ಅಂತಹ ಯಶಸ್ವಿಯಾದವರ ಹಲವರ ಅಂಗೈಯಲ್ಲಿ ಈ ಒಂದು ಗೆರೆ ಇದೆ……..!

ರವಿಬೆಳಗೆರೆ ಅಂದರೇ ಒಂದು ದೊಡ್ಡ ಆತ್ಮವಿಶ್ವಾಸ” ಅಂದರು ಗೆಳೆಯ ವಸಂತ್ ಗಿಳಿಯಾರ್. ನಮ್ಮಿಬ್ಬರ ಭೇಟಿಯಲ್ಲಿ ಆರ್.ಬಿ ವಿಷಯ ಯಾವಾಗಲೂ ಅಂತರ್ಗತವಾಗಿರುತ್ತದೆ. ಇಬ್ಬರೂ ಅವರನ್ನೇ ಓದಿಕೊಂಡವರು. ಅದೊಂದು ದಿನ ಗಿಳಿಯಾರ್ ರೂಮಿನೊಳಗೆ ಹೊಕ್ಕವನಿಗೆ ಸಿಕ್ಕಿದ್ದು ಗಿಳಿಯಾರ್ ನಡೆಸುತ್ತಿದ್ದ ಚಿತ್ರಲೇಖ ಪತ್ರಿಕೆ. ಅದರ ತುಂಬೆಲ್ಲಾ ರವಿಬೆಳಗೆರೆಯವರ ಪತ್ರಿಕೋದ್ಯಮದ ಸಾಹಸವೇ ಬರೆದಿತ್ತು. ನಾನೇ ಅಂದರೆ ನನಗಿಂತಲೂ ಗಿಳಿಯಾರಿಗೇ ಅತಿ ಹೆಚ್ಚು ಪ್ರಭಾವ ಬೀರಿದ್ದಾರೆ ಬೆಳಗೆರೆ ಅಂದುಕೊಂಡೆ. ಗಿಳಿಯಾರ್ ಇವರನ್ನೇ ಧ್ಯಾನಿಸಿ ಗೆದ್ದವರು.
ನಮ್ಮ ಬೆರಗೇ ಆರ್‌.ಬಿ. ಯವರು!! ಅವರು ಬೆಳೆದ ಪರಿ ಅಂತಹದು. ಬಳ್ಳಾರಿಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರು. ಪತ್ರಿಕೆ ನಡೆಸಿ, ಪ್ರಾರ್ಥನಾ ಶಾಲೆ ಕಟ್ಟಿ ಯಶಸ್ವಿನ ಉತ್ತುಂಗಕ್ಕೇರಿದ್ದು, ಕಳೆದೆರಡು ದಶಕಗಳಲ್ಲೆ. ಹಾಲು ಮಾರಿದರು, ದಿನ ಪತ್ರಿಕೆ ಹಂಚಿದರು, ಮೆಡಿಕಲ್ ರೆಪ್ರೆಸೆಂಟೇಟಿವ್ ಆದರು, ಸಿನೆಮಾ ಥಿಯೇಟರನಲ್ಲಿ ಕೆಲಸ ಮಾಡಿದರು. ಇತಿಹಾಸ ಉಪನ್ಯಾಸಕರಾದರು. ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ತನ್ನ ಸಾರಥ್ಯದಲ್ಲೇ ‘ಹಾಯ್ ಬೆಂಗಳೂರ್ ಪತ್ರಿಕೆ’ ಹೊರತಂದವರು ಮತ್ತೆ ಹಿಂದುರುಗಿ ನೋಡಲಿಲ್ಲ. ಬರಹದಲ್ಲಿ ದೈತ್ಯರೆನಿಸಿಕೊಂಡರು. ಆ ಬರವಣಿಗೆಯೋ ಮುತ್ತು ಪೋಣಿಸಿದಂತೆ, ಒಂದೆ ಒಂದು ವಾಕ್ಯ ಬಿಟ್ಟು ಓದಿದರೂ ಶ್ರುತಿ ತಪ್ಪಿದಂತೆ. ಪತ್ರಿಕೆಗೆ ಬರೆಯುತ್ತಲೇ, ಪುಸ್ತಕಗಳನ್ನು ಬರೆದರು. ಶಾಲೆ ಕಟ್ಟಿ ಬೆಳೆಸಿದರು. ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂರಿಂದ ಪ್ರಶಸ್ತಿ ಪಡೆದಿದ್ದ ಈ ಶಿಕ್ಷಣ ಸಂಸ್ಥೆ ಇಂದು ಸುಮಾರು ಎಂಟುವರೆ ಸಾವಿರ ಮಕ್ಕಳು ಹೊಂದಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

ಇದರ ಜೊತೆಗೆ ಟೀವಿಯಲ್ಲಿ ಕ್ರೈಂ ಡೈರಿ ಕಾರ್ಯಕ್ರಮ ಶುರುವಾಯ್ತು ನೋಡಿ! ಇವರ ವಿಶಿಷ್ಟ ಕಂಠ ಸಿರಿಯನ್ನ ಕನ್ನಡನಾಡು ಕೊಂಡಾಡಿತ್ತು. ಆ ನಿರೂಪಣೆಯ ತಾಕತ್ತು ಮಲಗಿದ್ದವನನ್ನು ಎದ್ದು ಕುಳಿಸುವಂತದ್ದು! ಪ್ರೀತಿ, ಕರುಣೆ, ದುಖಃ, ಆಕ್ರೋಶ ಹೀಗೆ ಭಾವನೆಗಳ ಹದವರಿತು ನಿರೂಪಿಸುವ ರೀತಿ, ಎಲ್ಲರ ಮನಸ್ಸು ನಾಟಿತ್ತು. ಈಗಿನ ಬಹುತೇಕ ಕಾರ್ಯಕ್ರಮಗಳಂತೆ ಸುತ್ತಿ ಬಳಸಿ ಹೇಳಿ ವೀಕ್ಷಕರನ್ನು ಫೂಲ್ ಮಾಡುತ್ತಿರಲಿಲ್ಲ. ಗಟ್ಟಿತನವಿತ್ತು. ಕ್ರೈಂ ರಹಸ್ಯ ಭೇದಿಸುವ ಪತ್ತೇದಾರಿ ಕಾರ್ಯಕ್ರಮವಾದರೆ ಅದರ ವಿಶ್ಲೇಷಣೆ, ತುಲನೆ, ರೋಚಕತೆಯೇ ಸೊಗಸು. ಈ ದಿನಗಳಲ್ಲಿ ಬರುವ ಕಾರ್ಯಕ್ರಮಗಳ ನಿರೂಪಣೆ ಬಹುತೇಕ ಅಂದಿನ ರವಿಬೆಳಗರೆಯವರ ಧ್ವನಿ,ಧಾಟಿಯ ಕೃತ್ರಿಮ ರೂಪಗಳೆ. ಅದೇ ಸಮಯದಲ್ಲಿ ಈ ಟೀವಿಯಲ್ಲಿ “ಎಂದೂ ಮರೆಯದ ಹಾಡು” ಕಾರ್ಯಕ್ರಮ ಇವರದೆ ನಿರೂಪಣೆಯಲ್ಲಿ ಜನಪ್ರಿಯಗೊಳ್ಳುತ್ತದೆ. ಹಾಡು ಬರೆದ ಕವಿಯನ್ನು ಕೊಂಡಾಡುತ್ತಾ ಸ್ವಾರಸ್ಯಕರ ಸಾಲುಗಳ ಅರ್ಥವನ್ನು ಬಿಡಿಸಿ ಹೇಳುವುದರಲ್ಲಿ ನಿಸ್ಸೀಮರು. ಬೆಳಗೆರೆ ಇದ್ದರೆ ಟೀವಿ ಟಿ.ಆರ್.ಪಿ ಏರುಗತಿಯಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲವಾಗಿತ್ತು.
ಪಾಕಿಸ್ತಾನ, ಕಜಕಿಸ್ತಾನ, ತಜಕ್ ಸ್ತಾನ್, ಅಫ್ಘಾನಿಸ್ತಾನ ಮುಂತಾದ ವಿಚಿತ್ರ ದೇಶಗಳಿಗೇ ಹೋಗಿ ಅಲ್ಲಿನ ಬದುಕನ್ನು ಅರಿತು, ಬರೆದು, ನಮಗೆ ಓದಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ, ಸ್ಥಳದಲ್ಲೇ ನಿಂತು ಗ್ರೌಂಡ್ ರಿಪೋರ್ಟಿಂಗ್ ನಡೆಸಿದಂತಹ ಎದೆಗಾರ. ಹೆಚ್ಚೇಕೆ ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಪುಲ್ವಾಮ ಬಾಂಬ್ ಸ್ಪೋಟವನ್ನು ನಾವೆಲ್ಲ ಟೀವಿ ನೋಡುತ್ತಾ ಕುಳಿತರೆ, ಇವರು ಮಾತ್ರ ಎರಡು ಸಾವಿರದ ಎಂಟುನೂರ ಕಿ.ಮಿ ಗಳನ್ನು ಪ್ರಯಾಣಿಸಿ, ಘಟನಾ ಸ್ಥಳಕ್ಕೆ ಭೇಟಿಕೊಟ್ಟು, ತನ್ನ ಈ ವಯಸ್ಸಿನಲ್ಲಿಯೂ ಯುವಕರನ್ನೂ ನಾಚಿಸುವಂತೆ ವರದಿ ನೀಡುತ್ತಾರೆ. ಹಾರುವ ಗುಂಡಿಗೆ ಯಾರೂ ಸಾಯಬಹುದಾದ ಪಿಂಗ್ಲಿನಾದ ಅಂಗಳದಲ್ಲಿ ನಡೆಯುತ್ತಿದ್ದ ಎನ್ಕೌಂಟರನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ.ಇದಲ್ಲವೇ ಉತ್ಸಾಹ !ಇದಲ್ಲವೇ ಕಸುಬುದಾರಿಕೆ ! ಟೀಕೆಗಳು, ವಿವಾದಗಳು ಏನೇ ಇರಲಿ. ನಾವು ಬಿಳಿ ಹಾಳೆಯಲ್ಲಿರುವ ಆ ಬೊಟ್ಟನ್ನೆ ದಿಟ್ಟಿಸಿದರೆ ದೊಡ್ಡ ಮೂರ್ಖರಾಗುತ್ತೇವೆ. ಇವರು ಬರೆದದ್ದು ಒಂದು ಹಾಳೆ ಒಂದು ಪುಸ್ತಕವಲ್ಲ ಬರೋಬ್ಬರಿ ಎಂಭತ್ತೆಂಟು ಪುಸ್ತಕಗಳು. ಬೆಳಗರೆಯಿಂದ ಪ್ರಭಾವಿತರಾಗಿ, ಓದಿದವರು, ಜೀವನ ಕಟ್ಟಿಕೊಂಡವರು ಪ್ರತೀ ಊರಿನಲ್ಲಿಯೂ ಸಿಗುತ್ತಾರೆ. ಇವರಿಂದ ಪ್ರೇರಿತರಾಗಿ ಬರಹವನ್ನೂ ಆರಂಭಿಸಿ ಯಶಸ್ವಿಯಾದವರಿದ್ದಾರೆ. ಅಂತಹ ಯಶಸ್ವಿಯಾದವರ ಹಲವರ ಅಂಗೈಯಲ್ಲಿ ಈ ಒಂದು ಗೆರೆಯಿದೆ. ಆ ಗೆರೆಯೆ ರವಿಬೆಳಗೆರೆ!
ರಾಘವೇಂದ್ರ ಹಿರಿಯಣ್ಣ ಗುಂಡ್ಮಿ.

Leave a Comment