ಅಂಗಾರ ಮತ್ತು ಹಾಲಾಡಿಗೆ ಮಂತ್ರಿ ಪಟ್ಟ ಖಾತ್ರಿ ?!

ರಾಜ್ಯ ರಾಜಕಾರಣ ಹೊಸ ತಿರುವಿನಲ್ಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಹೊಸ ಹೊಸ ಘೋಷಣೆಗಳು ಮೊಳಗುತ್ತಿರುವುದು ಒಂದೆಡೆಯಾದರೆ ಮಂತ್ರಿಮಂಡಲದೊಳಗೆ ಯಾರೆಲ್ಲ ನಡೆದು ಬರಲಿದ್ದಾರೆ ಎನ್ನುವ ಸಹಜ ಕುತೂಹಲ ಎಲ್ಲರಿಗೂ ಸಾಮಾನ್ಯವಾಗಿ ಇದ್ದೇ ಇದೆ! ಮುಖ್ಯವಾಗಿ ಕರಾವಳಿಯಲ್ಲಿ ಕಾಂಗ್ರೇಸ್ ಪಕ್ಷವನ್ನೇ ಧೂಳಿಪಟ ಮಾಡಿ ಆಯ್ಕೆಯಾದ ಬಾಜಪ ಶಾಸಕರುಗಳಲ್ಲಿ ಯಾರೆಲ್ಲ ಮಂತ್ರಿಯಾಗಬಹುದು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು? ಉಡುಪಿಯಲ್ಲಿ ಯಾರು ಎನ್ನುವ ಪ್ರಶ್ನೆಯೊಂದು ಎಲ್ಲರಲ್ಲಿಯೂ ಇದೆ.. ಎರಡೂ ಜಿಲ್ಲೆಯಲ್ಲಿ ಹಲವು ಶಾಸಕರುಗಳು ಮಂತ್ರಿಯಾಗಲು ಅರ್ಹರಿದ್ದಾರೆ.

ಸಂಜೀವ್ ಮಠಂದೂರ್, ಹರೀಶ್ ಪೂಂಜಾ, ಭರತ್ ಶೆಟ್ಟಿ, ರಾಜೇಶ್ ನಾಯಕ್ ಉಳೆಪ್ಪಾಡಿ, ಉಮಾನಾಥ ಕೋಟ್ಯಾನ್ ವೇದವ್ಯಾಸ ಕಾಮತ್, ಬಿ.ಎಂ. ಸುಕುಮಾರ್ ಶೆಟ್ಟಿ ಇವವರೆಲ್ಲ ಮೊದಲ ಸಾರಿ ಶಾಸಕರಾದವರಾದರೆ ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ವಿ ಸುನಿಲ್ ಕುಮಾರ್ ಇವರೆಲ್ಲ ಹಿರಿಯ ಶಾಸಕರುಗಳು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಂತ್ರಿಯಾಗುವುದಿದ್ದರೆ ಅದು ಸುಳ್ಯ  ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರ ಎಂದೇ ಹೇಳಲಾಗುತ್ತಿದೆ. ಅಂಗಾರ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿದ್ದು  ನಿರಂತರವಾಗಿ ಆರು ಅವಧಿಗೆ ಸುಳ್ಯ ವಿಧಾನಸಭ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿದ್ದು ಈ ಅವಧಿಗೆ ಅಲ್ಲಿಂದ ಖಂಡಿತಾ ಮಂತ್ರಿಯಾಗಲಿರುವರು ಎನ್ನುವ ಬಲವಾದ ನಿರೀಕ್ಷೆಯನ್ನ ಸುಳ್ಯ ವಿಧಾನಸಭಾ ಕ್ಷೇತ್ರದ ಜನತೆ ಇಟ್ಟಿದ್ದಾರೆ!

ಸುಳ್ಯ ವಿಧಾನಸಭಾ ಕ್ಷೇತ್ರ

ಸುಳ್ಯ ವಿಧಾನಸಭಾ ಕ್ಷೇತ್ರ ರಚನೆಯಾಗಿ ಅನಾಮತ್ತು57 ಚಿಲ್ಲರೆ ವರ್ಷವಾದರೂ ಸುಳ್ಯದಿಂದ  ಗೆದ್ದ ಯಾವ ಶಾಸಕನೂ ಇದುವರೆಗೂ ಮಂತ್ರಿಯಾಗಲ್ಲ. ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೆ ಸೇರಿದ್ದ ಸುಳ್ಯ ತಾಲೂಕು ಪ್ರತ್ಯೇಕಗೊಂಡು ಹೊಸ ಕ್ಷೇತ್ರವಾದ ಅನಂತರ 14 ಬಾರಿ ಚುನಾವಣೆ ಎದುರಿಸಿದೆ. ಇಲ್ಲಿನ ಜನಪ್ರತಿನಿಧಿಗಳು ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಅವರಿಗೆ ಗೂಟದ ಕಾರು ಏರುವ ಭಾಗ್ಯ ಸಿಕ್ಕಿಲ್ಲ. ಆದರೆ ಈ ಬಾರಿ ಬಿಜೆಪಿ ಸರಕಾರ ರಚನೆಗೊಂಡಲ್ಲಿ ಮೀಸಲು ಕ್ಷೇತ್ರವಾಗಿರುವ ಸುಳ್ಯವನ್ನು ಸತತ ಆರನೇ ಬಾರಿಗೆ ಪ್ರತಿನಿಧಿಸುತ್ತಿರುವ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚು ಅನ್ನುವ ಚರ್ಚೆ ಬಿರುಸು ಪಡೆದಿದೆ. ಎಸ್. ಅಂಗಾರ ಅವರು ಜಿಲ್ಲೆಯ ಹಿರಿಯ ಶಾಸಕರಾಗಿರುವುದೂ ಈ ವಾದಕ್ಕೆ ಪುಷ್ಟಿ ನೀಡಿದೆ.

1952ರ ಪ್ರಥಮ ಮತ್ತು 1957ರದ್ವಿತೀಯ ಚುನಾವಣೆಗಳಲ್ಲಿ ಸುಳ್ಯವು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. 1962ರಲ್ಲಿ ಪ್ರತ್ಯೇಕಗೊಂಡು ಹೊಸ ವಿಧಾನಸಭಾ ಕ್ಷೇತ್ರವಾಯಿತು. 1962ರ ಅನಂತರ 14 ಚುನಾವಣೆಗಳು ನಡೆದು 7 ಬಾರಿ ಬಿಜೆಪಿ, 5 ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಸ್ವತಂತ್ರ ಪಕ್ಷ ಮತ್ತು ಜನತಾ ಪಕ್ಷದ ಅಭ್ಯರ್ಥಿ ಇಲ್ಲಿ ಗೆಲುವು ಸಾಧಿಸಿದ್ದಾರೆ.

ಸುಳ್ಯವು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲು ಕ್ಷೇತ್ರವಾದುದು 1962ರಲ್ಲಿ. ಆ ಬಳಿಕ ಇಲ್ಲಿಂದ ಪ್ರಥಮವಾಗಿ ಸ್ವತಂತ್ರ ಪಕ್ಷದ ರಾಮಚಂದ್ರ ಗೆದ್ದರು. ಅನಂತರ ಪಿ.ಡಿ. ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ. ಕುಶಲ, ಅಂಗಾರ ಅವರಿಗೆ ಗೆಲುವು ಲಭಿಸಿತ್ತು. ಎಸ್ ಅಂಗಾರ ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ.

ಸುಳ್ಯ ತಾಲೂಕಿನವರಾಗಿ, ಬೇರೆಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ,ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ. ಸುಳ್ಯವು ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದಾಗ 1952, 57 ಮತ್ತು 62ರಲ್ಲಿ ಬಾಳುಗೋಡು ನಿವಾಸಿ, ನ್ಯಾಯವಾದಿ ಕೂಜುಗೂಡು ವೆಂಕಟರಮಣ ಗೌಡ 3 ಅವಧಿಗೆ ಶಾಸಕರಾಗಿದ್ದರು. ಆಗ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದಆಹ್ವಾನ ಬಂದಿತ್ತು.

 ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಗೌಡರು ಅವಕಾಶವನ್ನು ತಿರಸ್ಕರಿಸಿದ್ದರು. ಬಳಿಕ 2008ರ ಬಿಜೆಪಿ ಸರಕಾರದಲ್ಲಿ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಿದ್ದರೂ ಹುಸಿಯಾಗಿತ್ತು.ಅವಿಭಜಿತ ಜಿಲ್ಲೆಯಲ್ಲಿ ಸುಳ್ಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 1987ರಲ್ಲಿ ಅಂಗಾರ ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಪರಾಜಿತರಾಗಿದ್ದರು. 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ವಿರುದ್ಧ ಗೆಲುವು ಪಡೆದಿದ್ದರು. 1999ರಲ್ಲಿ ಮತ್ತೆ ಕಾಂಗ್ರೆಸ್ನ ಕುಶಲರ ವಿರುದ್ಧ, 2004, 2008, 2013 ಮತ್ತು 2018ರಲ್ಲಿ ಕಾಂಗ್ರೆಸ್ನ ಡಾ| ರಘು ವಿರುದ್ಧ ಗೆಲುವು ದಾಖಲಿಸಿದ್ದಾರೆ. ಹೀಗೆ ತನ್ನ ರಾಜಕೀಯ ಬೆಳವಣಿಗೆಯಲ್ಲಿ ಹಂತದಿಂದ ಹಂತಕ್ಕೆ ಪ್ರವರ್ಧಮಾನಕ್ಕೇರುತ್ತಲೇ ಬಂದ ಅಂಗಾರ ಈ ಸಾರಿಯಾದರೂ ಮಂತಿಯಾದಾರ ಎನ್ನುವುದು ಸುಳ್ಯ ಕ್ಷೇತ್ರದ ಮತದಾರರ ಭಾವನೆ.

ಸೀನಿಯಾರಿಟಿ ಮೇಲೆ ಅವಕಾಶ ಕೊಡುವುದೇ ಹೌದಾರರೆ ಅಂಗಾರರಿಗಿಂತಲೂ ಬೇರೆ ಆಯ್ಕೆ ಇಲ್ಲ. ಅಂಗಾರ ಮಂತ್ರಿಯಾಗುವುದೇ ಹೌದಾದರೆ ಮತ್ತೊಬ್ಬ ಹಿಂದುಳಿದ ವರ್ಗದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಯಾಗುವುದಿಲ್ಲ. ಎರಡೂ ಜಿಲ್ಲೆಯಿಂದಲೂ ಇಬ್ಬರೂ ಹಿಂದುಳಿದ ವರ್ಗದ  ನಾಯಕರನ್ನೇ ಮಂತ್ರಿಯನ್ನಾಗಿ ಮಾಡಲಾರದು ಪಕ್ಷ.

ಕುಂದಾಪುರ ವಿಧಾನಸಭಾ ಕ್ಷೇತ್ರ

ಕುಂದಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಲಾಡಿ  ಶ್ರೀನಿವಾಸ ಶೆಟ್ಟಿಯವರು ಮಂತ್ರಿಯಾಗಲಿದ್ದಾರಾ? ಕುಂದಾಪುರ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲೇ ಇದುವರೆಗೂ ಯಾರೊಬ್ಬರೂ ಮಂತ್ರಿಯಾದ ಇತಿಹಾಸವೇ ಇಲ್ಲ. 1952 ರಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿಯವರು ಈ ಕ್ಷೇತ್ರದ ಮೊದಲ ಶಾಸಕರು. ಅದರ ನಂತರ 1957 ರಲ್ಲಿ ಪಿ.ಎಸ್.ಪಿ. ಯಿಂದ ವಕ್ವಾಡಿ ಶ್ರೀನಿವಾಸ ಶೆಟ್ಟಿ 1962 ಎಸ್.ಎಸ್. ಕೊಳ್ಕೆಬೈಲು, 1967 ವಿನ್ನಿಫ್ರೆಡ್ ಪರ್ನಾಂಡೀಸ್, 1972 ವಿನ್ನಿಫ್ರೆಡ್ ಪರ್ನಾಂಡಿಸ್, 1979 ಕಾಪು ಸಂಜೀವ ಶೆಟ್ಟಿ, 1983  ರಿಂದ 1999 ರ ತನಕದ ನಾಲ್ಕು ಅವಧಿಯ ಚುನಾವಣೆಯಲ್ಲಿಯೂ ಪ್ರತಾಪಚಂದ್ರ ಶೆಟ್ಟರು ಜಯಭೇರಿ ಭಾರಿಸಿ 1999 ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಅಚ್ಚರಿಯ ಬೆಳವಣಿಗೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಇಲ್ಲಿಯ ತನಕವೂ  2004, 2009,2014,2019 ರ ತನಕ ಗೆಲ್ಲುತ್ತಲೇ ಬಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಜಿಲ್ಲೆಯ ಇತಿಹಾಸದಲ್ಲೆ ಹೆಚ್ಚು ಸಾರಿ ಆಯ್ಕೆಗೊಂಡ ಶಾಸಕ ಎನ್ನುವ ಖ್ಯಾತಿಗೆ ಒಳಪಟ್ಟವರು.

ಮಂತ್ರಿಯಾಗುವ ನಿರೀಕ್ಷೆ!

ರಾಜ್ಯದ ಪ್ರಭಾವಶಾಲಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಈಡಿಗ ವರ್ಗದ ಪ್ರಭಾವಿ ರಾಜಕಾರಣಿ ಸಾರೆಕೊಪ್ಪ ಬಂಗಾರಪ್ಪನವರ ಮಗ ಕುಮಾರ್ ಬಂಗಾರಪ್ಪ ಮಂತ್ರಿಯಾದರೆ ಬಿಲ್ಲವ ಖೊಟಾದಿಂದ ಒಬ್ಬ ಮಂತ್ರಿಯಾದಂತಾಗುತ್ತದೆ. ಹರತಾಳು ಹಾಲಪ್ಪ ಮಂತ್ರಿಯಾಗುವುದು ಸಾಧ್ಯವಿಲ್ಲ. ಅದೇ ರೀತಿ ಬಿಲ್ಲವ ಖೋಟಾದ ಆಧಾರದಲ್ಲೇ ಶ್ರೀನಿವಾಸ ಪೂಜಾರಿಯವರೂ ಮಂತ್ರಿಯಾಗುವುದಿಲ್ಲ! ಮೇಲ್ಮನೆಯ ವೀರೋಧ ಪಕ್ಷದ ನಾಯಕ ಸ್ಥಾನದಲ್ಲಿರುವ ಕಾರಣಕ್ಕೆ ಆ ಸ್ಥಾನದಿಂದ ತೆರವಾದ ಮೇಲೆ ಮಂತ್ರಿ ಸ್ಥಾನವನ್ನೇ ನೀಡಬೇಕು ಎನ್ನುವುದು ರಾಜಕೀಯ ಪಂಡಿತರ ಮಾತು. ಆದರೆ ಅಲ್ಲಿ ರವಿಕುಮಾರ್ ಅಥವಾ ತೇಜಸ್ವಿನಿ ರಮೇಶ್ ಮಂತ್ರಿಯಾದರೆ ವಿಧಾನಪರಿಷತ್ ಖೋಟಾದಲ್ಲಿಯೂ ಕೋಟ ಮಂತ್ರಿಯಾಗಲಾರರು. ಇಬ್ಬಿಬ್ಬರು ಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನ ಕೊಡುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಕಷ್ಟ! ತೇಜಸ್ವಿನಿ ರಮೇಶ್ ವಿರೋಧ ಪಕ್ಷದ ನಾಯಕಿ ಆಗುವ ಸಾಧ್ಯತೆಯನ್ನ ತಪ್ಪಿಸಿ ರಾಜ್ಯದಲ್ಲಿ ಮತ್ತೊಬ್ಬ ಪ್ರಭಾವಶಾಲಿ ವಕ್ಕಲಿಗ ನಾಯಕಿ ತಯಾರಾಗೋದು ಬೇಡ ಎನ್ನುವ ಯೋಚನೆಯೊಂದರ ಫಲವಾಗಿ ಕೋಟ ಶ್ರಿನಿವಾಸ ಪೂಜಾರಿಯವರನ್ನ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಶ್ರೀನಿವಾಸ ಪೂಜಾರಿಯವರು ನ್ಯಾಯವನ್ನೂ ದೊರಕಿಸಿ ಕೊಟ್ಟಿದ್ದರು. ಆದರೆ ಅಂದೂ ಅವಕಾಶ ವಂಚಿತರಾಗಿದ್ದ ತೇಜಸ್ವಿನಿ ರಮೇಶ್ ಈ ಸಾರಿಯೂ ಅವಕಾಶ ವಂಚಿತರಾಗಲಿಕ್ಕಿಲ್ಲ. ಮೇಲಾಗಿ ಆಕೆ ಮಹಿಳೆ ಬೇರೆ. ಒಂದೊಮ್ಮೆ ತೇಜಸ್ವಿನಿಯವರನ್ನ ಮಂತ್ರಿ ಮಾಡಿದರೆ ಮಹಿಳಾ ಖೋಟ ಮತ್ತು ಪರಿಷತ್ ಸದಸ್ಯರ ಖೋಟಾ ಎರಡೂ ಖೋಟಾದಿಂದಲೂ ಒಂದೇ ಆಯ್ಕೆ ಆಗುವ ಕಾರಣಕ್ಕೆ ಮುಖ್ಯವಾಗಿ ವಕ್ಕಲಿಗ ನಾಯಕತ್ವಕ್ಕೆ ಬಲ ತುಂಬುವ ಕಾರಣಕ್ಕೆ ಅದು ಸಮರ್ಥವಾದ ಆಯ್ಕೆ ಆಗುವುದು ಖಂಡಿತ. ಆದರೆ ಯಡಿಯೂರಪ್ಪನವರ ಮೇಲೆ ಮತ್ತು ಪಕ್ಷದ ಹಿರಿಯರಿಗೆ, ಸಂಘದ ಪ್ರಮುಖರಿಗೆ ಒತ್ತಡ ಹಾಕುವಲ್ಲಿ ಶ್ರೀನಿವಾಸ ಪೂಜಾರಿ ಮುಂಚೂಣಿಯಲ್ಲಿದ್ದಾರೆ.  ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಮಂಗಳೂರು ಎರಡೂ ಜಿಲ್ಲೆಯ ಸ್ಥಳಿಯಾಡಳಿತ ಪ್ರತಿನಿಧಿಯಿಂದ ಆಯ್ಕೆಗೊಂಡವರು. ಮತ್ತು ಪಾದರಸದಂತೆ ಓಡಾಡಿ, ಮಾತಾಡಿ ಪಕ್ಷದ ದೃಷ್ಠಿಯಲ್ಲಿ ಮತ್ತು ಸಂಘದ ದೃಷ್ಠಿಯಲ್ಲಿ ರಾಜ್ಯ ನಾಯಕರಾಗಿ ಗುರುತಿಸಿಕೊಂಡವರು. ಕಳೆದ ಅವಧಿಯಲ್ಲಿ ಹಾಲಾಡಿಯವರಿಗೆ ಮಂತ್ರಿ ಸ್ಥಾನ ಕೊಡದೆ  ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿಕ್ಕಾಗ ಕರೆಯಿಸಿಕೊಂಡು ಮೋಸ ಮಾಡಿದರು ಎನ್ನುವ ನೆಲೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಹಾಲಾಡಿ ಪಕ್ಷವನ್ನ ಬಿಟ್ಟು ಪಕ್ಷೇತರವಾಗಿ ಸ್ಪರ್ಧಿಸಿ ಭರ್ಜರಿಯಾಗಿ ತನ್ನ ಪ್ರಭಾವವನ್ನ ತೋರಿಸಿದ್ದರು. ಈ ಅವಧಿಗೆ ಹಾಲಾಡಿಯೇ ಮಂತ್ರಿಯಾಗುತ್ತಾರೆ ಎನ್ನುವುದು ಬಹುತೇಕರ ನಿರೀಕ್ಷೆ! ಆದರೆ ರಾಜಕೀಯ ವಲಯದ ಲೆಕ್ಕಾಚಾರ ಏನು ಹೇಳುತ್ತದೆ ಗೊತ್ತಾ?

ಕೊಟ ಮತ್ತೆ ಮಂತ್ರಿ!

ಕೋಟ ಶ್ರೀನಿವಾಸ ಪೂಜಾರಿಯನ್ನೇ ಮತ್ತೊಂದು ಅವಧಿಗೆ ಮಂತ್ರಿಯಾಗಿಸುವ ಸಾಧ್ಯತೆಯ ಬಗ್ಗೆ ಮಾತುಕಥೆಗಳು ಕೇಳುತ್ತಿವೆ! ಆದರೆ ಅದು ಅಷ್ಟು ಸುಲಭವಲ್ಲ. ಕಳೆದ ಅವಧಿಯಲ್ಲಿ ಹಾಲಾಡಿಗೆ ಅನ್ಯಾಯವಾಗಿದೆ ಆದರೂ ಅವರು ಪಕ್ಷದ ಯಾವ ನಡೆಗೂ ವಿರೋಧ ಮಾಡಿದವರಲ್ಲ. ಪಕ್ಷೇತರ ಸ್ಪರ್ದಿಸಿ ಗೆದ್ದರೂ ಪಕ್ಷದ ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಾಜಪ ಪಕ್ಷದ ಅಭ್ಯರ್ಥಿಗಳಿಗೇ ಬೆಂಬಲ ಕೊಟ್ಟಿದ್ದರು. ನಿರ್ಮಲಾ ಸೀತಾರಾಮನ್ ಪರವಾಗಿ ಮತ ಚಲಾಯಿಸಿದ್ದರು. ಸಂಘದ ನಾಯಕರುಗಳ ಜೊತೆಗೆ ಉತ್ತಮ ಒಡನಾಟ ಇಲ್ಲ ಹೌದಾದರೂ, ಸಂಘದ ಬೈಠಕ್ ಗೆ ಹೋಗಿ ಕೂರುವುದಿಲ್ಲವಾದರೂ ಯಾವುದರ ವಿರುದ್ದವೂ ಹಾಲಾಡಿ ಇಲ್ಲ.  ಹಾಲಾಡಿ ಮಿಸ್ಟರ್ ಕ್ಲೀನ್ ಎನ್ನುವ ಇಮೇಜ್ ಹೊಂದಿರುವ ರಾಜಕಾರಣಿ. ಅತ್ಯಂತ ಪ್ರಾಮಾಣಿಕ ಮತ್ತು ಸಭ್ಯ ಎನ್ನುವ ಹೆಸರು ಹಾಲಾಡಿಗಿದೆ. ಹಾಲಾಡಿಯಂತವರನ್ನ ಮಂತ್ರಿ ಮಾಡಿದರೆ ರಾಜ್ಯದಲ್ಲಿ ಬಾಜಪ ವರ್ಚಸ್ಸು ವೃದ್ದಿಯಾಗುತ್ತದೆ ಎನ್ನುವುದು ಪಕ್ಷದ ಹೈಕಮಾಂಡ್ ಲೆಕ್ಕಾಚಾರ. ಇನ್ನು ಸುನಿಲ್ ಕುಮಾರ್ ಅಥವಾ ಹಾಲಾಡಿ ಎನ್ನುವ ಹೆಸರು ಬಂದಾಗ ಸುನಿಲ್ ಕುಮಾರ್ ಗಿಂತಲೂ ಹಾಲಾಡಿಗೇ  ಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಿಗೆ ಇದೆ. ಹಾಲಾಡಿಯದ್ದು ಬಹುಷಃ ಇದು ಕೊನೆಯ ಚುನಾವಣೆ ಎಂದೇ ಬಣ್ಣಿಸಲಾಗುತ್ತಿದೆ. ಹಾಗಾಗಿ ಕುಂದಾಪುರದ ಶಾಸಕರಿಗೆ ಮಂತ್ರಿಯಾಗುವ ಭಾಗ್ಯ ಇಲ್ಲ ಎನ್ನುವ ಇತಿಹಾಸವೊಂದು ಇಲ್ಲಿಗೇ ಮುಗಿಯಲಿದೆಯಾ? ಎಲ್ಲರಿಗೂ ಕುತೂಹಲವಿದೆ..

Leave a Comment