ಗುಂಡ್ಮಿಯ ಒಂಟಿ ಬಂಗಲೆಯಲ್ಲಿ ನಾನೊಬ್ಬನೇ ಅಮವಾಸೆಯ ದಿವಸ.

ಯಾಕೋ ಹಾಗನ್ನಿಸಿ ಬಿಟ್ಟಿದೆ ಇತ್ತೀಚೆಗೆ ಬರಹ ಬತ್ತಿ ಹೋಗಿದೆ ಅನ್ನಿಸಿದೆ.!.ಏನು ಬರೆಯಲು ಹೊರಟರೂ ಮನಸ್ಸು ಕೈ ಕೊಡುತ್ತದೆ. ಹಳೆ ದಿನಗಳಪ್ರೇಯಸಿಯರ ನೆನಪಿಸಿಕೊಂಡು ಕವಿತೆ ಬರೆಯಲು ಹೊರಟರೂ ನನಗದನ್ನು ಬರೆಯಲಾಗದು. ! ಬರಹವೇ ಹಾಗೆ ಬರೆಯುವ ಲಿಂಕ್ ತಪ್ಪಿಹೋಯಿತೆಂದರೆ ನಾನು ಅಪ್ಪನಾಣೆಗೂ ಒಂದಕ್ಷರವನ್ನೂಬರೆಯುವುದಿಲ್ಲ. ನೀವು ಬೇಕಾದರೆ ನನ್ನನ್ನ ಮೂಡಿ ಎಂದು ಕರೆಯಿರಿ ಆದರೆ ನಾನು ಈ ಮೂಡ್ ಗಳನ್ನೆಲ್ಲ ನಂಬುವುದಿಲ್ಲವಾದರೂ ಒಂದೊಂದು ಸಾರಿ ಎಲ್ಲಾ ಬಿಟ್ಟು ಎಲ್ಲಾದರು ದೂರದೂರಿಗೆ ಹೋಗಿಯಾರಿಗೂ ಗೊತ್ತಿಲ್ಲದಂತೆ ಇದ್ದು ಬಿಡಬೇಕು.. ಪರಿಚಿತರೆ ಇಲ್ಲದ ಅಪರಿಚಿತ ನಗರದ ಬೃಹತ್ ಹೆದ್ದಾರಿಗಳಲ್ಲಿ ಅನಾಥನಂತೆ ಅಲೆಯಬೇಕು ಅಂತನ್ನಿಸುತ್ತದೆ.. ಅದೆಲ್ಲಿಯದೋ ಕ್ಯಾಂಟೀನಿನ ಬನ್ನು,ಟಿ.. ಇನ್ನೆಲ್ಲಿಯದ್ದೋ ಚಿತ್ರಾನ್ನ ಮತ್ತೆ ಸಂಜೆಗೊಂದಷ್ಟು ಅನ್ನ ಸಾಂಬರ್.. ಇಷ್ಟಿದ್ದು ಬಿಟ್ಟರೆ ಸಾಕು ನನ್ನ ಬದುಕು ಹೂವಿನ ಹೆದ್ದಾರಿ..

 ಕಳೆದು ಹೋದ ಹುಡುಗಿಗೆ ಪ್ರೇಮ ಪತ್ರವನ್ನ ಬರೆದು, ಗೊತ್ತಿಲ್ಲದ ವಿಳಾಸವನ್ನ ಹಾಗೆ ಕಾಲಿಬಿಟ್ಟು, ಕೆಂಪು ಅಂಚೆ ಡಬ್ಬಿಗೆ ಹಾಕಿ ನಿರುಮ್ಮಳಾಗಬೇಕು..  ಹೀಗೆಲ್ಲ ನನಗೆ ಆಗಾಗ ಅನ್ನಿಸುತ್ತಲಿರುತ್ತದೆ.. ಹಲವಾರು ಸಾರಿ ನಾನು ದಿಡಗನೆದ್ದು ಹೊರಟೇ ಹೋದದ್ದೂ ಇದೆ.. ಒಂದು ಜೊತೆ ಬಟ್ಟೆ ಒಂದೆರಡು ಪುಸ್ತಕ ಇಟ್ಟುಕೊಂಡು  ಬಸ್ ಹತ್ತಿ ಕುಳಿತು ಬಿಡುತ್ತೇನೆ..! ಎಲ್ಲಿಗೆಮನಸ್ಸಾಗುತ್ತದೋ ಅಲ್ಲಿಗೆ ಟಿಕೇಟ್.. ಇಳಿಯುವ ಜಾಗ ಬಂದಿಲ್ಲವಾ? ಅಲ್ಲಿಂದಲೂ ಮುಂದೆ ರೈಟ್ ರೈಟ್.. ಹೀಗೆ ಆ ಕ್ಷಣವೇ ನಿರ್ಧರಿಸಿಹೊರಟೇ ಬಿಡುವ ನಾನು  ಇಂದಿಗೂ  ನನಗೇ  ಪೂರ್ತಿಯಾಗಿಅರ್ಥವಾಗಿಲ್ಲ..

  ಜಗತ್ತಿನ ಬಹುತೇಕರು ಒಂಟಿತನನವನ್ನ ಸಿಕ್ಕಾಪಟ್ಟೆ ದ್ವೇಶಿಸುತ್ತಾರೆ! ಆದರೆ ನೆನಪಿಡಿ ನನ್ನಂತಹ ಯಡವಟ್ಟರಿಗೆ ಈ ಒಂಟಿತನವೆಂಬುದು ಎಗಾದಿಗ ಇಷ್ಟವಾಗಿ ಬಿಟ್ಟಿರುತ್ತದೆ.. ! ಇಲ್ಲೆಸಾಸ್ಥಾನದ ಗುಂಡ್ಮಿ ಎಂಬಲ್ಲಿಯ ಒಂಟಿ ಬಂಗಲೆಯಲ್ಲಿ ನಾನುಒಬ್ಬಂಟಿಗನಾಗಿ ಅದೆಷ್ಟೋ ದಿನ ಇದ್ದು ಬಿಡುತ್ತಿದ್ದೆ..  ಈಗ್ಗೆ ಕೆಲ ವರ್ಷದಹಿಂದೆ ಅದರಲ್ಲಿ  ಹುಡುಗಿಯೊಬ್ಬಳು ವಿಷ ತಗೊಂಡು ಸತ್ತೇಹೋಗಿದ್ದಳಂತೆ. ಅದರ ನಂತರ ಆ ಮನೆಯಲ್ಲಿ ಮೇಲಿಂದ ಮೇಲೆಸಾವುಗಳಾದವಂತೆ.. ರಾತ್ರಿ ಮಲಗಿದರೆ ದೆವ್ವ ಬಂದು ಕಾಲೆಳೆದುಬಿಡುತ್ತದೆ.. ಅಲ್ಲೊಂದು ಕೋಣೆಯಿದೆಯಲ್ಲಾ? ಅದರಲ್ಲಿ ಪ್ರಾಯದಹುಡುಗರು ಮಲಗಿದರೆ ಸಿಕ್ಕಾಪಟ್ಟೆ ಉಪದ್ರ.. ಸತ್ತ ಹುಡುಗಿಗೆ ಮದುವೆಯಾಗಿಲ್ಲ ಅಲ್ಲವಾ? ಹಾಗಾಗಿ…!! ಎನ್ನುವ ಚಿತ್ರ ವಿಚಿತ್ರಕಥೆಗಳು ಆ ಬಂಗಲೆಯ ಬಗ್ಗೆ ಹುಟ್ಟಿಕೊಂಡಿತ್ತು.. ನಾನು ಆ ಮನೆಯಲ್ಲಿಉಳಿದುಕೊಂಡವ ಎಂದು ತಿಳಿಯುತ್ತಿದ್ದಂತೆ ನನ್ನ ವಿಚಿತ್ರವಾಗಿನೋಡುತ್ತಿದ್ದ ಹಲವಾರು ಜನರಿದ್ದರು.. ಅವರ ಕಂಗಳಲ್ಲಿ ಒಂದುರೀತಿಯ ಭಯ ಮತ್ತು ನನ್ನ ಮೇಲೆ ಕನಿಕರ.

 ಅದರಲ್ಲಿ ಒಬ್ಬಅಜ್ಜಿಯಂತೂ “ಮಗಾ ಪ್ರತೀ ಶನಿವಾರ ಸಾಲಿಗ್ರಾಮದ ಅಂಜನೇಯ ದೇವಸ್ಥಾನಕ್ಕೆ ಹೋಗಿ ಬಾ.. ಅಮವಾಸೆ  ದಿವಸ ಮಾತ್ರ ಇಲ್ಲಿ ಇರಬೇಡ” ಎನ್ನುತ್ತಿತ್ತು.. ಆ ಜಾಗದೊಳಕ್ಕೆ ಆ ಪರಿಸರದ ಬಹುತೇಕರು ಬರುತ್ತಲೇಇರಲಿಲ್ಲ.. ನಂಬಿ ; ನನಗೆ ಅಲ್ಲಿ ಒಂದೇ ಒಂದು ರಾತ್ರಿಯೂ ಗೆಜ್ಜೆ ಸಪ್ಪಳಕೇಳಿಸಿಲ್ಲ, ಕೈ ಬಳೆ ಸದ್ದು ಕೇಳಿಸಿಲ್ಲ.. ಒಂದೇ ಒಂದು ದಿನವೂ ಸತ್ತು ಪ್ರೇತವಾಗಿದ್ದಾಳೆ ಎಂದು ನಂಬಲಾಗುತ್ತಿರುವ ಆ ಹುಡುಗಿ  ಸಿಗಲೇ ಇಲ್ಲ..ಅದೊಂದು ತುಂಟ ಬೇಸರ ನನಗೆ! ಇಂದಿಗೂ ಆಗಾಗ ಆ ಮನೆಗೆ ಹೋಗಿ ಬರುತ್ತೇನೆ ನಾನು… ಅಂಥಹ ಒಂಟಿತನ ನನಗೆ ಸಿಕ್ಕಾಪಟ್ಟೆಇಷ್ಟ . ಕೆಲವೊಮ್ಮೆ ಕೋಟದ ನನ್ನ ಆಫೀಸಿನಲ್ಲಿ ಒಬ್ಬನೇ ಕುಳಿತುಬರೆಯುತ್ತಲಿರುತ್ತೇನೆ ಅಲ್ಲಿಗೆ ಯಾರೋ ಬಂದು ಬಿಡುತ್ತಾರೆ..ಇಷ್ಟವಿಲ್ಲದಿದ್ದರೂ  ಮಾತನಾಡುತ್ತಾರೆ , ನಾನು ಮಾತನಾಡದಿದ್ದರೆಅವರಿಗೆ ಬೇಸರ.. ಇವನಿಗೆಲ್ಲಿಯದ್ದಪ್ಪ ಅಹಂಕಾರ ಎನ್ನುತ್ತಾರೆ. ಇದೆಲ್ಲ ತಲೆಬಿಸಿ ಬೇಕಾ? ಅದೆಲ್ಲಿಯದ್ದೋ ಒಂದು ಒಂಟಿ ಮನೆ, ಬರೆಯಲಿಕ್ಕೆ ಪೆನ್ನು, ಪೇಪರ್ ಅಥವ ಲ್ಯಾಪ್.. ಓದಲಿಕ್ಕೆ ಒಂದಷ್ಟು ಪುಸ್ತಕ.. ಅದರವಿಳಾಸ ನನಗೆ ಮಾತ್ರವೇ ಗೊತ್ತಿರಬೇಕು.. ನನ್ನ ಒಂದಷ್ಟು ಜನ ಗೆಳೆಯರನ್ನ ಕರೆದು ಪಾರ್ಟಿ ಮಾಡೋದು.. ಅಲ್ಲಿ ಒಂದಷ್ಟು ಹುಡುಗರನ್ನಸೇರಿಸಿಕೊಂಡು ಹರಟೆ ಹೊಡೆಯೋದು.. ಊಹೂಂ ಹಾಗೆಲ್ಲ ಮಾಡಿದರೆ ಆ ದಿವ್ಯ ಸ್ವಾತಂತ್ರ್ಯ ಮುಗಿದೇ ಹೋಗುತ್ತದೆ..

 ಮೊದಲು ಮಾನಂಬಳ್ಳಿಯಲ್ಲಿದ್ದಾಗ ಅದೆಲ್ಲವನ್ನೂ ಮಾಡಿ ನೋಡಿದ್ದೇನೆ.. ನನ್ನಹಲವಾರು ಗೆಳೆಯರು ಅಲ್ಲೇ  ಇದ್ದಿರುತ್ತಿದ್ದರು. ಅದು ಅವತ್ತಿಗೆ ನನಗೆ ಅನಿವಾರ್ಯವೂ ಆಗಿತ್ತು. ಯಾಕೆಂದರೆ ಈಮನೆಯಲ್ಲಿ ವಸಂತ ಇದ್ದೇಇರುತ್ತಾನೆ ಎಂಬುದು ಬಹುತೇಕರಿಗೆ ಗೊತ್ತಿತ್ತು.. ನನಗಾಗಿ ಹೊಂಚುಹಾಕುವ ಶತ್ರುಗಳೂ ಸಾಕಷ್ಟು ಜನರಿದ್ದಿದ್ದರು.. ಕೋಟೇಶ್ವರದ  ಹಳವಳ್ಳಿಯಿಂದ ಸಾಕಷ್ಟು ಗೆಳೆಯರು ಬಂದು ಅಲ್ಲಿಉಳಿದುಕೊಳ್ಳುತ್ತಿದ್ದರು. ಆದರೆ ಅಲ್ಲಿ ಏಕಾಂತವಿರುತ್ತಿರಲಿಲ್ಲ..ಒಂಟಿತನವೆಂದರೆ ಲೋನ್ಲಿನೆಸ್ ಅಂತ ತಪ್ಪಾಗಿ ಭಾವಿಸಬೇಡಿ..ಏಕಾಂತದ ಖುಷಿ ಎಲ್ಲರಿಗೂ ಸರಿಯಾಗಿ ಅರ್ಥವಾಗುವುದಿಲ್ಲ.. ನಾನು ಇಲ್ಲಿಯ ತನಕ ಏನನ್ನಾದರು ಚೆನ್ನಾಗಿ ಬರೆದಿದ್ದೇನೆ ಅಂತ ಅನ್ನಿಸಿದ್ದಿದ್ದರೆ ಅದೆಲ್ಲವೂ ನನ್ನ ಏಕಾಂತದಲ್ಲಿ.. ಇದೊಂದು ಚಟವಾ? ಅಥವ ಹಟವಾ ನನಗೆ ಗೊತ್ತಿಲ್ಲ..  ಮತ್ತೆ ಸಿಗ್ತೀನಿ ..

-ವಸಂತ್ ಗಿಳಿಯಾರ್

Leave a Comment