾ? ಕಾಯುತ್ತ ನಿಂತ ಜನಪ್ರತಿನಿಧಿಗಳಿಗೆ, ಜನತೆಗೆ ಒಂದು ಕನಿಷ್ಠ ಬೆಲೆಯೂ ಇಲ್ಲವೆ? ಸಣ್ಣ ಸಣ್ಣ ಮಕ್ಕಳನ್ನ ತುಂಬಿಸಿಕೊಂಡು ಈ ಪರಿಸರದಲ್ಲಿ ಶಾಲಾ ವಾಹನಗಳು ಓಡಾಡುತ್ತವೆ. ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ, ಅತ್ಯಂತ ಅಪಾಯಕಾರಿಯಾಗಿ ಈ ಜಾಗ ಪರಿವರ್ತಿತಗೊಂಡಿದೆ ನಾಳೆ ಏನಾದರು ದೊಡ್ಡ ದುರಂತ ಸಂಭವಿಸಿದರೆ ಅದಕ್ಕೆ ಹೊಣೆ ಹೊರುವವರು ಯಾರು? ಜನತೆಯ ಹೋರಾಟಕ್ಕೆ ಬೆಲೆಯೇ ಇಲ್ಲವೆ? ಜಿಲ್ಲಾಧಿಕಾರಿಗಳಿಗೆ ಇದರ ಗಂಭೀರತೆ ಇದುವರೆಗೂ ಅರ್ಥವಾಗಿಲ್ಲವೇ? ಉತ್ತರಿಸಬೇಕು..

-ವಸಂತ್ ಗಿಳಿಯಾರ್

Leave a Comment