ಸಕ್ಕರೆ ಕಾರ್ಖಾನೆ ಆರಂಭಗೊಂಡರೆ ಅದು ಎರಡು ಜಿಲ್ಲೆಗೂ ವರದಾನವಾಗುತ್ತದೆ ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿ ;ಹಾಲಾಡಿ ಶ್ರೀನಿವಾಸ ಶೆಟ್ಟಿ

ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಾದ ಹಾಲಾಡಿಯ ಸ್ವಾತಂತ್ರ್ಯಹೋರಾಟಗಾರರ ಮನೆತನದಲ್ಲಿ ಹುಟ್ಟಿದ ಹಾಲಾಡಿ ಶ್ರೀನಿವಾಸ ಶೆಟ್ಟರು ಮೂಲತಃ ಕೃಷಿಕರು.. ದಕ್ಷಿಣಕನ್ನಡ ಜಿಲ್ಲೆ ವಿಭಜನೆ ಆಗುವುದಕ್ಕೂ ಮೊದಲೇ ಹಾಲಾಡಿ ಶ್ರೀನಿವಾಸ ಶೆಟ್ಟರು ಜಿಲ್ಲೆಯಾಧ್ಯಂತ ಕಿಂಗ್ ಮೇಕರ್ ಆಗಿ ಗುರುತಿಸಿಕೊಂಡವರು. ಆಗ ನಡೆಯುತ್ತಿದ್ದ ಸರ್ವಕಾಲೇಜು ವಿಧ್ಯಾರ್ಥಿ ಸಂಘದ ವಿಧ್ಯಾರ್ಥಿ ನಾಯಕನ ಆಯ್ಕೆಯ ಚುನಾವಣೆಗಳಲ್ಲಿ ಸದಾ ಕಾಲ ಮೆಲುಗೈ ಸಾಧಿಸುತ್ತಲೇ ಬಂದ ಹಾಲಾಡಿಯವರು  ತನ್ನ ನಾಯಕತ್ವದ ಶಕ್ತಿಯನ್ನ ದಕ್ಷಿಣಕನ್ನಡ ಜಿಲ್ಲೆಯಾಧ್ಯಂತ ಸ್ಪಷ್ಟವಾಗಿ ದಾಖಲಿಸಿದವರು..

ತನ್ನ ಮಾವ ಆನಂದ ಕುಂದ ಹೆಗ್ಡೆಯರು ಆಗಿನ ಬ್ರಹ್ಮಾವರ ವಿಧಾನಸಭ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ತನ್ನ ಯುವಶಕ್ತಿಯ ಮಿಂಚಿನ ಸಂಪರ್ಕದಲ್ಲಿ ರಾಜಕಾರಣದಲ್ಲಿನ ತನ್ನ ಚಾಣಕ್ಷತೆಗೆ ಖ್ಯಾತರಾದವರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಶಿಕ್ಷಣವನ್ನ ಮುಗಿಸಿ, ಮೈಸೂರು ವಿಶ್ವವಿಧ್ಯಾಲಯದಲ್ಲಿ ಬಿ.ಎಸ್ಸಿ ಪದವಿಧರರಾದ ಶ್ರೀನಿವಾಸ ಶೆಟ್ಟರು ತನ್ನ ಜನಪರ ನಿಲುವಿನಿಂದಾಗಿ, ಸರಳ, ಸಜ್ಜನಿಕೆಯ ಕಾರಣದಿಂದಾಗಿ ಜನಸಾಮಾನ್ಯರ ಒಡನಾಡಿಯಾಗಿ, ತನ್ಮೂಲಕ ಜನನಾಯಕನಾಗಿ ಬೆಳೆದು ಬಂದವರು.. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ  ಐದು ಅವಧಿಗೆ ಅಭೂತಪೂರ್ವವಾಗಿ ತನ್ನ ಗೆಲುವನ್ನ ದಾಖಲಿಸುತ್ತಲೇ ಬಂದ ಹಾಲಾಡಿಯವರನ್ನ ಅವರ ಪ್ರಾಮಾಣಿಕ ನಡೆಯನ್ನ ಗೌರವಿಸುತ್ತ ’ಕುಂದಾಪುರದ ವಾಜಪೇಯಿ’ ಎಂದೇ ಕರೆಯುವುದು ಅವರ ಜನಪ್ರೀಯತೆಗೆ ಸಾಕ್ಷಿ..

ತನ್ನ ಶಾಸಕತ್ವದ ಅವಧಿಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ತನ್ನ ಅನನ್ಯ ಕೊಡುಗೆಯನ್ನ ಕೊಟ್ಟ ಶ್ರೀನಿವಾಸ ಶೆಟ್ಟರು ಕುಗ್ರಾಮದಂತಿದ್ದ ಕುಂದಾಪುರ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ಮೂಲಭೂತ ಸೌಕರ್ಯದ ಕ್ರಾಂತಿಯನ್ನೇ ನಿರ್ಮಿಸಿದ್ದಾರೆ . ಸಾಮಾಜಿಕ ನ್ಯಾಯದ ಮೌಲ್ಯವನ್ನ ಪ್ರತಿಪಾಧಿಸುವ ಶ್ರೀನಿವಾಸ ಶೆಟ್ಟರದ್ದು ಅತ್ಯಂತ ಸರಳತೆಯ ಜಿವನಶೈಲಿ.. ಅತ್ಯಂದ ದೊಡ್ಡ ಕೃಷಿಕ ಕುಟುಂಬ ಮೂಲದ ಶ್ರೀನಿವಾಸ ಶೆಟ್ಟರೂ ಮೂಲತಃ ಯಶಸ್ವಿ ಕೃಷಿಕ. ಇಂದಿಗೂ ಕೂಡ ಕೃಷಿಯಲ್ಲಿ ತನ್ನ ತಾನು ತೊಡಗಿಸಿಕೊಂಡಿರುವ ಶೆಟ್ಟರು ಬಹು ಹಿಂದೆಯೇ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪರವಾಗಿ ವಿಧಾನಸಭೆಯಲ್ಲಿ ಧ್ವನಿಯಾಗಿದ್ದರು. ಹಿಂದೆ ಎಸ್.ಎಮ್. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಹಾಲಾಡಿಯವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಸರ್ಕಾರ ಸಹಕಾರ ಕೊಡಬೇಕು, ರೈತರು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಕೊಟ್ಟರೆ ಸಾಕು ನೀವು ಬೇರೇನೂ ಮಾಡಬೇಕಿಲ್ಲ, ಜನರೇ ಕಾರ್ಖಾನೆಗೆ ಸಾಕಾಗುವಷ್ಟು ಕಬ್ಬು ಬೆಳೆದು ಕೊಡಬಲ್ಲರು. ಆದರೆ  ರೈತರ ಹಣವನ್ನ ಬಾಕಿ ಇರಿಸಿಕೊಳ್ಳುವುದು ಒಳ್ಳೆಯದಲ್ಲ. ಎಂದಿದ್ದರು ಹಾಲಾಡಿ..


ಬ್ರಹ್ಮಾವರ ಸಕ್ಕರೆ ಕಾರ್ಖಾನೆ

 ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹಿಂದೆ ಪೂರಕವಾಗಿಯೇ ಮಾತನಾಡಿದ್ದ ಹಾಲಾಡಿ ಜಿಲ್ಲೆಯಲ್ಲಿರುವ ಎಲ್ಲಾ ಜನಪ್ರತಿನಿಧಿಗಳೂ ಜವಾಬ್ದಾರಿ ಹೊತ್ತರೆ ಇದೇನು ಆಗದ ಕೆಲಸವಲ್ಲ..  ಪ್ರತೀ ಗ್ರಾಮಪಂಚಾಯತ್ ಸದಸ್ಯನೂ ಇಷ್ಟು ಕಬ್ಬು ಬೆಳೆಸಿಕೊಡುವ ಜವಾಬ್ದಾರಿ ಹೊರಲಿ, ಪ್ರತೀ ಸಹಕಾರಿ ಸಂಘವೂ ಕಬ್ಬು ಬೆಳೆಸುವ ಜವಾಬ್ದಾರಿ ಹೊರಲಿ.. ಒಬ್ಬ ಶಾಸಕನಾಗಿ ನಾನು ಒಂದು ಸಾವಿರ ಎಕರೆ ಪ್ರದೇಶದಲ್ಲಿ ನನ್ನ ಸ್ನೇಹಿತ ವರ್ಗದಿಂದ ಕಬ್ಬನ್ನ ಬೆಳೆಸಿ ಕಾರ್ಖಾನೆಗೆ ಕೊಡುವ ಜವಾಬ್ದಾರಿ ನನ್ನದು.. ಹೀಗೆ ಎಲ್ಲಾ ಜನಪ್ರತಿನಿಧಿಗಳು ಸಂಕಲ್ಪ ಮಾಡಿದರೆಕಾರ್ಖಾನೆಗೆ ಕಬ್ಬು ಧಾರಾಳವಾಗಿ ಪೂರೈಕೆ ಆಗುತ್ತದೆ. ಇದೀಗ ವಾರಾಹಿ ನೀರಾವರಿಯ ನೀರು ದೊರಕುತ್ತಿರುವ ಕಾರಣಕ್ಕೆ ಯಾವುದೇ ತೊಂದರೆ ಆಗಲಿಕ್ಕಿಲ್ಲ. ನಮ್ಮ ಜಿಲ್ಲೆಯ ರೈತರಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಬೇಕಾಗುವಷ್ಟು ಕಬ್ಬು ಬೆಳೆದು ಕೊಡುವುದೊಂದು ದೊಡ್ಡ ವಿಷಯವೇ ಅಲ್ಲ.

ಆದರೆ ಸಕ್ಕರೆ ಕಾರ್ಖಾನೆಯ ಪುನರುತ್ತಾನವೇ ಮುಖ್ಯವಾದ ಅಂಶವಾಗಿದೆ. ಪ್ರಸಕ್ತ ದಿನದಲ್ಲಿ ಇಥೆನಾಲ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕೇಂದ್ರವೂ ಕಬ್ಬು ಬೆಳೆಗಾರರಿಗೆ ಪ್ರೊತ್ಸಾಹದ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಗೊಳ್ಳಬೇಕು ಎನ್ನುವ ಯೋಚನೆ ಸರಿ ಅದಕ್ಕೆ ಸಂಬಂಧಪಟ್ಟ ಸಭೆಗಳು ನಡೆಯಲಿ, ಈಗಾಗಲೇ ಮಾನ್ಯ ಪ್ರತಾಪಚಂದ್ರ ಶೆಟ್ಟರು ಜಿಲ್ಲಾಧಿಕಾರಿಯವರ ಮುಂದೆ ಆ ವಿಷಯವನ್ನ ಪ್ರಸ್ಥಾಪಿಸಿದ್ದಾರೆ. ಮುಖ್ಯಮಂತ್ರಿಯವರೂ ಬ್ರಹ್ಮಾವರಸಕ್ಕರೆ ಕಾರ್ಖಾನೆಗೆ ಅನುದಾನ ಕೊಡುತ್ತೇವೆ ಎಂದ ನಂತರ ಇದು ಮತ್ತೆ ಚರ್ಚೆಯಾಗುತ್ತಿದೆ. ನೀವು ಕಬ್ಬು ಬೆಳೆಯಿರಿ ಹಣ ನಾವು ಕೊಡುತ್ತೇವೆ ಎಂದರೆ ಆಗಲಿಕ್ಕಿಲ್ಲ.. ಜನ ಇದನ್ನ ಒಪ್ಪಿಕೊಳ್ಳುವುದೂ ಇಲ್ಲ. ಆಡಳಿತಾತ್ಮಕವಾಗಿ ಯಾವ ನಿಲುವನ್ನ ಕೈಗೊಳ್ಳುತ್ತಾರೆ ಎನ್ನುವುದೂ ಮುಖ್ಯ. ಈಗ ಕಾರ್ಖಾನೆಗೆ ಸಂಬಂಧಿಸಿದ  ಅಧಿಕಾರಿಗಳ ಮಟ್ಟದ ಸಭೆ ನಡೆಯಲಿ. ಅದರಲ್ಲಿ ಯಾವೆಲ್ಲ ಅಂಶಗಳು ಹೊರಬರುತ್ತವೆ ಎನ್ನುವುದನ್ನ ಗಮನಿಸೋಣ.. ಅದರ ನಂತರವೇ ಮುಂದಿನ ನಿರ್ಧಾರವನ್ನ ಕೈಗೊಳ್ಳಬಹುದು..  ಎನ್ನುತ್ತಾರೆ ಹಾಲಾಡಿ..

ಅವರು ಹೇಳಿದಂತೆಯೇ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಪ್ರೊತ್ಸಾಹವನ್ನೇ ಕೊಡುತ್ತಿದೆ. ಈ ಹಿಂದಿನ ಸರ್ಕಾರಗಳು ಇಥೆನಾಲ್ ಬಳಗೆಯ ಬಗ್ಗೆ ಪೂರಕವಾದ ಅಂಶಗಳನ್ನ ಮಾಡಿದ್ದರೆ ಇಷ್ಟರಲ್ಲಿ ಕಬ್ಬು ಬೆಳೆಗಾರರೂ ಸಾಲದಲ್ಲಿ ಇರಬೇಕಾದ ಆಗತ್ಯವೂ ಇದ್ದಿರಲಿಲ್ಲ. ರೂಪಾಯಿ ಮೌಲ್ಯವೂ ಗಟ್ಟಿಯಾಗಿರುತ್ತಿತ್ತು. ಸಕ್ಕರೆಗಿಂತಲೂ ಇಥೆನಾಲ್ ಪೂರೈಕೆಯೇ ಲಾಭದಾಯಕವಾಗಿದ್ದು ಅಮಿತ್ ಕೋರೆಯವರ ಪ್ರಕಾರ ಮುಂದೆ ಕಬ್ಬಿಗೆ ಅತ್ಯಂದ ಲಾಭದಾಯಕ ಬೆಲೆ ದೊರಕುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ..  ಅದೆಲ್ಲದಕ್ಕೂ ಪೂರಕವಾಗಿಯೇ ಎಂ.ಆರ್.ಪಿ.ಎಲ್. ದಾವಣಗೆರೆಯ ಹರಿಹರದಲ್ಲಿ ಐದುನೂರು ಕೋಟಿ ಅಂದಾಜು ವೆಚ್ಚದಲ್ಲಿ ಇಥೆನಾಲ್ ಘಟಕವನ್ನ ನಿರ್ಮಿಸಲು ಹೊರಟಿದೆ. ಇದೆಲ್ಲವೂ ಕಬ್ಬು ಬೆಳೆಗಾರರಿಗೆ ಪೂರಕವಾದ ಅಂಶವಾಗಿದೆ. ಹಲವು ವರ್ಷಗಳ ಕಾಲ ಮುಚ್ಚಿದ್ದ  ಶಿವಮೊಗ್ಗದ ಸಕ್ಕರೆ ಕಾರ್ಖಾನೆಯೂ ಮತ್ತೆ ಬಾಗಿಲು ತೆರೆದಿದೆ.. ಈ ನಿಟ್ಟಿನಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಆರಂಭಗೊಂಡಲ್ಲಿ ಒಟ್ಟು ಮೂರು ಜಿಲ್ಲೆಯ ಕಬ್ಬು ಬೆಳೆಗಾರರಿಗಿದು ಅತ್ಯಂತ ಚೇತೋಹಾರಿ ಬೆಳವಣಿಗೆಯಾಗಲಿದೆ ಎನ್ನಬಹುದು….

-ವಸಂತ್ ಗಿಳಿಯಾರ್

One Thought to “ಸಕ್ಕರೆ ಕಾರ್ಖಾನೆ ಆರಂಭಗೊಂಡರೆ ಅದು ಎರಡು ಜಿಲ್ಲೆಗೂ ವರದಾನವಾಗುತ್ತದೆ ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿ ;ಹಾಲಾಡಿ ಶ್ರೀನಿವಾಸ ಶೆಟ್ಟಿ”

Leave a Comment