ಮನೆಯಲ್ಲಿ ಸೀನಿದರೂ ಬರುತ್ತಾರೆ ಪಕ್ಕದ್ಮನೆ ವಾರಿಯರ‍್ಸ: ಲಘುಬರಹ
  • ಮಧ್ವರಾಜ್‌ ಭಟ್‌

ಅರೇ ಇದೇನಿದು, ಹೊಸ ಶಬ್ಧ. ನನಗೂ ಗೊತ್ತಿರ್ಲಿಲ್ಲ ಕಣ್ರಿ. ಡಿಸೆಂಬರ್ ನಲ್ಲಿ ಪೇಪರ್ ನಲ್ಲಿ ನೋಡಿದ ನೆನೆಪು. ಆದರೆ 2020ರ ಮಾರ್ಚ್ ಬಂತು ನೋಡಿ. ಇದರ ಹವಾ ಜೋರಾಯಿತು. ಅಲ್ಲಿಂದ ಈ ಶಬ್ಧ ಜನರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಲಲ್ಲ. ಕೊರೋನ ಸಲುವಾಗಿ ಪ್ರಧಾನಿ ಮೋದಿಯವರು ರಾತ್ರಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿದ ಮೇಲೆ ಜನರು ಕಂಗಾಲಾದದ್ದು ಅಷ್ಟಿಟ್ಟಲ್ಲ. ಇದರ ಗುಣ ಲಕ್ಷಣ ನಾನು ನಿಮಗೆ ಬೇರೆ ಹೇಳಬೇಕೆಂದಿನಿಲ್ಲ, ಅದೇ ಶೀತ, ಜ್ವರ. ಜ್ವರ ಜೊರಾಗಿ ಕೊನೆಗೆ ಸಾಯುವ ವರೆಗೂ ಹೋಗುತ್ತದೆ. ಈ ವರ್ಷದಲ್ಲಿ ಅತೀ ಬಳಕೆಯಾದ ಶಬ್ಧಗಳು ಅಂದರೆ ಒಂದು ಶಂಕಿತ, ಸೋಂಕಿತ, ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್, ಸ್ಯಾನಿಟೈಸರ್. ಜನರಲ್ಲಿ ಬಾಯಿ ಪಾಠ ವಾಗಿದೆ. ಅಯ್ಯೋ ಇದೇನಿದು ಹಾಸ್ಯ ಅಂತ ಹೇಳಿ ಕಥೆ ಬರೆಯುತ್ತಿದ್ದಾರಲ್ಲಾ ಅಂತ ಯೋಚಿಸ ಬೇಡಿ. ಮುಂದೆ ಇದೆ ನೋಡಿ ಮಾರಿ ಹಬ್ಬ.
ಅಲ್ರೀ ನಾವು ಯಾವಾಗಲೂ ಶೀತವಾಗಾದಾಗ ಶೀನುವುದು ಸರ್ವೇ ಸಾಮಾನ್ಯ. ಆದರೆ ಈ ಕೊರೋನ ಸಮಯದಲ್ಲಿ ಅದಕ್ಕೂ ಕಷ್ಟ ಪಟ್ಟದ್ದು ಸುಳ್ಳಲ್ಲ. ಒಂದು ವೇಳೆ ರಸ್ತೆಯಲ್ಲಿ ಹೋಗುವಾಗ ಆಕ್ಷಿ ಮಾಡಿದರೆ ಹಿಂದೆ ಬರುವವ ದುರುಗುಟ್ಟಿ ನೋಡಿ ಬಲ ಬದಿಯಿಂದ ಹೋಗುವುದು. ಅದೂ ಸಾಕಾಗಿಲ್ಲ ಅಂದರೆ ನೆರೆ ಮನೆಯವರದ್ದು ಇನ್ನೊಂದು ಗೋಳು. ಅಲ್ಲ ನಿಮ್ಮೆಜಮಾನ್ರು ಮೊನ್ನೆಯಿಂದ ಆಕ್ಷಿ ಬಿಡ್ತಿದ್ದಾರಲ್ಲ. ವೈದ್ಯರ ಹತ್ತಿರ ತೋರಿಸುವುದು ಒಳ್ಳೆಯದು ಯಾವುದಕ್ಕೂ ಅನ್ನಬೇಕೆ. ಯಾರಿಗೆ ಬೇಕು ಗ್ರಹಚಾರ! ಇದೂ ಹೋಗಲಿ, ಹೊರಗೆ ತಿರುಗುವ ಅಂದರೆ ಅಯ್ಯಬ್ಬ. ಅದೊಂದು ಭಗೀರಥ ಪ್ರಯತ್ನವೇ ಸರಿ. ಹೊರಗೆ ಕಾಲಿಟ್ಟರೆ ಬಾಸುಂಡೆ ಬೀಳುವುದು ಗ್ಯಾರಂಟಿ. ಮನೆಯೊಳಗೆ ಹಾಯಾಗಿ ಇರೋಣ ಎಂದರೆ, ಗೊತ್ತಲ್ಲ ಇನ್ನೊಂದು ಲಾಕ್ ಡೌನ್. ಅಲ್ರಿ ಇಪ್ಪತ್ತ ನಾಲ್ಕು ಗಂಟೆ ಮನೆಯಲ್ಲಿಯೇ ಇರ್ತೀರಿ, ನನಗೆ ಏನಾದ್ರೂ ಸಹಾಯ ಮಾಡಬಾರದಾ ಅಂತ ಮಡದಿಯ ಗೋಳು. ಅಯ್ಯೋ ಒಂದಾ ಎರಡಾ! ಲಾಕ್ಡೌನ್ ಅಂದ ಮೇಲೆ ಶಾಲೆಗೂ ರಜೆ. ಅಂದ ಮೇಲೆ ಮುಗಿಯಿತು. ಮಕ್ಕಳದೇ ಸಾಮ್ರಾಜ್ಜ್ಯ. ಬೆಳಿಗ್ಗೆಯಿಂದ ಸಂಜೆ ವರೆಗೆ ಕಾರ್ಟೂನ್ ನೋಡುವುದರಲ್ಲಿಯೇ ಮುಳುಗಿರ್ತ್ತಾರೆ. ಸಂಜೆ ಟಿ. ವಿ ನೋಡುವ ಅಂದರೆ ದಾರಾವಾಹಿಗಳ ಆರ್ಭಟ. ಎಲ್ಲಿಯಾದ್ರೂ ಚಾನೆಲ್ ಚೇಂಜ್ ಆಯಿತೋ ಅಲ್ಲಿಗೆ ನಮ್ಮ ಕಥೆ ಮುಗಿಯಿತು!. ಒಟ್ಟಿಗೆ ನಮ್ಮ ಕಥೆ ಹೇಗೆಂದರೆ ಕಲ್ಲಪ್ಪ ಗುಂಡಪ್ಪ ನಡುವೆ ಮೆಣಸಪ್ಪ ಚಟ್ಣಿ ಅಂದ ಹಾಗೆ ಆಯಿತು.
ಇನ್ನು ನಾವು ಕೆಲಸ ಮಾಡುವ ಕಛೇರಿಗೆ ಬಂದರೆ ಅಲ್ಲಿ ಇನ್ನೊಂದು ಗಮ್ಮತ್ತು. ಯಾರಾದ್ರೂ ಒಬ್ಬ ಸೀನಿದ ಅಂದರೆ ಉಳಿದವರೆಲ್ಲ ಗಡ ಗಡ. ರೀ ಸ್ವಲ್ಪ ದೂರ ಹೋಗಿ ಆಕ್ಷಿ ಬಿಡ್ರಿ. ನಿಮಗೆ ಅಷ್ಟೂ ಗೊತ್ತಾಗಲ್ವ ಅನ್ನೋ ಬೈಗುಳ. ಇನ್ನು ಇದೇ ಕಾರಣಕ್ಕೆ ರಜೆ ತೆಗೆದುಕೊಡವರೆಷ್ಟೋ ಜನ ಇದ್ದಾರೆ. ನೋಡಿ ಸಾರ್. ನನಗೆ ಮೊನ್ನೆಯಿಂದ ಸ್ವಲ್ಪ ಶೀತ ಇದೆ, ಹಾಗೂ ಸ್ವಲ್ಪ ಮೈ ಬಿಸಿಯೂ ಕೂಡ ಇದೆ. ಮುಂದೆ ಕಚೇರಿಯಲ್ಲಿ ಏನಾದ್ರು ಸಮಸ್ಯೆ ಆದರೆ ನಾನು ಜವಾಬ್ದಾನಲ್ಲ ಅಂದರೆ ಮುಗಿಯಿತು. ಅವನಿಗೆ ರಜೆ ಗ್ಯಾರಂಟಿ. ಇದಕ್ಕೆ ನಾನಿಟ್ಟ ಹೆಸರು ಕೊರೋನ ಜ್ವರ! ಇವಲ್ಲಾ ಒಂದು ರೀತಿಯ ತಮಾಷೆಯಾದರೆ, ನಮ್ಮ ಮಡದಿಯನ್ನು ಹೊರಗೆ ಕರೆದುಕೊಂಡು ಹೋಗುವುದು ಇದೆಯಲ್ಲ ಅದೂ ಇನ್ನೂ ತಮಾಷೆ ಯಾಗಿದೆ. ಪತ್ರಿಕೆಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹೆಂಡತಿ ಅದಲು ಬದಲು ಆದ ವಿಷಯ ಓದಿದ ಮೇಲೆ ಈ ಕಷ್ಟ ಶುರು ಆದದ್ದು. ಹಾಗಾಗಿ ಹೆಣ್ಣು ಮಕ್ಕಳು ಈಗ ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ತಮ್ಮ ಗಂಡಂದಿರಿಗೆ ತಮ್ಮ ಮುಖ ಕವಚವನ್ನು ತೆಗೆದು ತೋರಿಸಿಯೇ ಮುಂದೆ ಹೋಗುವಷ್ಟು ಜಾಣರಾಗಿದ್ದಾರೆ. ಇಲ್ಲದಿದ್ದರೆ ಗೊತ್ತಲ್ಲ. ಅದಕ್ಕೆ.
ಗಂಡದಿರು ಇತ್ತೀಚೆಗೆ ಹೆಂಡತಿ ಮಾಡಿದ ಅಡುಗೆ ಚೆನ್ನಾಗಿಲ್ಲ ಅಂತ ಹೇಳೋ ಹಾಗಿಲ್ಲ ಮಾರಾಯ್ರೆ! ಯಾಕೆ ಹೇಳಿ, ರುಚಿ ಮತ್ತು ವಾಸನೆ ಗೊತ್ತಗಲ್ಲ ಅಂದರೆ ಅದು ಕೊರೋನದ ಇನ್ನೊಂದು ಲಕ್ಷಣ ಅಂತ ಪತ್ರಿಕೆಯಲ್ಲಿ ಬಂದದ್ದೇ ತಡ, ಹೆಂಡತಿ ಏನು ಮಾಡಿದರೂ ತುಟಿ ಪಿಟಕ್ ಮಾಡದೆ ತಿನ್ನುವಷ್ಟು ಗಂಡಂದಿರು ಜಾಣರಾಗಿದ್ದಾರೆ! ಇನ್ನು ಹೋಟೇಲಿನ ವಿಷಯ ಬಂದರೆ ಅಲ್ಲಿ ಇನ್ನು ಇನ್ನೂ ಮಜಾ ಇದೆ. ಮೊದಲೆಲ್ಲಾ ಹೋಟೇಲಿಗೆ ಹೋದರೆ ನಾವು ಆರ್ಡರ್ ಮಾಡಿದ ಮೇಲೆ ಸುಮಾರು ಹೊತ್ತು ನಂತರ ಸಪ್ಲೈ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿಯೇ ಬೇರೆ. ಮೊದಲೆ ಗಿರಾಕಿ ಇಲ್ಲ. ಯಾರಾದ್ರು ಒಬ್ಬ ಗಿರಾಕಿ ಹೋದರೆ ಸಾಕು. ಯಾವ ಫೈವ್ ಸ್ಟಾರ್ ಹೋಟೇಲ್‌ಗೆ  ಹೋದರೂ ಇಷ್ಟು ಉಪಚಾರ ಸಿಗಲಿಕ್ಕೆ ಇಲ್ಲ. ಹೇಳಿದ ಕೂಡಲೇ ತಿಂಡಿ ರೆಡಿ. ಅಥಿತಿ ದೇವೋಭವ.
ಇವಿಷ್ಟು ತಮಾಷೆಯ ಸಂಗತಿಗಳಾದರೆ, ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಕೊರೋನ ಅಂತಹ ಅಪಾಯವನ್ನು ತಂದಿಲ್ಲ ಅಂತ ಹೇಳ ಬಹುದು. ಕೊರೋನ ಎಲ್ಲರ ಕುಟುಂಬವನ್ನು ಒಂದು ಮಾಡಿದೆ. ಎಷ್ಟೋ ಜನ ದೊಡ್ಡ ದೊಡ್ಡ ಬಂಗಲೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿರುವ ತಂದೆ ತಾಯಂದಿರಿಗೆ ಮಗ, ಮಗಳು, ಮೊಮ್ಮಕ್ಕಳೊಂದಿಗೆ ಕೂಡಿ ಬಾಳುವ ಸುಯೋಗವನ್ನು ತಂದಿದೆ ಅಂತ ಹೇಳಬಹುದು. ಅಮೇರಿಕ, ಲಂಡನ್ ನಲ್ಲಿ ಕೆಲಸ ಮಾಡ ಬೇಕು ಎನ್ನುವ ಹುಚ್ಚನ್ನು ಈಗಿನ ಯುವಕ ಯುವತಿಯರಿಗೆ ಕೊರೋನ ಬಿಡಿಸಿದೆ. ನಮ್ಮ ಮಾತೃ ಭೂಮಿ ಭಾರತ ಅನ್ನುವ ಅರಿವು ಮೂಡಿಸಿದೆ. ಹಾಗೆಯೇ ಬರಿಯಲ್ಲಿಕ್ಕೆ ಹೋದರೆ ಸುಮಾರು ಇದೆ. ಆದರೆ ಹಾಳಾದ್ದು ಶೀತ ಬಿಡುವುದಿಲ್ಲ. ಆಕ್ಷೀ………..

Leave a Comment