ದೇಯಿಬೈದೆತಿ : ಸತ್ಯ ಉಂಡು..ಏ… ಧರ್ಮ ಉಂಡು..ಏ

ಇತ್ತೀಚಿನ ಸಿನೆಮಾಗಳನ್ನು ನೀವು ನೋಡುತ್ತಿರಾ? ನೋಡುವವರಾದರೆ ಅವುಗಳ ಕಥೆ ಹೇಳಬಲ್ಲಿರಾ? ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 200ಚಿತ್ರಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ನಿಮಗಿಷ್ಟವಾದ 10 ಚಿತ್ರಗಳನ್ನು ಹೆಸರಿಸುತ್ತೀರಾ? ಆ ಚಿತ್ರಗಳ ಯಾವ ಸನ್ನಿವೇಶ ನಿಮ್ಮನ್ನು ಭಾವನಾತ್ಮಕವಾಗಿ ಕಾಡಿತು.? ನಿಮ್ಮಿಷ್ಟದ ಚಿತ್ರಗಳಲ್ಲಿ ಬದುಕಿನ ಮಾನವೀಯ ಮೌಲ್ಯಗಳನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ? ಯೋಚಿಸುತ್ತಿದ್ದೀರಾ? ಉತ್ತರಿಸಲು ಸ್ವಲ್ಪ ಕಷ್ಟವಾದರೆ ನೀವು ದೇಯಿಬೈದೆತಿ ಸಿನೆಮಾ ನೋಡಿ ನಿಮ್ಮನಿಸಿಕೆಗಳನ್ನು ಕಮೆಂಟ್ ಮಾಡಿ. ಇದು ತುಳು ಭಾಷೆಯಲಿರುವ ಚಿತ್ರ. ಕನ್ನಡದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತದೆ.


ಚಿತ್ರದ ಆರಂಭದಿಂದ ಅಂತ್ಯದವರೆಗೂ ತುಳುನಾಡಿನ ಮಣ್ಣಿನ ಸೊಗಡಿನ ಪ್ರತೀ ದೃಶ್ಯವನ್ನು ಪ್ರೇಕ್ಷಕನ ಹೃದಯ ಬಸಿದುಕೊಳ್ಳುತ್ತದೆ. ಇಡೀ ಚಿತ್ರ ನಿಗೂಢವಾದ ಕಥಾ ಹಂದರದಲ್ಲೇ ಸಾಗುತ್ತದೆ. ಒಂದು ರೀತಿಯ ಮಣ್ಣಿನ ಸೊಗಡಿನ ಸಂಗೀತ ಅಲ್ಲಲ್ಲಿ ವಿಜೃಂಭಿಸುತ್ತದೆ. ನಿಮಗೆ ದೊರೆತರೆ ಈ ಹಾಡೊಂದನ್ನು ಕೇಳಿ, ಸತ್ಯ ಉಂಡು..ಏ.. ಧರ್ಮ ಉಂಡು..ಏ.., ಕೇಳುತ್ತಲೇ ಒಂದು ಬಗೆಯ ದೈವತ್ವ ನಮ್ಮಲ್ಲಿ ಅರಳಿ ನಿಲ್ಲುತ್ತದೆ. ನೀವು ಸಂಗೀತ ಪ್ರೇಮಿಗಳಾದರೇ ಆ ಹಾಡಿನ ತುಣುಕನ್ನು ಯೂಟ್ಯೂಬ್ ನಲ್ಲಿ ಹುಡುಕಿಯೇ ಹುಡುಕುತ್ತೀರಿ. ಮಣಿಕಾಂತ್ ಕದ್ರಿಯವರ ಹಿನ್ನೆಲೆ ಸಂಗೀತವಂತೂ ಇಡೀ ಕಥೆಯ ತಿರುಳಿನ ಆಳಕ್ಕಿಳಿದು ದೃಶ್ಯಗಳನ್ನು ಎತ್ತಿ ಹಿಡಿಯುತ್ತದೆ. ಮುಖ್ಯ ಪಾತ್ರಗಳ ಬಗ್ಗೆ ಆಮೇಲೆ ಹೇಳುತ್ತೇನೆ. ಇದರಲ್ಲಿ ಬರುವ ಕೊರಗರ ತಂಡದ ಯಜಮಾನನ ಪಾತ್ರದಲ್ಲಿ ಆ ಕಲಾವಿದ ಅದೆಷ್ಟು ಮಗ್ನನಾಗಿ ಅಭಿನಯಿಸಿದ್ದಾರೆಂದರೆ ಅವರ ನಡಿಗೆ, ನೋಡುವ ನೋಟಕ್ಕೆ ಕರುಳು ಚಿವುಟಿದಂತಾಗುತ್ತದೆ. ಹಿಂದಿನ ಕಾಲದ ಮನೆಗೆ ಹಾಕಲಾದ ಸೆಟ್, ವಸ್ತ್ರಾಲಂಕಾರ, ಹುಲ್ಲಿನ ಮನೆ, ಹುಲ್ಲಿನ ರಾಶಿ, ಮಂಚ ವಿವಿಧ ಬಗೆಯ ಪುರಾತನ ಪರಿಕರಗಳು ಆ ಕಾಲದ ಸಂಸ್ಕೃತಿಯನ್ನು, ಬಡತನದ ಬೇಗೆಯನ್ನೂ ಹಸಿಹಸಿಯಾಗಿ ಜನರ ಮುಂದಿಡುತ್ತಾ ಕಲಾ ನಿರ್ದೇಶನದ ಕಸರತ್ತನ್ನು ಗೊಚರಿಸುತ್ತಾ ಸಾಗುತ್ತದೆ.


ಮುಖ್ಯ ಪಾತ್ರವಾದ ದೇಯಿಬೈದೆತಿ, ನಾಟಿ ವೈದ್ಯೆ. ರೋಗಗಳಿಗೆ ಈ ತಾಯಿಯ ಔಷಧಿ ರಾಮಬಾಣ. ಅಸ್ಪೃಶ್ಯತೆಯನ್ನು ದಿಕ್ಕರಿಸಿ ಸಮಾಜದ ಎಲ್ಲ ವರ್ಗದವರಲ್ಲಿ ಕರುಣೆ, ಮಾನವೀಯತೆಯನ್ನೇ ಕಾಣುವ ದೇಯಿ ಬೈದೆತಿಯನ್ನು ಹೊತ್ತು ತರಲು ರಾಜ ತನ್ನ ರಾಜದಂಡಿಗೆ ಕಳುಹಿಸುವ ದೃಶ್ಯ ಮೈ ನವಿರೇಳಿಸಿತ್ತದೆ. ಇನ್ನುಳಿದಂತೆ ಚೇತನ್ ರೈ, ಸೀತಾಕೋಟೆ, ಮಠ ಕೊಪ್ಪಳ ಮುಂತಾದ ಕಲಾವಿದರು ಅಭಿನಯಿಸಿರುವ ಉಳಿದ ಎಲ್ಲಾ ಪಾತ್ರಗಳು ಎರಡು ಗಂಟೆ ಐವತ್ತು ನಿಮಿಷ ನಮ್ಮನ್ನು ಕಥೆಯಲ್ಲಿ ಮುಳುಗಿಸುತ್ತಾ… ಅಳಿಸುತ್ತಾ, ಹೃದಯ ಕಲಕುತ್ತವೆ. ನಮ್ಮ ಸಂಸ್ಕೃತಿಯ ಭಾಗವೇ ಆದ ತುಳು ನಾಡಿನ ಸಂಸ್ಕೃತಿಯ ದೈವಗಳ ಕಾರಣಿಕದ ಸತ್ಯವನ್ನು ಮನದಟ್ಟು ಮಾಡಿಸುತ್ತಾ, ದೈವೀ ಮಾಯೆಯ ಮುಂದೆ ಮನುಷ್ಯ ಮಂಡಿ ಊರಲೇಬೇಕು. ಕಾಲ ತನ್ನೆಲ್ಲಾ ಸಮಸ್ಯೆಗಳನ್ನು ಕಾಲದಲ್ಲಿಯೆ ಉತ್ತರಿಸುತ್ತದೆ ಎಂಬ , ಕೌತುಕವಾದ ಸತ್ವಯುತ ಚಿತ್ರವನ್ನು ನಿರ್ದೇಶಿಸಿದವರು ನಮ್ಮವರೇ ಆದ ಸುರ್ಯೋದಯ್ ಪೆರಂಪಳ್ಳಿ. ಸುಮಾರು ಐದುನೂರು ವರ್ಷಗಳ ಹಳೆಯ ಕಥೆಯನ್ನು ಸಾಕಷ್ಟು ಅಧ್ಯಯನ ನಡೆಸಿಯೇ ದೇಯಿಬೈದೆತಿ ಎಂಬ ಗಟ್ಟಿಗಿತ್ತಿಯ ಯಶೋಗಾಥೆಯನ್ನು ಚಿತ್ರವನ್ನಾಗಿಸಿದರು. ತನ್ನ ಸಾರಥ್ಯದ
ಚಿತ್ರದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ತೆಗೆಯುವದರಲ್ಲಿ ಯಶಸ್ವಿಯಾದ ಸೂರ್ಯೋದಯ್ ಚಿತ್ರರಂಗದಲ್ಲಿ ನೆಲೆನಿಂತು ಹೊಸ ಸದಭಿರುಚಿಯ ನಿರ್ದೇಶಕರಾಗುವುದರಲ್ಲಿ ಅನುಮಾನವಿಲ್ಲ.. ಅಂದಹಾಗೆ ಈ ತಾಯಿ ದೇಯಿಬೈದೆತಿಯ ಮಕ್ಕಳೆ, ಇತಿಹಾಸ ಪುರುಷರಾಗಿ ಇಂದಿಗೂ ‌ಪ್ರಸಿಧ್ದರಾದ ಕೋಟಿಚೆನ್ನಯರು..!

ಚಿತ್ರದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ತೆಗೆಯುವದರಲ್ಲಿ ಯಶಸ್ವಿಯಾದ ಸೂರ್ಯೋದಯ್ ಚಿತ್ರರಂಗದಲ್ಲಿ ನೆಲೆನಿಂತು ಹೊಸ ಸದಭಿರುಚಿಯ ನಿರ್ದೇಶಕರಾಗುವುದರಲ್ಲಿ ಅನುಮಾನವಿಲ್ಲ.. ಅಂದಹಾಗೆ ಈ ತಾಯಿ ದೇಯಿಬೈದೆತಿಯ ಮಕ್ಕಳೆ, ಇತಿಹಾಸ ಪುರುಷರಾಗಿ ಇಂದಿಗೂ ‌ಪ್ರಸಿಧ್ದರಾದ ಕೋಟಿಚೆನ್ನಯರು..!

ರಾಘವೇಂದ್ರ_ಹಿರಿಯಣ್ಣ

Leave a Comment