ಚಿರ ನಿದ್ರೆಗೆ ಜಾರಿದ ಜಾರ್ಜ್ ಫೆರ್ನಾಂಡಿಸ್

ಚರ್ಮದ ಸಾಧಾರಣ ಚಪ್ಪಲಿ , ದಪ್ಪ ಪ್ರೇಮಿನ ಕನ್ನಡಕ , ಬಾಚಣಿಕೆ ತಾಗಿಸದ ಕೂದಲು , ಎಂದಿಗೂ ಇಸ್ತ್ರಿ ಮಾಡದ‌ ಖಾದಿ ಕುರ್ತಾ ಪೈಜಾಮ ಇವೆಲ್ಲ ಜಾರ್ಜ್ ಫರ್ನಾಂಡೀಸ್ ಎಂದಾಕ್ಷಣ ನೆನಪಿಗೆ ಬರುವ ಧೀಮಂತ ನಾಯಕನ ಸರಳ ವ್ಯಕ್ತಿತ್ವ ಸೂಚಕಗಳು. ತನ್ನನ್ನು ಪ್ರಭಾವಿಸಿದ ಗುರು
ರಾಮಮನೋಹರ ಲೋಹಿಯಾರನ್ನು ಸದಾ ಭಾಷಣದಲ್ಲಿ ನೆನಪು ಮಾಡಿಕೊಳ್ಳುವ ಜಾರ್ಜ್ ಹುಟ್ಟಿದ್ದು ಮಂಗಳೂರಿನಲ್ಲಿ , ಬೆಳೆದದ್ದು ಬೆಂಗಳೂರಿನಲ್ಲಿ , ಹೋರಾಟ ನಡೆಸಿದ್ದು ಮುಂಬೈನಲ್ಲಿ , ರಾಜಕೀಯ ಕ್ಷೇತ್ರ ಬಿಹಾರದಲ್ಲಿ , ವ್ಯವಹಾರ ದಿಲ್ಲಿಯಲ್ಲಿ .

1930 ಜೂನ್ 03 ರಂದು ಜಾನ್ ಜೋಸೆಫ್ ಫರ್ನಾಂಡೀಸ್ ಮತ್ತು ಆಲೀಸ್ ಫರ್ನಾಂಡೀಸ್ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಇವರು
ಕನ್ನಡ ಕೊಂಕಣಿ ಇಂಗ್ಲೀಷ್ , ಹಿಂದಿ , ತುಳು , ಮರಾಠಿ , ತಮಿಳು , ಲ್ಯಾಟಿನ್ , ಉರ್ದು , ಮಲೆಯಾಳಂ , ಲ್ಯಾಟಿನ್ ಹೀಗೆ ಹತ್ತು ಭಾಷೆಗಳ ಹಿಡಿತ ಹೊಂದಿದ್ದರು . ತನ್ನ ಹದಿನಾರನೇ ವಯಸ್ಸಿಗೆ ಚರ್ಚ್ ಪಾದ್ರಿಯಾಗಲು ಬೆಂಗಳೂರಿಗೆ ಬಂದ ಜಾರ್ಜ್ ಅಲ್ಲಿನ‌ ತಾರತಮ್ಯ ವಿರೋಧಿಸಿ ಹೊರನಡೆದು ಮುಂಬೈ ಸೇರಿದರು. ಹೊಟ್ಟಪಾಡಿಗಾಗಿ ಅಲ್ಲಿನ‌ ಪುಟ್‌ಪಾತ್‌ಗಳಲ್ಲಿ ನಿದ್ರಿಸಿ ಎಲ್ಲಾ ಹಂತದ ಕೆಲಸಗಳನ್ನೂ ಮಾಡಿದ ಅವರು ಕೊನೆಗೆ ಅವರು ಪ್ರೂಪ್ ರೀಡರ್ ಆಗಿ ದುಡಿಮೆ ಆರಂಭಿಸಿದರು . ತದನಂತರ ದಿ ಅದರ್ ಸೈಡ್ , ಕೊಂಕಣಿ ಯುವಕ್’ ‘ರೈತವಾಣಿ’ ಎಂಬ ಪತ್ರಿಕೆಗಳ ಸಂಪಾದಕರಾದರು.

ಹದಿನೇಳು ವರ್ಷಗಳಲ್ಲಿ ಬಾಂಬೆ ಲೇಬರ್ ಯೂನಿಯನ್ ಸೇರಿದಂತೆ ಹತ್ತಾರು ಕಾರ್ಮಿಕ ಸಂಘಗಳ ನಾಯಕರಾಗಿ ಬೊಂಬಾಯಿ ಬಂದ್ ಗಳ ಯಶಸ್ವಿ ಸಂಘಟಕ ಎನಿಸಿದ ಇವರು 1961ರ ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆಯ್ಕೆಯಾದರು .ನಂತರ 1966 ಸಮಯದಲ್ಲಿ ದಕ್ಷಿಣ ಬಾಂಬೆ ಕ್ಷೇತ್ರದಿಂದ ಕಾಂಗ್ರೆಸ್ಸಿನ ದೈತ್ಯ ನಾಯಕ ಎಸ್ ಕೆ ಪಾಟಿಲ್ ಎದುರು ಸ್ಪರ್ಧಿಸಿದಾಗ ಈ ಸಾಮಾನ್ಯರಿಂದ ಏನಾದಿತು ಎಂದು ಅಸಡ್ಡೆ ತೋರಿದರವೇ ಹೆಚ್ಚು ಆದರೆ ಫಲಿತಾಂಶ ಬಂದಾಗ ಗೆಲುವಿನ ನಗೆಯೊಂದಿಗೆ ‘ಜೈಂಟ್ ಕಿಲ್ಲರ್’ ಎನಿಸಿದರು . 1974ರ ಹೊತ್ತಿಗೆ ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾದ ಅವರು ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿ ಮೂರು ವಾರಗಳ ಕಾಲ ಚಾರಿತ್ರಿಕ ರೇಲ್ವೆ ಕಾರ್ಮಿಕರ ಮುಷ್ಕರಕ್ಕೆ ಕರೆ ಕೊಟ್ಟರು . ದೇಶದ ಸಾರಿಗೆ ವ್ಯವಸ್ಥೆ ಸ್ತಭ್ದವಾಯಿತು ಇದೇ ಸಮಯಕ್ಕೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ Movement for change ಚಳವಳಿಯ ಮೂಲಕ ವಿದ್ಯಾರ್ಥಿಗಳು ಬೀದಿಗಿಳಿದರು. ಇದಕ್ಕೆ ದೇಶ ವ್ಯಾಪ್ತಿ ಬೆಂಬಲ ಬಂತು ಇದನ್ನು ಕಂಡ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅಭದ್ರತೆ ಕಾಡಿತು. ಇದೆಲ್ಲದರ ಫಲರೂಪವಾಗಿ 1975ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಭೂಗತರಾಗಿದ್ದುಕೊಂಡು ಇಂದಿರಾ ಗಾಂಧಿಯ ಬಹಿರಂಗ ಸಭೆಗಳನ್ನು ವಿಫಲಗೊಳಿಸಲು ಶತಾಯಗತಾಯ ಪ್ರಯತ್ನಿಸಿದರು. ಯಾರಿಗೂ ಸಾವು ನೋವು ಆಗದಂತೆ ಸಭೆಯ ಸುತ್ತಮುತ್ತ ಡೈನಾಮೆಟ್ ಸಿಡಿಸಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದರು . ನಂತರ ಸಿಡಿಮದ್ದುಗಳ ಕಳ್ಳಸಾಗಾಣಿಕೆ ಆರೋಪದಿಂದ ಬಂಧಿಸಲಾಯಿತು. ಇದು ಬರೋಡಾ ಡೈನಾಮೈಟ್ ಕೇಸ್ ಎಂದು ಪ್ರಸಿದ್ದಿ ಪಡೆಯಿತು. ತುರ್ತು ಪರಿಸ್ಥಿತಿ ಮುಗಿದು ಎಲ್ಲಾ ನಾಯಕರು ಬಿಡುಗಡೆಯಾದರೂ ಜಾರ್ಜ್‌ ರನ್ನು ಜೈಲಿನಲ್ಲೆ ಇರಿಸಿದ್ದರು ಇಂಧಿರಾಗಾಂಧಿ. ಆಗ ಜೈಲಿನಲ್ಲಿ ಇದ್ದುಕೊಂಡೆ ಬಿಹಾರದ ಮುಜಾಫರ್ ನಗರದ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು , ಚುನಾವಣೆ ಪ್ರಚಾರಕ್ಕೆ ಬಳಕೆಯಾಗಿದ್ದು ಕೈಗೆ ಕೋಳ ಹಾಕಿದ್ದ ಜೈಲಿಗೆ ಹೋಗುವ ಪೂರ್ವದ ಒಂದೇ ಒಂದು ಪೋಟೋ , ಪರಿಣಾಮ ಜಾರ್ಜರು ಬರೊಬ್ಬರಿ ಮೂರು ಲಕ್ಷಕ್ಕೂ ಮಿಕ್ಕಿ ಮತಗಳ ಅಂತರದಿಂದ ವಿಜಯಿಯಾದರು .

ಮೊರಾರ್ಜಿ ದೇಸಾಯಿ ನೇತ್ರತ್ವದ ಮೊದಲ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗುತ್ತಲೆ ನಿಯಮ ಉಲ್ಲಂಘಿಸಿದ್ದ ಐಬಿಎಂ ಮತ್ತು ಕೋಕಾಕೋಲ ಕಂಪನಿ ಭಾರತದಿಂದ ಕಾಲ್ಕಿತ್ತವು . ವಿ.ಪಿ ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾದಾಗ ಕೊಂಕಣ್ ರೈಲ್ವೆ ಯೋಜನೆಗೆ ಚಾಲನೆ ನೀಡಿದರು ಆದರೆ ಮುಂಬಯಿನ ರೋಹಾದಿಂದ ತೋಕೂರು ತನಕದ ದುರ್ಗಮದ ಹಾದಿಗೆ ತಾಂತ್ರಿಕ ಅಡಚಣೆಯಿಂದಾಗಿ ಅಪೂರ್ಣಗೊಳ್ಳುವ ಸಂದರ್ಭ ಬಂದಾಗ ತೀವ್ರ ಮುತುವರ್ಜಿಯಿಂದ ಯೋಜನೆ ಯಶಸ್ವಿಗೊಳಿಸಿದವರು ಜಾರ್ಜ್ ಫರ್ನಾಂಡೀಸ್ .

ಒಟ್ಟು ಒಂಭತ್ತು ಬಾರಿ ಲೋಕಸಭೆಗೆ ಹಾಗೂ ಒಂದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ವಿಪರ್ಯಾಸವೆಂದರೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾರ್ಜ್ ಅಣ್ವಸ್ತ್ರ ವಿರೋಧಿಸುತ್ತಲೇ ಬಂದಿದ್ದರು. ಆದರೂ, ಅಂದಿನ ಪ್ರಧಾನಿ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಮಂತ್ರಿಗಳಾದ ಜಾರ್ಜ್ ಫರ್ನಾಂಡೀಸ್ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿತು.ಪೋಖ್ರಾನ್ ಪರಮಾಣು ಪರೀಕ್ಷೆ ಹಾಗೂ ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ರಕ್ಷಣಾ ಸಚಿವರಾಗಿ ಅತ್ಯಂತ ದಕ್ಷ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು . ಆದರೂ ಶವ ಪೆಟ್ಟಿಗೆ ಹಗರಣದ ಸುಳಿಯಲ್ಲಿ ಸಿಲುಕಿ ರಾಜಿನಾಮೆ ನೀಡಿದರು . ತದ ನಂತರ ಆರೋಪದಿಂದ ಮುಕ್ತರಾದರು.

70 ವರ್ಷ ದಾಟಿದ ಮೇಲೂ ಸಿಯಾಚಿನ್ ಪ್ರದೇಶಕ್ಕೆ ಹದಿನೆಂಟು ಬಾರಿ ಬೇಟಿ ನೀಡಿದ್ದ ಜಾರ್ಜ್ 88 ವರ್ಷಗಳ ಕಾಲ ಬದುಕಿದ್ದರು. ಅವರು ಕೊನೆಯ ಹಂತದಲ್ಲಿ ಅಲ್ಜೈಮರ್ ಹಾಗೂ ಪಾರ್ಕಿನ್ಸನ್ ರೋಗಕ್ಕೆ ತುತ್ತಾಗಿ ಮಂಕಾದರು.‌ ಆ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಗೋವಾದಲ್ಲಿ ‘ಜಾರ್ಜ್ ಫರ್ನಾಂಡೀಸ್ ಇನ್ಸ್ಟಿಟ್ಯೂಟ್ ಆಪ್ ಟನೆಲ್ ಟೆಕ್ನಾಲಜಿ’ ಸ್ಥಾಫಿಸಿ ಗೌರವ ಸಲ್ಲಿಸಿತು.

ತಮ್ಮ‌ ಮನೆ ಕೃಷ್ಣ ಮೆನನ್‌ನಿಂದ ಎಷ್ಟೋ ಬಾರಿ ನಡೆದುಕೊಂಡೆ ಸಂಸತ್‌ಗೆ ಹೋಗುತಿದ್ದರು , ವಿಮಾನ ಪ್ರಯಾಣವನ್ನು ಎಕಾನಮಿ ಕ್ಲಾಸ್‌ನಲ್ಲೆ ಮಾಡುತಿದ್ದರು , ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತಿದ್ದರು ಇಂತಹ ಸರಳತೆಯ ಧೀಮಂತ ನಾಯಕರು ಮತ್ತೆ ಮತ್ತೆ ಈ ದೇಶದಲ್ಲಿ ಹುಟ್ಟಿ ಬರಲಿ .‌ ಓಂ ಶಾಂತಿ – ಹೋಗಿ ಬನ್ನಿ ಜಾರ್ಜ್ ಫರ್ನಾಂಡೀಸ್ ಸರ್ ಜೀ .‌

  • ನಾಗರಾಜ್ ನೈಕಂಬ್ಳಿ

Leave a Comment