ಗಲ್ಲು ಶಿಕ್ಷೆಗೆ ಗುರಿಯಾದ ಹಂತಕ ಗಳಗಳನೆ ಅತ್ತಾಗ ಜನರು ಸಂಭ್ರಮಿಸುತ್ತಿದ್ದರು!  

ಇದು ಕರಾವಳಿಯನ್ನ ಬೆಚ್ಚಿ ಬೀಳಿಸಿದ ಅಪರಾಧ ಪ್ರಕರಣ

ಅರಬ್ಬಿ ಕಡಲು ಆರುತಿಂಗಳ ಗರ್ಭಿಣಿ ಹೆಣ್ಣಿನ ಮರಣ ಚೀತ್ಕಾರವನ್ನ ಜೀರ್ಣಿಸಿಕೊಂಡ ಕರುಣಾಜನಕ ಕಥೆಯೊಂದನ್ನ ನಿಮಗೆ ಹೇಳುತ್ತೇನೆ ಕೇಳಿ.

♦ವಸಂತ್ ಗಿಳಿಯಾರ್

ನಿಮಗೆ ನೆನಪಿರಬಹುದು ಈಗ್ಗೆ ಐದು ವರ್ಷದ ಹಿಂದೆ ಆರುತಿಂಗಳ ಬಸುರಿ ಹೆಣ್ಣು ಇಂದಿರಾಳನ್ನ ತನ್ನ  ದೇಹದಾಯಕ್ಕೆ ಬಳಸಿಕೊಂಡು ಅತಿನೀಚ ಬಯಕೆಗಾಗಿ ಆಕೆಯ ಬದುಕನ್ನೇ ಆಹುತಿಯಾಗಿಸಿಕೊಂಡು ಪಾಪಿಗಳ ಪುಸ್ತಕದ ಸರಕಾದ ಪಾತಕಿಯೊಬ್ಬನ ಕಥೆ! ಆ ನತದೃಷ್ಟ ಹೆಣ್ಣಿನ ದುರಂತ ಕಥೆಯನ್ನ ಮತ್ತೇಕೆ ಬರೆಯಬೇಕು ಎಂದು ನಿಮಗೂ ಅನ್ನಿಸಿರಬೇಕು..  ಐದು  ವರ್ಷದ ಹಿಂದೆ ಈ ವರದಿ ಬರೆಯುವಾಗ ಮನದ ತುಂಬಾ ತುಂಬು ಆಕ್ರೋಶವಿದ್ದರೆ ಈಗ ಒಂದಷ್ಟು ಸಮಾಧಾನವಿದೆ.. ಸತ್ತ ಇಂದಿರಾ ಮತ್ತು ಆಕೆಯ ಒಡಲಲ್ಲೇ ಮಿಸುಕಾಡಿ ಉಸಿರು ನೀಗಿಕೊಂಡ ಆರು ತಿಂಗಳ ಬ್ರೂಣ ಮತ್ತೆ ಬದುಕಿ ಬರಲಾರರು ಹೌದಾದರೂ ಆ ಎರಡು ಅಮಾಯಕ ಜೀವವನ್ನ ಕೊಂದ ಪಾತಕಿಯನ್ನ ಬದುಕಗೊಡಬೇಡಿ ಎಂಬುದಾಗಿ ಕುಂದಾಪುರದಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯದ ಘನತೆಯನ್ನ ಹೆಚ್ಚಿಸಿದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಷರಾ ಬರೆದಾಗಿ ಎರಡು ವರ್ಷಗಳೇ ಕಳೆದಿವೆ.  ಹೌದು, ಹಂತಕ ಪ್ರಶಾಂತನಿಗೆ  ಎರಡು ವರ್ಷದ ಹಿಂದೆಯೇ ಗಲ್ಲುಶಿಕ್ಷೆ ಘೋಷಣೆಯಾಗಿದೆ ’ಇವನು ಎಂದಿಗೂ ಕ್ಷಮೆಗೆ ಅನರ್ಹ ಅಂತನ್ನಿಸಿತೇನು ? ಆತನಿಗೆ ಗಲ್ಲು ಶಿಕ್ಷೆಯನ್ನೇ ಪ್ರಕಟಿಸಿದ ಪೆನ್ನಿನ ನಿಬ್ಬನ್ನ ಮುರಿಯದೆ ಪೆನ್ನನ್ನೇ ಎಸೆದು ಎದ್ದು ಹೊರಟು ಬಿಟ್ಟರು ನ್ಯಾಯಾಧೀಶ ಖಂಡೇರಿ.. ಕೋರ್ಟಿನ ಹೊರಗೆ ನಿಂತಿದ್ದ ಹಿಂಡುಗಟ್ಟಲೆ ಜನ ಇಂದಿರಾಳ ಮತ್ತು ನಿಷ್ಪಾಪಿ ಆರುತಿಂಗಳ ಬ್ರೂಣದ ಆತ್ಮಕ್ಕೆ ಸದ್ಗತಿ ಕೊಡಬಲ್ಲ  ತೀರ್ಪು ಬರುವಂತೆ ನ್ಯಾಯಾಲಯದಲ್ಲಿ ಹೋರಾಟ ಕೊಟ್ಟ ವಿಷೇಶ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಕುಂದಾಪುರದ ಪ್ರಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರರಿಗೆ ಷಹಬ್ಬಾಸ್ ಎನ್ನುತ್ತಿದ್ದರೆ ಆಗ ಬಿಕ್ಕಳಿಸಿ ಅತ್ತ ನೋಡಿ ಪಾಪಿ ಪ್ರಶಾಂತ… ಅವನಲ್ಲಿ ಪ್ರಾಯಶ್ಚಿತವಿತ್ತಾ? ಅಥವ ತನ್ನ ಸಾವಿಗೆ ಷರ ಬರೆದರಲ್ಲಾ ? ಎನ್ನುವ ವೇದನೆಯಿತ್ತಾ ? ಗೊತ್ತಿಲ್ಲ. ಆದರೆ ನಮಗೆ ಆತನ ಮೇಲೆ ಒಂಚೂರು ಕರುಣಿಯಿಲ್ಲ.. ದೇವರೂ ಕೂಡ ಅವನನ್ನ ಕ್ಷಮಿಸದಿರಲಿ . .. .

 ಕದಿಯಲು ಬಂದವನು ಹಂತಕನಾದ

ಅವನು ಪ್ರಶಾಂತ್ ಮೊಗವೀರ,  ಇಂದಿರಾ ಹತ್ಯೆಗೂ ಮೊದಲು ಆತನ ಮೇಲೆ ಒಟ್ಟು ಏಳು ಪ್ರಕರಣಗಳಿದ್ದವು.. ಮಲ್ಪೆಯ ಬೂಟಿನಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಆತ ಹಿರಿಯಡ್ಕ ಜೈಲಿನ ಪರಿಚಯ ಮಾಡಿಕೊಂಡು, ಜೈಲೂಟಕ್ಕೆ ಸೆಟ್ ಆಗಿಯೇ ಹೊರ ಬಂದಿದ್ದ.. ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ಜೈಲಿನ ಸೆಲ್ಲಿನ ಅಳತೆ ಮಾಡಿಕೊಂಡೂ ಬಂದ.. ಅಲ್ಲೆ ತಗುಲಿತ್ತ ಅವನಿಗೆ ಆ ಮಾತ್ರೆ ತಿನ್ನುವ ಖಯಾಲಿ ? ಅದು ವಿಕ್ಷಿಪ್ತ ಮತ್ತು ಬರಿಸುವ ಮಾತ್ರೆ.. ಅಫೀಮಿಗೂ ಮಿಗಿಲು ಎನ್ನುವವರಿದ್ದಾರೆ..  ಹಾಗೆ ಮತ್ತು ಬರಿಸುವ ಮಾತ್ರೆ ತಿನ್ನುವುದನ್ನ ಜೈಲಿನೊಳಗೇ ಅಭ್ಯಾಸಮಾಡಿಕೊಂಡು ಬಿಟ್ಟಿದ್ದ ಪ್ರಶಾಂತ ಪಕ್ಕಾ ರಾಕ್ಷಸನಾಗಿಯೇ ರೂಪಾಂತರಗೊಂಡಿದ್ದ… ಅದು ೨೦೧೫ ರ ಎಪ್ರಿಲ್ ತಿಂಗಳ ಹನ್ನೊಂದನೆ ತಾರೀಕು.. ತೆಕ್ಕಟ್ಟೆಯ ವಿನಯ್ ಬಾರಿನಲ್ಲಿ ಸಂಜೆ ತನಕವೂ ಕುಂತು ಕುಡಿದಿದ್ದ ಪ್ರಶಾಂತ ಅಲ್ಲೆ ಪಕ್ಕದಲ್ಲಿದ್ದ ವೆಲ್ಡಿಂಗ್ ಶಾಪಿನಲ್ಲಿದ್ದ ಕೆಲಸದವನ ಸೈಕಲ್ಲೊಂದನ್ನು ಕದ್ದವನೇ  ಪಡುಗೋಪಾಡಿಯ ಕಡಲ ಕಿನಾರೆಯತ್ತ ಹೊರಟಿದ್ದ.. ಕಳ್ಳತನ ಪ್ರಶಾಂತ ಮೈಗಂಟಿಸಿದ್ದ. ಪ್ರಶಾಂತನ ಪೊಟೋಗಳನ್ನ ನೋಡಿದರೇನೇ ಅರ್ಥವಾಗುತ್ತದೆ ಇವನೊಬ್ಬ ಅತಿನೀಚ ವಿಕೃತಿಯ ಮನುಷ್ಯ ಎನ್ನುವುದು. ಆತನ ಹಾವ ಭಾವಗಳಲ್ಲಿ ಅದು ಪೂರ್ತಿಯಾಗಿ ವ್ಯಕ್ತವಾಗುತ್ತಿತ್ತು. ಅವತ್ತು ಕುಡಿದು ಮತ್ತನಾಗಿ ಸೈಕಲ್ ಕದ್ದು ಹೊರಟ ಪ್ರಶಾಂತ ಕಡಲ ಕಿನಾರೆಯಲ್ಲಿರುವ ಒಂಟಿ ಮನೆಗಳಲ್ಲಿರುವ ದೇವರ ಕಾಣಿಕೆ ಡಬ್ಬದ ಕಳ್ಳತನಕ್ಕೆ ಸ್ಕೆಚ್ಚು ಹಾಕಿದ್ದ. ಕಡಲಂಚಿನ ಮೊಗವಿರ ಮನೆಗಳಲ್ಲಿ ದೇವರ ಡಬ್ಬಗಳಿರುವುದು ಸಾಮಾನ್ಯ.. ಅದನ್ನ ಕಳ್ಳತನ ಮಾಡಲಿಕ್ಕೆಂದು ಪ್ರಶಾಂತ್ ಹೊರಟಿದ್ದ.. ಬೀಜಾಡಿ ಕಡಲ ಕಿನಾರೆಯ ಕೊನೆಯ ಮನೆ ಲಿಂಗಜ್ಜಿ ಮನೆ.. ಆ ಮನೆಯಲ್ಲಿ ಇಂದಿರಾ ಮತ್ತು ಆಕೆಯ ಸಹೋದರಿ ಗಿರಿಜಾ ಮತ್ತು ಗಿರಿಜಾಳ ಮಗಳು ಪ್ರತಿಮಾ ಇರುತ್ತಿದ್ದರು… ಕೆಲ ದಿನಗಳ ಹಿಂದಷ್ಟೇ ಗಿರಿಜಾಳ ಮಗ ಕಡಲಿಗೆ ಬಿದ್ದು ಸಾವಿಗೀಡಾದ ನೋವಿನಲ್ಲಿತ್ತು ಆ ಕೂಡು ಕುಟುಂಬ

ಆರುತಿಂಗಳ ಬಸುರಿ

ಆ ಹುಡುಗಿ ಇಂದಿರಾಳಿಗೆ ಮೊವ್ವತ್ತ ಮೂರು ವರ್ಷ ಪ್ರಾಯ.. ಕಡಲ ಕಸುಬಿನ ಆನಂದ್ ಎನ್ನುವ ಶ್ರಮಜೀವಿಯ ಜೊತೆ ಮದುವೆಯಾಗಿತ್ತು.. ಆಕೆಗೊಬ್ಬ ಮೂರು ವರ್ಷದ ಗಂಡು ಮಗನಿದ್ದ  ಅನ್ವಿತ್ ಆ ಮಗುವಿನ ಹೆಸರು.. ಆಕೆಯ ಹೊಟ್ಟೆಯೊಳಗೊಂದು ಹೆಣ್ಣುಬ್ರೂಣವಿತ್ತು.. ಹುಟ್ಟಿದ್ದರೆ ಮನ್ವಿತಾ ಎಂದು ಹೆಸರಿಡುತ್ತಿದ್ದರಾ ? ಆರತಿಗೊಬ್ಬಳು ಮಗಳು ಕೀರಿತಿಗೊಬ್ಬ ಮಗ! ಎಷ್ಟು ಚೆಂದಗಿರುತ್ತಿತ್ತಲ್ಲಾ ಇಂದಿರಾ ಮತ್ತು ಆನಂದ್ ಬದುಕು ?  ಅವತ್ತು ಅಕ್ಕ ಗಿರಿಜಾ ಮತ್ತು ಅಕ್ಕನ ಮಗಳು ಪ್ರತಿಮಾ ಕೊಂಚ ದೂರದ ಮನೆಯೊಂದಕ್ಕೆ ತೆರಳಿದ್ದಳು.. ಇಂದಿರಾ ಮನೆಗೆ ಚಾಚಿಕೊಂಡೇ ಇದ್ದ ಕಟ್ಟಿಗೆಯ ಕೊಟ್ಟಿಗೆಯಲ್ಲಿ ಕಟ್ಟಿಗೆ ಜೋಡಿಸುತ್ತಿದ್ದಳು.. ಆ ಗ ಕೇಳಿಸಿತು ಆ ದನಿ.. ’ಅಕ್ಕಾ ನೀರು ಕೊಡ್ತೀರಾ? ಹಾಕೆ ಅಕ್ಕಾ ಎಂದು ಕರೆದಿದ್ದ ಹಂತಕ ಪ್ರಶಾಂತನ ಮೆದುಳಿಗೆ ಕುಡಿದ ಅಮಲು ಅಂಟಿಕೊಂಡಿತ್ತಲ್ಲಾ ?  ಚೆಂದನೆ ಹೆಣ್ಣು ಇಂದಿರಾಳನ್ನ ನೋಡಿದೊಡನೆಯೇ ಅವನೊಳಗಿನ ಪೈಶಾಚಿಕ ಕಾಮುಕ ಜಾಗೃತನಾದ.. ಆಕೆಯ ಕೊರಳಿನಲ್ಲಿ ಜೋತಾಡುತ್ತಿದ್ದ ಮಾಂಗಲ್ಯಸರವನ್ನ ಕಂಡೊಡನೆ ಪ್ರಶಾಂತನೊಳಗಿನ ಕಳ್ಳ ಎಚ್ಚರಗೊಂಡಿದ್ದ..  ಮನೆಯ ಅಂಗಳದಲ್ಲಿ ನಿಂತು ನೀರು ಕೇಳಿದರೆ ಯಾರಾದರೂ ಒಲ್ಲೆ ಎಂದಾರೆ ? ಅದೂ ಕರಾವಳಿಯಲ್ಲಿ ? ! ನೀರು ತರಲೆಂದು ಇಂದಿರಾ ಮನೆಯೊಳಗೆ ಹೋಗುತ್ತಿದ್ದಂತೆ ಪ್ರಶಾಂತ ಮನೆಯಲ್ಲಿ ಇವಳನ್ನ ಬಿಟ್ಟರೆ ಮಿಕ್ಕವರು ಯಾರೂ ಇಲ್ಲ ಎನ್ನುವುದನ್ನ ನಿಕ್ಕಿ ಮಾಡಿಕೊಂಡಿದ್ದಾನೆ. ನೀರು ಕೊಟ್ಟ ಇಂದಿರಾ ಮತ್ತೆ ಕಟ್ಟಿಗೆ ಕೊಟ್ಟಿಗೆಗೆ ಹೋಗುತ್ತಿದ್ದಂತೆಯೇ ಆಕೆಯನ್ನ ಹಿಂಬಾಲಿಸಿಕೊಂಡು ಹೋಗಿದ್ದಾನೆ.. ಅವತ್ತು ಕುಂದಾಪುರದ ಖಡಕ್ ಸಿ.ಪಿ.ಐ. ದಿವಾಕರ್ ಮುಂದೆ ನಡೆದ ಎಲ್ಲಾ ಘಟನೆಯನ್ನೂ ಪ್ರಶಾಂತ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.. ಕಟ್ಟಿಗೆಯ ಕೊಟ್ಟಿಗೆಯೊಳಗೇ ಪಶುವಿನಂತೆ ಇಂದಿರಾಳ ಮೇಲೆ ಬಿದ್ದ ಪ್ರಶಾಂತ ಮೊದಲು ಆಕೆಯನ್ನ ಅತ್ಯಾಚಾರ ನಡೆಸಿದ್ದಾನೆ.. ಇಂದಿರಾ ಪ್ರತಿಭಟಿಸಿದಾಗ ಆಕೆಗೆ ಥಳಿಸಿ ಅತ್ಯಂತ ನಿರ್ಧಯವಾಗಿ ಅತ್ಯಂತ ನಿರ್ಭಯವಾಗಿ ಅತ್ಯಾಚಾರ ನಡೆಸಿದ್ದಾನೆ.. ಆಕೆಯ ತೊಡೆ, ಕೆನ್ನೆ, ಮತ್ತು ಮೈ ಮೇಲೆ ಪ್ರಶಾಂತ ಪೈಶಾಚಿಕವಾಗಿ ಕಚ್ಚಿದ ಹಲ್ಲಿನ ಗುರುತುಗಳು ಸ್ಪಷ್ಟವಾಗಿ ಮೂಡಿದ್ದವು. ಒಟ್ಟು ನಲವತ್ತಾರು ಗಾಯದ ಗುರ್ತುಗಳು ಆಕೆಯ ದೇಹದ ಮೇಲಾಗಿದ್ದರೆ ಹದಿನೈದು ಗಾಯದ ಚಹರೆಗಳನ್ನ ಪ್ರಶಾಂತನ ಮೈಮೇಲೆ ಗುರುತಿಸಲಾಗಿದೆ.. ಮೊದಲು ಇಂದಿರಾಳನ್ನ ಭೀಕರವಾಗಿ ಅತ್ಯಾಚಾರ ನಡೆಸಿ ನಂತರ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತು ಆರಾಮಾಗಿ ನಡೆದೇ ಹೊರಟಿದ್ದ ಪ್ರಶಾಂತ. ಆತ ನಡೆದು ಹೋಗುತ್ತಿದ್ದದ್ದನ್ನ, ಆತನ ಅಂಗಿಯಲ್ಲಿ ರಕ್ತದ ಕಲೆಗಳಿದ್ದದ್ದನ್ನ ನೋಡಿದವರಿದ್ದಾರೆ.. ಮತ್ತು ಅವರೆಲ್ಲರೂ ಕೋರ್ಟಿಗೆ ಬಂದು ಸಾಕ್ಷಿ ನುಡಿದಿದ್ದಾರೆ.. ಒಟ್ಟು ಇಪ್ಪತ್ತಮೂರು ಸಾಕ್ಷಿಗಳ ವಿಚಾರಣೆಯನ್ನ ನಡೆಸಿದೆ ನ್ಯಾಯಾಲಯ.. ಎಲ್ಲಿಯೂ ಪ್ರಶಾಂತ್ ಬಚಾವಾಗದಂತೆ ಎಚ್ಚರಿಕೆಯಲ್ಲೇ ವಾದಿಸಿದ್ದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ್ . .

ಸಿಕ್ಕಿಬಿದ್ದ ಹಂತಕ

ಇಂದಿರಾಳನ್ನ ಅತ್ಯಾಚಾರ ಮಾಡಿ, ಆಕೆಯ ಮಾಂಗಲ್ಯವನ್ನೂ ದೋಚಿ ಸಣ್ಣದೊಂದು ವಿಷಾದದ ಛಾಯೆ ಇರದೆ ಎದ್ದು ನಡೆದಿದ್ದ ಪ್ರಶಾಂತ ಮೊಗವೀರನನ್ನ ಬಂಧಿಸಲಿಕ್ಕೆ ಕುಂದಾಪುರದ ಪೊಲೀಸರಿಗೆ ಹೆಚ್ಚು ಸಮಯ ಬೇಕಿರಲಿಲ್ಲ. ಬೀಜಾಡಿಯ ಬೀಟ್ ಪೊಲೀಸ್ ಗೋಪಾಲ್ ಪ್ರಶಾಂತನನ್ನ ಬಂಧಿಸಿ ಸಿ.ಪಿ.ಐ. ಮುಂದೆ ಹಾಜರು ಪಡಿಸಿದ್ದರು. ಪ್ರಶಾಂತನಿಗೆ ವರ್ಕ್ ಮಾಡುತ್ತಿದ್ದಂತೆಯೇ ಎಲ್ಲವನ್ನೂ ತಾನು ಒಪ್ಪಿಕೊಂಡಿದ್ದ. ನಂತರ ಆತನನ್ನ ಉಡುಪಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಹೊಚ್ಚ ಹೊಸಾದೊಂದು ಕಥೆಯನ್ನೇ ಸೃಷ್ಠಿಸಿ ಹೇಳಿದ್ದ ಪ್ರಶಾಂತ ಪೊಲೀಸರಿಗೆ ಪೊಲೀಸರೇ ಬೆಚ್ಚಿಬೀಳುವಂತೆ ಮಾಡಿ ಬಿಟ್ಟಿದ್ದ.. “ಸರ್, ಇಂದಿರಾಳ ಕೊಲೆ ಮಾಡಿರೋದನ್ನ, ಅತ್ಯಾಚಾರ ಮಾಡಿರೋದನ್ನ ನಾನೇ ಕಣ್ಣಾರೆ ನೋಡಿದ್ದೇನೆ.. ನಾನು ಆ ಮನೆಗೆ ಕಳ್ಳತನ ಮಾಡೋಕೆ ಹೋಗಿದ್ದು ನಿಜ ಆದ್ರೆ ಕೊಲೆ ಮಾಡಿದ್ದಾಗಲಿ, ಅತ್ಯಾಚಾರ ಮಾಡಿದ್ದಾಗಲಿ ನಾನಲ್ಲ! ಆ ಮೂವರು ಅತ್ಯಾಚಾರ ಮಾಡ್ತಾ ಇದ್ರು.. ಅದನ್ನ ತಪ್ಪಿಸೋಕೆ ಅಂತ ನಾನು ಹೋಗಿದ್ದು.. ಆಗ ನನ್ನ ಅಂಗಿಗೆ ರಕ್ತದ ಕಲೆ ಅಂಟಿಕೊಂಡದ್ದು’ ಎಂದುಬಿಟ್ಟಿದ್ದ ಪ್ರಶಾಂತ.. ತನ್ನ ವಿರುದ್ದ ಸಾಕ್ಷಿ ಹೇಳಲು ಬಂದವರನ್ನೇ ಕೊಲೆಗಾರರು, ಅತ್ಯಾಚಾರ ಮಾಡಿದವರು, ಸರಗಳ್ಳರು ಎನ್ನುವಂತೆ ಕಥೆ ಹೆಣೆದ ಪ್ರಶಾಂತ ತಾನೇ ಆ ಖೆಡ್ಡಾದೊಳಕ್ಕೆ ಸಿಕ್ಕಿ ಬಿದ್ದಿದ್ದ.. ನಾನಲ್ಲಿಗೆ ಕದಿಯಲು ಹೋಗಿದ್ದೆ ಎಂದು ಪ್ರಶಾಂತ ಹೇಳಿದ್ದರಿಂದ ತಾನೇ ತಪ್ಪನ್ನ ಒಪ್ಪಿಕೊಂಡ ಹಾಗೆ ಆಗಿತ್ತು.. ಉಡುಪಿ ನ್ಯಾಯಾಧೀಶರೂ ಈತನ ಕಥೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ನೇರವಾಗಿ ಜೈಲಿಗೆ ಕಳುಹಿಸಿದ್ದರು..

ಐತಿಹಾಸಿಕ ತೀರ್ಪು

ಅವತ್ತು ಕುಂದಾಪುರ ಕೋರ್ಟ್ ನೀಡಿದ ಮರಣದಂಡನೆಯ ತೀರ್ಪು ಅತ್ಯಂತ ಐತಿಹಾಸಿಕವಾದ ತೀರ್ಪು. ಇಡೀ ಕರಾವಳಿ ಜಿಲ್ಲೆಯೇ ಹೀಗಿನದ್ದೊಂದು ತೀರ್ಪನ್ನು ನಿರೀಕ್ಷೆ ಮಾಡುತ್ತಿತ್ತು.. ಜನರ ಭಾವನೆ ಗೆದ್ದಿದೆ. ಪ್ರಶಾಂತನ ಮೇಲೆ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ  ಐ.ಪಿ.ಸಿ ಸೆಕ್ಷನ್ ೪೪೮ ಕ್ಕೆ  ಒಂದು ವರ್ಷ ಕಠಿಣ ಸಜೆ ಒಂದು ಸಾವಿರ ದಂಡ,  ಕಳ್ಳತನ ಉದ್ದೇಶದಿಂದ ಅತಿಕ್ರಮ ಪ್ರವೇಶಕ್ಕೆ ಸೆಕ್ಷನ್ ೪೫೧ ಕ್ಕೆ  ೪ ವರ್ಷ ಸಜೆ ಎರಡು ಸಾವಿರ ದಂಡ,  ಕರಿಮಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ  ಸೆಕ್ಷನ್ 392 ಕ್ಕೆ ಹತ್ತು ವರ್ಷ ಕಠಿಣ ಸಜೆ, 30 ಸಾವಿರ ದಂಡ, ಮಹಿಳೆಯ ಮೇಲಿನ ಅತ್ಯಾ಼ಚಾರ ಕ್ಕೆ ಸೆಕ್ಷನ್ 376 ಕ್ಕೆ ಹತ್ತು ವರ್ಷ ಸಜೆ, ನಲವತ್ತು ಸಾವಿರ ದಂಡ, ಗರ್ಭಿಣಿ ಮಹಿಳೆ ಕೊಲೆಯ ಜೊತೆಗೆ 6 ತಿಂಗಳ ಹೆಣ್ಣು  ಬ್ರೂಣದ ಸಾವಿಗೆ ಕಾರಣನಾಗಿದ್ದಕ್ಕೆ  ಐ.ಪಿ.ಸಿ. ಸೆಕ್ಷನ್ 202 ರ ಅಡಿಯಲ್ಲಿ  ಮರಣದಂಡನೆ ತೀರ್ಪು! ಹೀಗೆ ಒಂದೊಂದು ಪ್ರಕರಣಕ್ಕೂ ಒಂದೊಂದು ಪ್ರಕರಣದ ಕುರಿತಾಗಿಯೂ ತಿರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಧೀಶರ ತಿರ್ಪನ್ನು ಸೂಕ್ಷ್ಮವಾಗಿ ಆಲಿಸುತ್ತಿದ್ದ ಪ್ರಶಾಂತ್ ಕನಲಿ ಹೋಗುತ್ತಿದ್ದ.. ಮರನದಂಡನೆಯ ತೀರ್ಪು ಪ್ರಕಟವಾಗುತ್ತಿದ್ದಂತೆ ಬಿಕ್ಕಳಿಸಿ ಅತ್ತು ಬಿಟ್ಟ.. ಆದರೆ ಪಾಪಿಯೊಬ್ಬನ ಕಂಗಳಲ್ಲಿ ಸುರಿಯುತ್ತಿದ್ದ ಅಶ್ರುಧಾರೆಗೆ ಯಾವ ಮನ ಮಿಡಿದೀತು ಹೇಳಿ ? ಖುದ್ದು ಆತನನ್ನ ಹೆತ್ತ ತಾಯಿಯೂ ಪ್ರಶಾಂತನ ಕಡೆಗೆ ಕರುಣೆಯಿಂದ ನೋಡಲಾರಳು! ಸೆರೆ ಸಿಕ್ಕ ನಂತರದ ದಿನದಿಂದಲೂ ಜೈಲಿನಲ್ಲಿದ್ದ ಪ್ರಶಾಂತ ಇನ್ನು ಜೈಲಿನಿಂದ ಜೀವಂತವಾಗಿ ಹೊರಬರಲಾರ ಎನ್ನುವುದೊಂದೇ ನೆಮ್ಮದಿ.. ಈತ ನಡೆಸಿದ ಹೇಯ ಕೃತ್ಯಕ್ಕೆ ಎಲ್ಲಿಯೂ ಕ್ಷಮಾಧಾನ ದೊರಕಲಾರದು.. ಈ ತೀರ್ಪನ್ನು ಯಾವ ನ್ಯಾಯ ವ್ಯವಸ್ಥೆಯೂ ಪ್ರಶ್ನಿಸಲಾರದು ಎನ್ನುವ ಭರವಸೆ ಕರಾವಳಿಯ ಜನತೆಗಿದೆ..

 ಇಂದಿರಾ ಕೊಲೆಗೆ ಕಾರಣನಾದ ಪ್ರಶಾಂತನಿಗೆ ಮರಣದಂಡನೆಯೇ ಆಗಲಿ ಎಂದು ಅನುದಿನವೂ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ.. ನನ್ನ ಹೆಂಡತಿ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ನಮ್ಮಿಬ್ಬರ ಮಗಳು ಪ್ರತೀ ಕ್ಷಣವೂ ನನ್ನ ಕಣ್ಣಮುಂದೆ ಬಂದ ಹಾಗೆ ಅನ್ನಿಸುತ್ತದೆ..  ಪ್ರಶಾಂತ ಬದುಕಲು ಅರ್ಹನಲ್ಲ.. ವಿಧಿ ಅನ್ಯಾಯ ಮಾಡಿದರೂ ನ್ಯಾಯ ದೇವತೆ ನಮಗೆ ನ್ಯಾಯ ಕೊಟ್ಟಿದ್ದಾಳೆ.. ಪ್ರಶಾಂತನಿಗೆ ಗಲ್ಲು ಶಿಕ್ಷೆ ನೀಡಿದ ನ್ಯಾಯಾಧೀಶರನ್ನ ಮತ್ತು ಅನ್ಯಾಯದ ವಿರುದ್ದ ಹೋರಾಡಿದ ನ್ಯಾಯವಾಧಿ ರವಿಕಿರಣ್ ಮುರುಡೇಶ್ವರರನ್ನ ದೇವರು ಕಾಪಾಡಲಿ’ ಎನ್ನುತ್ತಾರೆ ಇಂದಿರಾ ಪತಿ ಆನಂದ್, ಅವರ ಯಾತನೆ ನಿಮಗೂ ಅರ್ಥವಾಗುತ್ತಿದೆ ತಾನೆ ? ಅವರ ಮಾತನನ್ನ ಕೇಳಿಸಿಕೊಂಡಿರಲ್ಲಾ ? ನನ್ನ ಪತ್ನಿ ಮತ್ತು ಆರು ತಿಂಗಳ ಹೆಣ್ಣು ಬ್ರೂಣ ನನ್ನ ಪ್ರತೀ ಕ್ಷಣವೂ ನೆನಪಿಗೆ ಬಂದು ಕಾಡುತ್ತಾರೆ ಎನ್ನುವಾಗ ಯಾರ ಕಣ್ಣಂಚಾದರೂ ತೇವಗೊಳ್ಳಲೇ ಬೇಕು..  ದೇವರು ದೊಡ್ಡವನು. ಇಂದಿರಾ ಸಾವಿಗೆ ನ್ಯಾಯ ಸಿಕ್ಕಿದೆ..  ಪ್ರಶಾಂತ್ ಸತ್ತಮೇಲೆ ಮತ್ತೆ ಹುಟ್ಟದಿರಲಿ… ಇಂದಿರಾ ಕೊಲೆಯಾದ ಐದು ವರ್ಷದ ನಂತರವೂ ಇದೊಂದು ವರದಿ ನನ್ನ ಕಾಡುತ್ತಿದೆ. ಇಂಥಹ ಹಲವು ಹೃದಯವಿದ್ರಾವಕ ವರದಿಗಳಿವೆ. ಅಭಿಮತ ಕ್ರೈಮ್ ಪಾಲೋ ಅಪ್ ಮೂಲಕ ಅದರ ಪುಟ ತೆರೆದುಕೊಳ್ಳಲಿದೆ.

Leave a Comment