ಕರಾವಳಿಯುದ್ದಕ್ಕೂ ಗಾಂಜಾ ಘಮಲು!!

ಹುಷಾರ್ ಇಲ್ಲಿ ಸ್ಕೋರ್ ಬೇಕು ಎಂದರೆ ಗಾಂಜಾ ಸಿಗೊತ್ತೆ!

ಕರಾವಳಿ ಗಾಂಜಾದ ಅಮಲಲ್ಲಿ ತೇಲುತ್ತಿದೆ! ರಾಜಕಾರಣಿಗಳು ಅಧಿಕಾರದ ಅಮಲಲ್ಲಿ ತೇಲುತ್ತಿದ್ದಾರೆ! ಅಧಿಕಾರಿಗಳು ದುಡ್ಡಿನ ಅಮಲಲ್ಲಿ ತೇಲುತ್ತಿದ್ದಾರೆ ಹಾಗಿದ್ದರೆ ಈ ವಿಷ ವರ್ತುಲದಿಂದ ಕರಾವಳಿಯನ್ನ ರಕ್ಷಿಸುವವರು ಯಾರು? ಗಾಂಜಾ ಮಾಫಿಯಾದ ಕಿಂಗ್ ಪಿನ್ನುಗಳ ಹಿಂದೆ ನಿಂತಿದೆಯಾ ಕೇರಳಾ ಸರ್ಕಾರಾ? ಗಾಂಜಾ ಗಂಧ ಎಲ್ಲೆಂದರಲ್ಲಿ ಹಬ್ಬಿ ಹರಡಲು ಕಾರಣ ಅರಣ್ಯ ಅಧಿಕಾರಿಗಳಾ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಲೇ ಹೋಗುತ್ತಿದೆ! ಆದರೆ ಇದಕ್ಕೆಲ್ಲ ಉತ್ತರ ಕೊಡಬೇಕಾದವರು ಯಾರು?

ಯುವ ಜನತೆಯನ್ನ ತೀವ್ರವಾಗಿ ದಿಕ್ಕುತಪ್ಪಿಸುತ್ತಿರುವುದು, ಮೊಬೈಲ್, ಮಧ್ಯ, ಮತ್ತು ಮುಖ್ಯವಾಗಿ  ಮಾದಕ ವ್ಯಸನ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಯುವಕರಿಗೆ ನಾವೇನು ಕಮ್ಮಿ ಇಲ್ಲ ಎನ್ನುವ ರೇಂಜಿನಲ್ಲಿ ಹುಡುಗಿಯರೂ ಅದೆಲ್ಲದರಲ್ಲೂ ಲೀಲಾಜಾಲವಾಗಿದ್ದಾರೆ. ಅದರಲ್ಲೂ ರಾಜಾರೋಷವಾಗಿ ಹೊಗೆಬತ್ತಿ ಎಳೆಯುವುದು ಇಂದೇನು ಅಚ್ಚರಿ ಅಂತನ್ನಿಸುವುದಿಲ್ಲ!

ಕಾಲೇಜು ಹುಡುಗರು ಬಹುತೇಕವಾಗಿ ಬಳಸುವುದು ಗಾಂಜಾವನ್ನ! ಬೇರೆ ದುಬಾರಿ ಬೆಲೆಯ ಡ್ರಗ್ಸ್ ಅವರ ಕೈಗೆ ನಿಲುಕದ ಎತ್ತರದ ಬೆಲೆಯುಳ್ಳದ್ದಾದ್ದರಿಂದ ಗಾಂಜಾ ಅಮಲಿಗೆ ಬೇಗನೆ ಹುಡುಗರು ಬಲಿಯಾಗುತ್ತಿದ್ದಾರೆ. ಅವರಿಗೇ ಗೊತ್ತಿರುವ ಸಣ್ಣ ಸಣ್ಣ ಬೀಡಾ ಅಂಗಡಿಯಲ್ಲಿ, ಹೂವಿನ ಅಂಗಡಿಯಲ್ಲಿ ಗಾಂಜಾ ತುಂಬಿಸಿದ್ದ ಸಿಗರೇಟುಗಳು ದೊರಕುತ್ತವೆ! ಮೊದಲೆಲ್ಲ ಅದು ನೆರೆಯ ರಾಜ್ಯ ಕೇರಳದಿಂದ ರೈಲಿನಲ್ಲಿ ಬಂದು ಮಂಗಳೂರು ತಲುಪುತ್ತಿತ್ತು ಎನ್ನಲಾಗುತ್ತಿತ್ತು! ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಮಂಗಳೂರಿನಲ್ಲಿ ಗಾಂಜಾ ಮಾಫಿಯಾವೇ ಕೆಲಸ ಮಾಡುತ್ತಿತ್ತು. ಅದಕ್ಕಾಗಿಯೇ ಗಾಂಜಾ ಪೆಡ್ಲರ್ ಗಳ ಕೊಲೆಯ ಮೇಲೆ ಕೊಲೆ ನಡೆಯುತ್ತಿತ್ತು. ಗಾಂಜಾವನ್ನ ವ್ಯವಸ್ಥಿತವಾಗಿ ಅಲ್ಲಿಂದ ಅಲ್ಲಿಗೆ ತಲುಪಿಸುವುದು ಮುಸ್ಲೀಮ್ ಮಾಫಿಯಾದವರ ಕೆಲಸ. ಗಾಂಜಾ ಕಿಂಗ್ ಪಿನ್ ಗಳೇ ಮುಸ್ಲೀಮ್ ಭೂಗತ ಜಗತ್ತಿನ ಜೊತೆಗಿನ ಲಿಂಕ್ ಇರಿಸಿಕೊಂಡವರೇ ಆಗಿದ್ದಾರೆ. ಕೆಲವು ಕಾಲೇಜು ಹುಡುಗರನ್ನೂ ಈ ದಂಧೆಯಲ್ಲಿ ಮಟ್ಟಸವಾಗಿ ಬಳಸಿಕೊಳ್ಳಲಾಗುತ್ತದೆ..

ಪೊಲೀಸಿಂಗ್ ಜೋರಾಗಿದೆ

ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ

ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಈ ಭಾಗಕ್ಕೆ ಐಜಿಪಿ ಆಗಿ ನಿಯುಕ್ತಿಗೊಂಡ ದಿನವೇ ಇಲ್ಲಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದು ಇಲ್ಲಿನ ರೌಡಿ ಪಾಳಯದ ಹುಟ್ಟಡಗಿಸಿ, ಡ್ರಗ್ಸ್ ಮಾಫಿಯಾದವರ ಮಗ್ಗುಲು ಮುರಿಯಿರಿ ಎಂದು. ಹಾಗಾಗಿ ಎಲ್ಲಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೇ ಡ್ರಗ್ಸ್ ಮಾಫಿಯಾದ ವಿರುದ್ದ ಸಾರ್ವಜನಿಕವಾಗಿಯೇ ಮ್ಯಾರಾಥಾನ್ ಗಳನ್ನೂ ನಡೆಸಿದರು. ಜನಜಾಗೃತಿ ಸಭೆಯನ್ನ ಆಯೋಜಿಸಿದರು. ಗಾಂಜಾದ ಬಗ್ಗೆ ಮಾಹಿತಿ ಕೊಟ್ಟವರಿಗೆ ಗುಪ್ತವಾಗಿ ಬಹುಮಾನಗಳನ್ನ ನೀಡಿದರು. ಅಲ್ಲಲ್ಲಿ ಸಾವಿರಾರು ಖಬರಿಗಳನ್ನ ನೇಮಕ ಮಾಡಿಕೊಂಡರು. ಗಾಂಜಾ ದಂಧೆಯನ್ನ ಮಟ್ಟ ಹಾಕಲು ಪೊಲೀಸರು ಹಳೆ ಪಾತಕಿಗಳನ್ನೂ ಮಾತಾಡಿಸಿ ಅವರಿಂದಲೂ ಮಾಹಿತಿ ಪಡೆದು ಕ್ರಿಯಾಶೀಲರಾದರು. ಅರುಣ್ ಚಕ್ರವರ್ತಿಯವರ ಆಸಕ್ತಿಯ ಕಾರಣಕ್ಕೆ ಒಂದು ಹಂತಕ್ಕೆ ಗಾಂಜಾ ಮಾಫಿಯಾ ಹದ್ದು ಬಸ್ತಿಗೆ ಬಂತು. ಈ ವಿಷಯದಲ್ಲಿ ಪೊಲೀಸರನ್ನೂ ದೂರುವಂತಿಲ್ಲ. ಕರಾವಳಿಯಲ್ಲಿ ಒಮ್ಮಿಂದೊಮ್ಮೆಗೇ ಗಾಂಜಾ ಪೆಡ್ಲಿಂಗ್ ನೆಲೆಕಳೆದುಕೊಳ್ಳತೊಡಗಿತು. ಬೀಡಿ ಎಲೆಯ ಲೋಡಿನಲ್ಲಿ, ಹೂವಿನ ಮೂಟೆಯ ಅಡಿಯಲ್ಲಿ, ವೀಳ್ಯದ ಎಲೆಯ ಜೊತೆಗೆ, ಹುಲ್ಲಿನ ಲಾರಿಗಳಲ್ಲೆಲ್ಲಾ ಗಾಂಜಾ ಒಂದೆಡೆಯಿಂದ ಇನ್ನಿಂದೆಡೆಗೆ ರವಾನೆಯಾಗುತ್ತಿದ್ದವು. ಬೆಳ್ಳಂಬೆಳಿಗ್ಗೆ ತಲುಪುವ ಪೇಪರ್ ಗಾಡಿಯ ಡ್ರೈವರ್ ಗಳಿಗೆ ಕಾಸು ಕೊಟ್ಟು ಪಾರ್ಸೆಲ್ ಕಳುಹಿಸುತ್ತಿದ್ದರು. ಪೇಪರ್ ಗಾಡಿಗಳನ್ನ ಯಾರೂ ಚೆಕ್ ಮಾಡುತ್ತಿರಲಿಲ್ಲ. ಇನ್ನು ಕೆಲವು ಅಂಬುಲೇನ್ಸ್ ವಾಹನಗಳನ್ನೇ ಬುಕ್ ಮಾಡಿ ಗಾಂಜ ರವಾನೆಗೆ ಪ್ರಮುಖ ಸಂಚಾರಿಯನ್ನಾಗಿ ಬಳಸಿಕೊಂಡಿದ್ದರು. ಒಂದಲ್ಲ ಒಂದು ಹಂತದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಈ ದಂಧೆ ನಿರಂತರವಾಗಿ ನಡೆಯುತ್ತಲೇ ಇತ್ತು!

ಕರಾವಳಿ ಪೊಲೀಸರು ಅಲರ್ಟ್ ಆಗುವ ತನಕವೂ ನೇರಾ ನೇರವಾಗಿ ನಡೆಯುತ್ತಿದ್ದ ದಂಧೆ, ಪೊಲೀಸರು ಸೊಂಟದ ಬೆಲ್ಟು ಕಟ್ಟಿಕೊಂಡು ಬೀದಿಗಿಳಿದ ನಂತರ ಬೇರೆ ಬೇರೆ ಆಯಾಮಗಳಲ್ಲಿ ನಡೆಯತೊಡಗಿತು.. ಕೇವಲ ಪೊಲೀಸರೊಬ್ಬರಿಂದ ಮಾತ್ರವೇ ಈ ಅಗಾಧವಾದ ಮಾಫಿಯಾಕ್ಕೆ ಬ್ರೇಕ್ ಹಾಕುವುದು ಸಾಧ್ಯವಿಲ್ಲದ ಮಾತು ಎನ್ನುವುದು ಖುದ್ದು ಪೊಲೀಸರಿಗೂ ಅರ್ಥವಾಗತೊಡಗಿತು..

ರಬ್ಬರ್ ತೋಟದೊಳಗೆ ಗಾಂಜಾ!

ಗಾಂಜಾ ಗಿಡ

ಹಾಗಂತ ಸುದ್ದಿಯೊಂದು ಹುಟ್ಟಿದ್ದು ಸುಮ್ಮನೆಯಲ್ಲ! ಗಾಂಜ ಪ್ರಕರಣದಲ್ಲಿ ಮಟ್ಟೆ ಅಪ್ಪಚ್ಚು ಎಂಬಾತನನ್ನ ಬಂಧಿಸಿ ತರುವ ಪೊಲೀಸರು ಅವನನ್ನ ಥಳಿಸಿ ಥಳಿಸಿಯೇ ಕೊಂದರು ಎನ್ನುತ್ತದೆ ಮುದೂರು ಎನ್ನುವ ಹಳ್ಳಿ! ಮಟ್ಟೆ ಅಪ್ಪಚ್ಚುವದ್ದು ಲಾಕಪ್ ಡೆತ್ತಾ? ಹಾಗಂತ ಅದೆಲ್ಲಿಯೂ ಪೊಲೀಸ್ ಫೈಲಿನಲ್ಲಿ ದಾಖಲಾಗಿಲ್ಲ! ಅನಾರೋಗ್ಯದಿಂದ ಮಟ್ಟೆ ಅಪ್ಪಚ್ಚು ಸತ್ತ ಎನ್ನುತ್ತದೆ ವರದಿ! ಹಾಗಿದ್ದರೆ ದಾಖಲೆಗಳೆವೂ ಸತ್ಯವೇ? ಅದಲ್ಲಿದಿದ್ದರೆ ಸತ್ಯ ಎಂದರೆ ಯಾವುದು? ನಡೆದಿದ್ದೆಲ್ಲವೂ ವಿಡಿಯೋ ಚಿತ್ರಿಕರಣ ಮಾಡಲು ಸಾಧ್ಯವೆ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತವೆ. ಉಡುಪಿ ಜಿಲ್ಲೆಯ ಮುದೂರು ಕೊಲ್ಲೂರಿನ ಸನಿಹದಲ್ಲಿದೆ. ಸುತ್ತಲೂ ಹಬ್ಬಿ ನಿಂತಿರುವ ಧಟ್ಟವಾದ ಕಗ್ಗಾಡು. ಸೂರ್ಯನ ಬೆಳಕೂ ಭುವಿಗೆ ತಾಕದಂತಹ ಜಾಗೆಗಳವು. ಅಲ್ಲಿಗೆ ಅಮರಿಕೊಂಡದ್ದು ಕೇರಳಿಗರು. ಲ್ಯಾಂಡ್ ಡೀಲಿಂಗ್ ಜೋರಾಗಿ ನಡೆಯುತ್ತಿದ್ದ ಕಾಲದಲ್ಲಿ ಕೇರಳಿಗರು ಕೊಲ್ಲೂರು ಕಡೆ ಮುಖ ಮಾಡಿದರು. ಮೊದಲು ಇಲ್ಲಿ ಬಂದು ರಬ್ಬರ್ ಬೆಳೆಯಲು ಜಾಗೆಗಳನ್ನ ಇಪ್ಪತ್ತು ಮೊವ್ವತ್ತು ವರ್ಷಗಳಿಗೆ ಲೀಸಿಗೆ ಪಡೆದರು. ರಬ್ಬರೂ ಬೆಳೆದರು, ಕಲ್ಲು ಕೋರೆ ಮಾಡಿದರು. ಕೈ ತುಂಬಾ ಕಾಸಾಯಿತು ಕೊನೆಗೆ ಆ ಜಾಗೆಗಳನ್ನೇ ಮೂರುಕಾಸಿಗೆ ಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡು ಬಿಟ್ಟರು. ಇವತ್ತು ಕೊಲ್ಲೂರು ಸನಿಹದ ಮುದೂರಿನಲ್ಲಿ ಕನ್ನಡ ಮಾತಾಡುವವರಿಗಿಂತಲೂ ಮಲೆಯಾಳಮ್ ಮಾತಾಡುವವರೇ ಹೆಚ್ಚಿದ್ದಾರೆ. ಅವತ್ತು ಜಾಗ ಕೊಟ್ಟವರೆಲ್ಲಾ ಇಂದು ಅದೇ ಮೆಲೆಯಾಳಿಗಳ ತೋಟದಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ನೂರು, ಇನ್ನೂರು, ಮುನ್ನೂರು ಅಷ್ಟೇ ಏಕೆ ಸಾವಿರಾರು ಎಕರೆ ತೋಟಗಳಿವೆ ಅಲ್ಲಿ! ಅದರ ಸುತ್ತಲೂ ಕರೆಂಟು ಹಾಯಿಸಲಾದ ಬೇಲಿಗಳಿವೆ. ಒಳಗೆ ಯಾರಿಗೂ ಪ್ರವೇಶವಿಲ್ಲ! ಪರವಾನಿಗೆ ಇಲ್ಲದೆ ಹೋದವ ವಾಪಾಸ್ ಬರುತ್ತಾನಾ? ಗೊತ್ತೇ ಆಗುವುದಿಲ್ಲ! ಹಾಗಿನ ತೋಟದ ನಡುವಿನಲ್ಲಿ ನೂರಾರು ಎಕರೆ ಜಾಗದಲ್ಲಿ ಗಾಂಜ ಬೆಳೆಯಲಾಗುತ್ತದೆ ಎನ್ನುತ್ತದೆ ಸುದ್ದಿ! ಇದನ್ನ ನೆಚ್ಚಿಕೊಂಡು ಹುಂಬ ಧೈರ್ಯದೊಂದಿಗೆ ಆ ತೋಟದ ಒಳಗೆ ನುಗ್ಗುಲು ಯತ್ನಿಸಿದರೆ ಆತ ಮತ್ತೆ ಮರಳಿ ಬಾರದಿದ್ದರೆ? ಸುದ್ದಿ ಕೊಡಲಿಕ್ಕೂ ಯಾರೂ ಇರಲಾರರು. ಇದರ ಒಳಗೆ ನುಗ್ಗಲಿಕ್ಕೆ ಪೊಲೀಸರು ಸಿದ್ದರಿದ್ದಾರಾ?

ಕೊಡಚಾದ್ರಿ ತಪ್ಪಲಿನಲ್ಲಿ ಗಾಂಜಾ!

ಕೊಡಚಾದ್ರಿ ತಪ್ಪಲು

ನಿಮಗೆ ಕೊಡಚಾದ್ರಿಯ ಬಗ್ಗೆ ಗೊತ್ತಿಲ್ಲ! ಕೇರಳದಿಂದ ಶಂಕರಾಚಾರ್ಯರು ಅದೇ ಕೊಡಚಾದ್ರಿಯ ಮಾರ್ಗವಾಗಿಯೇ ನಡೆದು ಬಂದರು ಎನ್ನುತ್ತದೆ ಒಂದು ಪುರಾಣದ ಕಥೆ! ಕೊಲ್ಲೂರಿನ ಮೂಲ ಮೂಕಾಂಬಿಕೆಯ ಸನ್ನಿಧಾನ ಕೊಡಚಾದ್ರಿಯಲ್ಲೇ ಇದ್ದು ಅದು ಇಂದಿಗೂ ಅಲ್ಲೇ ಇದೆ! ಕೊಡಚಾದ್ರಿಯಲ್ಲಿ ಇಂದಿಗೂ ದೇವಿಯು ಮೂಕಾಸುರನನ್ನು ವಧಿಸಿದ ತ್ರಿಶೂಲ ಇದೆ ಎನ್ನುವ ಕಥೆಗಳಿವೆ. ಅಲ್ಲೊಂದು ಭೂಮಿಯಲ್ಲಿ ನೆಟ್ಟ ಲೋಹದ ಸ್ಥಂಭವೊಂದಿದೆ! ಅದೆಷ್ಟು ಸಾವಿರ ವರ್ಷದ ಇತಿಹಾಸ ಅದಕ್ಕಿದೆ ಎನ್ನುವುದರ ಬಗ್ಗೆ ಇಂದಿಗೂ ಸಂಶೋಧನೆಗಳಾಗುತ್ತಲೇ ಇದೆ. ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಗಳೂ ಅಲ್ಲಿಗೆ ಬಂದು ಹೋಗಿದ್ದಾರೆ! ಅಲ್ಲಿಂದ ಮುಂದಕ್ಕೆ ಹೋದರೆ ಶ್ರೀ ಶಂಕರಾಚಾರ್ಯರ ಸರ್ವಜ್ಞಪೀಠವಿದೆ. ಅಲ್ಲಿಂದಲೂ ಮುಂದೆ ಕೆಳಕ್ಕೆ ಇಳಿದರೆ ಚಿತ್ರಮೂಲವಿದೆ. ಅಲ್ಲಿ ನೂರಾರು ಎಕರೆಯ ಪ್ರದೇಶ ವಿಸ್ತಾರವಾದ ಜಾಗವಿದೆ ಅಲ್ಲಿ ಮೊವ್ವತ್ತಕ್ಕೂ ಹೆಚ್ಚು ಎಕರೆ ಗಾಂಜಾ ಬೆಳೆಯಲಾಗುತ್ತದೆ! ಅರಣ್ಯ ಅಧಿಕಾರಿಗಳೂ ಈ ಬೃಹತ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎನ್ನುವ ಉತ್ತರ ದೊರಕುತ್ತದೆ! ಅರೆ ಕೊಡಚಾದ್ರಿಯಲ್ಲೂ ಇದೆಯಾ ಗಾಂಜಾದ ಬೆಳೆ ಎಂದು ನೀವು ಹುಬ್ಬೇರಿಸಬೇಡಿ! ಇವತ್ತು ಗಾಂಜಾವನ್ನ ಬೆಳೆಯುತ್ತಿರುವುದೇ ಪಶ್ಚಿಮಘಟ್ಟದ ಸಾಲಿನಲ್ಲಿ ಎನ್ನುವ ರಹಸ್ಯವೇನಾದರು ನಿಮಗೆ ಗೊತ್ತಿದೆಯಾ? 

ಪಶ್ಚಿಮ ಘಟ್ಟದಲ್ಲಿ ಗಾಂಜಾ!

ಪರಿಸರವಾದಿ ದಿನೇಶ್ ಹೊಳ್ಳ

ರೆಸಾರ್ಟ್, ಟಿಂಬರ್ ಮಾಫಿಯಾ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಆದಾಯವನ್ನು ತಂದುಕೊಡುವುದು ಗಾಂಜಾ ಬೆಳೆಯೇ ಆಗಿದೆ. ಕಾಡಿನಲ್ಲೇ ಗಾಂಜಾ ಬೆಳೆದು ಕಾಡಿನಲ್ಲೇ ಅದರ ಸಂಸ್ಕರಣೆ ನಡೆಸಿ ಅಲ್ಲಿಂದಲೇ ಗುಪ್ತವಾಗಿ ಸಾಗಿಸಲಾಗುತ್ತದೆ. ಕೆಲವೊಂದು ಚಾರಣದ ಜಾಗೆಗಳಿಗೆ ಪರಿಸರ ಪ್ರೇಮಿಗಳು ಹೋಗದಂತೆ ತಡೆದು ದೆವ್ವ, ಭೂತದ ಕಥೆಯನ್ನ ಹಬ್ಬಿಸಿ ವಾತಾವರಣದಲ್ಲಿ ಭಯವನ್ನ ನಿರ್ಮಿಸಿ ಗಾಂಜಾ ಬೆಳೆಯುತ್ತಿದ್ದಾರೆ ಎನ್ನುವ ಭಯಾನಕ ಸತ್ಯವನ್ನ ಪರಿಸರ ಪ್ರೇಮಿ ದಿನೇಶ್ ಹೊಳ್ಳರು ಹಂಚಿಕೊಳ್ಳುತ್ತಾರೆ! ಕರಾವಳಿ ಭಾಗದ ಕೊಲ್ಲೂರು, ಮುದೂರು, ಬಿಸಿಲೇ ಘಾಟಿ, ಚಾರ್ಮಾಡಿ ಮತ್ತು ಶಿರಾಡಿಯ ಬಹುತೇಕ ಕಡೆಗಳಲ್ಲಿ ಗಾಂಜ ಬೆಳೆಯಲಾಗುತ್ತದೆ ಎನ್ನುವ ಮಾಹಿತಿಗಳು ದೊರಕುತ್ತವೆ. ಆದರೆ ಇದನ್ನೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ನೋಡಿ? ಇಲ್ಲೆಲ್ಲೂ ಗಾಂಜಾ ದಂಧೆಯೇ ಇರೋಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ! ಅಸಲಿಗೆ ಅರಣ್ಯ ಇಲಾಖೆಗೂ ಈ ಗಾಂಜಾ ಮಾಫಿಯಾಕ್ಕೂ ದೊಡ್ಡ ಮಟ್ಟದ ಲಿಂಕ್ ಇದೆ ಎನ್ನುವುದು ಸ್ಥಳಿಯರ ಆರೋಪ! ಹಾಗೆಲ್ಲಿಯಾದರು ಅಧಿಕಾರಿಗಳು ಛಾಲೆಂಜ್ ಹಾಕುವುದಿದ್ದರೆ  ಜಾಗದ ಸರ್ವೇ ನಂಬರ್ ಸಮೇತ ದಾಖಲೆ ನೀಡಲು ನಾವು ಸಿದ್ದರಿದ್ದೇವೆ ಎನ್ನುತ್ತಿದ್ದಾರೆ ಪರಿಸರ ವಾದಿಗಳು! ಇದಕ್ಕೇನು ಹೇಳುತ್ತಾನೆ ಅರಣ್ಯ ಅಧಿಕಾರಿಗಳು? ಪೊಲೀಸರು ಅರಣ್ಯ ಅಧಿಕಾರಿಗಳ ವ್ಯಾಪ್ತಿಯೊಳಕ್ಕೆ ಹೆಚ್ಚಾಗಿ ತಲೆ ಹಾಕುವುದಿಲ್ಲ! ಹಾಗಾಗಿ ಅರಣ್ಯ ಅಧಿಕಾರಿಗಳಿಗೆ ತಿಂದು ತೇಕಲು ಇದು ಮಟ್ಟಸವಾದ ಹುಲ್ಲುಗಾವಲಿನಂತಾಗಿದೆ! ಇಲ್ಲದಿದ್ದರೆ ಗಾಂಜಾ ಮಾಫಿಯ ದಕ್ಷಿಣ ಕನ್ನಡ ಜಿಲ್ಲೆಯ ತಲೆ ಹತ್ತಿ ಕುಣಿಯುತ್ತಿರುವಾಗಲೂ ಅರಣ್ಯ ಅಧಿಕಾರಿಗಳು ಗಾಂಜಾ ಮಾಫಿಯಾವನ್ನ ಪೊರೆಯುತ್ತಿದ್ದಾರೆ ಎನ್ನಬೇಕಲ್ಲವೆ? ಗಾಂಜಾ ಮಾಫಿಯಾಕ್ಕೆ ಬ್ರೇಕ್ ಹಾಕುವವರು ಯಾರು? ಗೃಹಮಂತ್ರಿಗಳೇ, ಮಾನ್ಯ ಮುಖ್ಯಮಂತ್ರಿಗಳೇ, ಕರಾವಳಿಯ ಸಂಸದರೇ ಇಲ್ಲಿ ಗಮನಿಸಿ ಇದು ಭವಿಷ್ಯವನ್ನ ಕೊಲ್ಲುವ ವಿಷವನ್ನ ಬೆಳೆಯುತ್ತಿದ್ದೀರಿ! ಈಗಾಗಲೇ ಗಾಂಜಾದ ಕಾರಣಕ್ಕೆ ಸಾವಿರಾರು ಮನೆಗಳು ಮುರಿದು ಹೋದವು, ಇದು ಐಕಾರ್ನಿಯಾದಂತೆ ವ್ಯಾಪಿಸುವುದರೊಳಗೆ ಎಚ್ಚಿತ್ತುಕೊಳ್ಳಿ! ಗಾಂಜಾ ಮಾಫಿಯಾದ ಹುಟ್ಟಡಗಿಸಲು ಪೊಲೀಸರು ಮಾತ್ರವೇ ಸಾಥಿಗಳಾದರೆ ಸಾಕಾಗಲಾರದು. ಜನಪ್ರತಿನಿಧಿಗಳೂ ಈ ಕುರಿತು ಗಮನ ಹರಿಸಲೇ ಬೇಕು. ಇಲ್ಲದಿದ್ದರೆ ಇದು ನಾಳೆಯ ಬಹುದೊಡ್ಡ ಶಾಪವಾಗುವುದರಲ್ಲಿ ಅನುಮಾನವಿಲ್ಲ!

ಸ್ಕೋರ್ ಇದೆಯಾ?

“ನಂಗೆ ಇವತ್ತು ಸ್ಕೋರ್ ಬೇಕು” ಎಂದರೆ ಸಾಕು ಆಕಡೆಯಿಂದ ಎಷ್ಟು ಕೇಳುತ್ತಾನೆ.. ಇವನು ಐದು ಎಂದರೆ ಸಾಕು ಆ ಕಡೆಯವನು ಓಕೆ ಎನ್ನುತ್ತಾನೆ. ನೀವು ಹೇಳಿದ ಜಾಗಕ್ಕೆ ಸ್ಕೋರ್ ಬಂದು ತಲುಪುತ್ತದೆ. ಒಂದು ಸಿಗರೇಟಿಗೆ ನೂರೇ ರೂಪಾಯಿ! ನೂರು ರೂಪಾಯಿಯ ಐದು ಸಿಗರೇಟು ತರುತ್ತಾನೆ. ನಂಬಬೇಕು ನೀವು! ಅದರೊಳಗೆ ಗಾಂಜಾ ತುಂಬಿಸಲಾಗುತ್ತದೆ. ಕೆಲವು ಹುಡುಗರು ಹುಡುಗಿಯರಿಗೆ ಮೊದಲು ಬಲವಂತ ಮಾಡಿ ಸಿಗರೇಟು ಸೇದಿಸುತ್ತಾರೆ! ಕುಡಿಯೋದು ಇವತ್ತಿನ ಫ್ಯಾಷನ್ ತಾನೆ? ಮೊದಲು ಬ್ರೀಝರ್ ಅಥವಾ ವೈನ್ ಕುಡಿಯುತ್ತಿದ್ದವಳು ಬಕರ್ಡೆ ರಮ್ ಕುಡಿಯುತ್ತಾಳೆ, ವೊಡ್ಕಾ ಕುಡಿಯುತ್ತಾಳೆ, ಸಿಗರೇಟು ಎಂದು ಸೇದಿ ಮತ್ತೆ ಗಾಂಜಾಕ್ಕೆ ಎಂಟ್ರಿ ಕೊಡುತ್ತಾಳೆ! ಯಾವಗಾ ಗಾಂಜಾ ನಶೆಗೆ ಬೀಳುತ್ತಾಳೋ ಫಿನೀಶ್! ಆಕೆಯನ್ನ ಹಂಚಿಕೊಂಡು ತಿಂದು ಬಿಡುತ್ತಾರೆ! ಉಪಾಧ್ಯ ಕುಟುಂಬದ ಕುಡಿಯೊಂದು ಹಾಗೇ ಬಳಸಲ್ಪಟ್ಟು ಕೊನೆಗೆ ನೇಣಿಗೆ ಬಿದ್ದು ಸಾಯುತ್ತಾಳೆ! ಇಂಥ ನೂರಾರು ಕಥೆಗಳಿವೆ! ಅಧಿಕಾರಿಗಳೇ ಕರಾವಳಿಯಲ್ಲಿ ನಡೆಯುವ ಬಹುತೇಕ ಪಾತಕಕ್ಕೆ ಗಾಂಜಾವೇ ಮೂಲ ಕಾರಣ ಎಂದರೆ ನೀವು  ನಂಬುವುದಿಲ್ಲ! ಗಾಂಜ ಪೆಡ್ಲಿಂಗ್ ಯಾವ ಪರಿಯಲ್ಲಿ ಬೆಳೆದು ಬಿಟ್ಟಿದೆ ಎಂದರೆ ಯಾವ ಹೊತ್ತಿನಲ್ಲಿ ಯಾರ ಕೊಲೆ ಆಗುತ್ತದೋ ಎನ್ನುವುದೇ ಅನುಮಾನ! ಆ ಪರಿಯಲ್ಲಿ ಗಾಂಜ ದಂಧೆ ನಡೆಯುತ್ತಿದೆ! ಗಾಂಜಾ ದಂಧೆಯ ಕೋಡ್ ವರ್ಡು ಕೇವಲ “ಸ್ಕೋರ್” ಮಾತ್ರವೇ ಅಲ್ಲ! ಭಟ್ಕಳಕ್ಕೆ ಹೋಗಿ ’ವಾಸು ಅಗರ್ ಬತ್ತಿ’ ಎಂದರೆ ಗಾಂಜಾ ತುಂಬಿಸಿದ ಸಿಗರೇಟು ಕೊಡುತ್ತಾರೆ! ’ಗ್ರೀನ್ ಟೀ ಎಂಬುದೂ ಗಾಂಜಾಕ್ಕೆ ಇಟ್ಟಿರುವ ಇನ್ನೊಂದು ಉಪನಾಮ! ಪತ್ರಿಕೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಇದನ್ನೆಲ್ಲ ಬರೆದಿದೆ! ಕರ್ನಾಟಕದ ಗುಪ್ತಚರ ಇಲಾಖೆ ಸುಮ್ಮನೆ ಕುಳಿತಿಲ್ಲ! ನಮ್ಮ ಪೊಲೀಸರೂ ಸಾಮಾನ್ಯರಲ್ಲ ಎನ್ನುವುದು ನಮಗೂ ಗೊತ್ತಿದೆ! ಇದೆಲ್ಲದಕ್ಕೂ ಉತ್ತರ ದೊರಕಲಿ ಎನ್ನುವುದಷ್ಟೇ ನಮ್ಮ ಉದ್ದೇಶ

ವಸಂತ್ ಗಿಳಿಯಾರ್

Leave a Comment