ಮಲೆನಾಡಿಗರ ಪ್ರಾಣಹಿಂಡುವ ಮಂಗನ ಕಾಯಿಲೆಗೆ ಔಷಧ ಎಲ್ಲಿದೆ?

ಶ್ರೀನಾಥ್ ಅಂಬ್ಲಾಡಿ

ನಮ್ಮ ತಂತ್ರಜ್ಞಾನಗಳು, ವೈಜ್ಞಾನಿಕತೆಯ ಆವಿಷ್ಕಾರಗಳು ಇವೆಲ್ಲ ಕಾಡಿನ ಕಂದರಗಳಲ್ಲಿ ಬದುಕುವ ಜನರು ಸಾಯುವಾಗ ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ನಮ್ಮೊಳಗಿನ ಮೇದಾವಿಗಳು, ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು, ಸರ್ಕಾರದ ವ್ಯವಸ್ಥೆಗಳು, ಬುದ್ಧಿಜೀವಿಗಳು ಎನಿಸಿಕೊಂಡವರು, ಕಾಯಿಲೆಗೆ ಔಷಧಿ ಕಂಡುಹಿಡಿಯಬೇಕಾದಂತವರೆಲ್ಲಾ ಎಲ್ಲಿ ‘ದಿಂಡುರುಳು ಸೇವೆ’ ಮಾಡುತ್ತಿರುತ್ತಾರೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನು ಒಳಗೊಂಡ ಐದು ರಾಜ್ಯಗಳಲ್ಲಿನ ಕಾಡನ್ನೆ ನಂಬಿಕೊಂಡು ಬದುಕುತ್ತಿರುವವರ ಬದುಕುಗಳು ‘ಲಗಾಟಿ’ ಹೊಡೆಯುತ್ತಿವೆ. ಪ್ರತಿ ಬಾರಿಯೂ ಸರ್ಕಾರಗಳು ಮಂಗನಕಾಯಿಲೆಯ ವಿಚಾರವಾಗಿ ಜನರೆದುರು ಇಲ್ಲ ಸಲ್ಲದ ವಿಚಾರಗಳನ್ನೆತ್ತಿ ‘ಭೋಂಗು’ ಬಿಡುತ್ತಲೆ ಇವೆ. ಇದುವರೆಗೂ ಕೆಎಫ್ ಡಿ ವೈರಸನ್ನು ಸಾಯಿಸುವ ಸಂಶೋಧನೆಗಳಾವುದು ಅವರ ಬತ್ತಳಿಕೆಯಿಂದ ಬಂದಿಲ್ಲ ಅನ್ನುವುದೇ ದುರಂತ. ಈಗಾಗಲೆ ಮಂಗನಕಾಯಿಲೆಯ ನೋವನ್ನು ಸಾಕಷ್ಟು ಕುಟುಂಬಗಳು ತಿನ್ನುತ್ತಿವೆ. ಈ ಮಲೆನಾಡಿನ ಜನರ ಮೇಲೆ ಸರ್ಕಾರಗಳಿಗಿರುವ ನಿರ್ಲಕ್ಷ್ಯತನದ ಪರಮಾವಧಿಗೆ, ಬೇಜಾವಾಬ್ದಾರಿತನಕ್ಕೆ ಇದು ಮತ್ತೊಂದು ಉದಾಹರಣೆಯಾ? ಗೊತ್ತಿಲ್ಲ.

 

ಅದು 1957 . ಸ್ವಾತಂತ್ರ್ಯ ಬಂದು ಅದಾಗಲೇ 10 ವರ್ಷಗಳಾಗಿತ್ತು. ಅದೇ ಹೊತ್ತಿಗೆ ಸರಿಯಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನ ದಟ್ಟ ಕಾಡಿನಲ್ಲಿ ಮೊದಲ ಮಂಗನ ಕಾಯಿಲೆಯ ಪ್ರಕರಣ ದಾಖಲಾಗಿತ್ತು. ಕಾಡುಗಳಲ್ಲಿ ಮಂಗಗಳ ಸಾವಿನಿಂದ ಹುಟ್ಟಿಕೊಂಡ ಕಾಯಿಲೆಯಾದ್ದರಿಂದ ಮಂಗನಕಾಯಿಲೆ ಎಂದು ಹೆಸರಿಡಲಾಯಿತು. ಅಲ್ಲಿಂದ 2020 ರ ತನಕದ 6 ದಶಕಗಳ ಅವಧಿಯಲ್ಲಿ ಮಂಗನ ಕಾಯಿಲೆಗೆ ಶಾಶ್ವತ ಔಷಧಿ ಹುಡುಕಲು ಸಾಧ್ಯವಾಗದ ಕೈಲಾಗದ ಸರ್ಕಾರಗಳ ಮೇಲೆ ಪಶ್ಚಿಮ ಘಟ್ಟಗಳ ಕಾಡುಗಳ ನಡುವಲ್ಲಿ ಬದುಕುವ ಜನತೆಯ ದಿಕ್ಕಾರವಿದೆ. ಇಲ್ಲಿಯವರೆಗೆ ಬಂದ ಯಾವುದೇ ಪಕ್ಷದ ಯಾವುದೇ ಸರ್ಕಾರಗಳಿಗೂ ಮಂಗನಕಾಯಿಲೆಯನ್ನ ಅಟ್‌ಲೀಸ್ಟ್ ನಿಯಂತ್ರಣ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಪ್ರತಿ ಬಾರಿ ಮಂಗನಕಾಯಿಲೆ ಕಾಣಿಸಿಕೊಂಡಾಗಲು ಕಾಡಿನ ಪ್ರವೇಶಕ್ಕೆ ನಿರ್ಬಂಧ ಹೇರುವುದನ್ನು ಬಿಟ್ಟರೆ ಬೇರೆ ಏನೂ ಮಾಡಲಾಗದೆ ಸರ್ಕಾರಗಳು ಕೈ ಚೆಲ್ಲಿ ಕುಳಿತಿವೆ. ತೀರಾ ಲಜ್ಜೆಗೆಟ್ಟ ವ್ಯವಸ್ಥೆಗಳೆಂದು ಪದೇ ಪದೇ ಪ್ರೂವ್ ಮಾಡುತ್ತಿವೆ.

 

1982 ರಿಂದ 1983 ರ ವರೆಗೆ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ 1000ಕ್ಕೂ ಅಧಿಕ ಮಂಗನಕಾಯಿಲೆ ಪ್ರಕರಣಗಳು ಪಾಸಿಟೀವ್ ಹಣೆಪಟ್ಟಿಯನ್ನು ಪಡೆದಿದ್ದವು. ಅದರಲ್ಲಿ 100 ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು. ಇಷ್ಟೆಲ್ಲಾ ಅಗುತ್ತಿದ್ದಂತೆ 1984ರಲ್ಲಿ 20 ಹಳ್ಳಿಗಳಲ್ಲಿದ್ದ ಕಾಯಿಲೆ 31 ಹಳ್ಳಿಗಳಿಗೆ ಆವರಿಸುತ್ತಾ ಹೋಯಿತು. ಆ ಸಂದರ್ಭದಲ್ಲಿ 605 ಜನರಿಗೆ ಕೆಎಫ್ ಡಿ ಪತ್ತೆಯಾಗಿತ್ತು ಅವರಲ್ಲಿ 136 ಜನರು ಪ್ರಾಣ ಕಳೆದುಕೊಂಡಿದ್ದರು. 1972 ರಲ್ಲಿ ಉತ್ತರ ಕನ್ನಡಕ್ಕೂ ವೈರಸ್ ಹರಡಿತು. 1980ರಲ್ಲಿ ಚಿಕ್ಕಮಗಳೂರಿನ ಕದವನ್ನು ತಟ್ಟಿತ್ತು. ಇದಾಗಿ 1984 ರಿಂದ 2000 ದ ತನಕ ಕ್ಯಾಸನೂರು ವೈರಸ್ ಸಾಮಾನ್ಯ ಸ್ಥಿತಿಗೆ ತಲುಪಿ ಅಷ್ಟೇನು ಆಟಾಟೋಪ ಮಾಡಿರಲಿಲ್ಲ. ಆದರೆ ಮತ್ತೆ 2000 ದ ನಂತರ ಕೆಎಫ್ ಡಿಯ ಕಬಂದ ಬಾಹುಗಳು ಚಾಚುತ್ತ 2000 ದ ಸುಮಾರಿಗೆ ದಕ್ಷಿಣ ಕನ್ನಡ, ಉಡುಪಿಯ ಬಾಗಿಲಿನಲ್ಲಿ ನಿಂತು ವಕ್ರವಾಗಿ ನಗಲು ಶುರುಮಾಡಿಯಾಗಿತ್ತು. 2002 ರ ವರೆಗೆ ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಾತ್ರವೇ ಇದ್ದ ವೈರಸ್ 2002 ರಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಕಾಣಿಸಿಕೊಂಡಿತ್ತು. ಇಲ್ಲೆಲ್ಲಾ ಕಡೆಗಳಲ್ಲಿ ವೈರಸ್‌ಗಳು ಕಾಣಿಸಿಕೊಂಡಾಗಲು ಸಾವುಗಳು ಸಂಭವಿಸಿವೆ ಅಲ್ಲಿಂದ ಇಲ್ಲಿಯತನಕವೂ ಸಾವು- ನೋವುಗಳು ಸಂಭವಿಸುತ್ತಲೇ ಇವೆ. ಈ ಬಾರಿಯೂ ೩ ಸಾವುಗಳು ಇಲ್ಲಿಯವರೆಗಿನ ವರದಿ ಪ್ರಕಾರ ಆಗಿದೆ. ಅದಕ್ಕೆ ಸರಿಯಾಗಿ ಸರ್ಕಾರಗಳು ಅರಣ್ಯಕ್ಕೆ ಪ್ರವೇಶ ನಿರ್ಬಂಧಿಸುವುದನ್ನು ಯಥಾವತ್ತಾಗಿ ಮಾಡುತ್ತಲೇ ಇವೆ. ಕಾಡಿನ ಪ್ರವೇಶವನ್ನು ನಿರ್ಬಂಧಿಸುವುದು ಶಾಶ್ವತ ಪರಿಹಾರವಾ? ಸರ್ಕಾರಗಳೇ ಉತ್ತರ ಹೇಳಬೇಕು.

ಮೊದಲು ಶಿವಮೊಗ್ಗ, ಉತ್ತರ ಕನ್ನಡ, ಕರಾವಳಿ ಜಿಲ್ಲೆಗಳಿಗಳಿಗಷ್ಟೆ ಸೀಮಿತವಾಗಿದ್ದ ಈ ಕಾಯಿಲೆ ಇಂದು ಪಶ್ಚಿಮ ಘಟ್ಟದ ಸಾಲುಗಳನ್ನು ಹಾದು ಹೋಗುವ, ಕಾಡಿನ ಹಸಿರಿನ ಸೆರಗು ಮುದುರುಗಳಲ್ಲಿ ಅಡಗಿರುವ ಲಕ್ಷಾಂತರ ಕುಟುಂಬಗಳು ಮಂಗನ ಕಾಯಿಲೆ ಅಟ್ಟಹಾಸಕ್ಕೆ ನಲುಗಿವೆ. ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು. ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡ ರಾಜ್ಯಗಳ ಹಲವು ಜಿಲ್ಲೆಗಳಲ್ಲೂ ಇದೇ ಕಾಯಿಲೆ ಮುಂದುವರೆದಿದೆ. ಈ ನಮ್ಮ ಈ 5 ರಾಜ್ಯಗಳ ಈ ಜಿಲ್ಲೆಗಳಲ್ಲಿ ಬದುಕುವ ಕುಟುಂಬಗಳಿಗೆ ಕಾಡುಗಳೇ ಆಧಾರ. ಇಲ್ಲಿನ ಮಂಗಗಳು ಮನೆಯ ಮಕ್ಕಳಷ್ಟೆ ಹತ್ತಿರ. ಮನೆಯ ಒಳಗಿನ ದಿನಸಿಗಳನ್ನು ತಿನ್ನುವಷ್ಟು ಸನಿಹತೆಗಳನ್ನು ಇಲ್ಲಿನ ಮಂಗಗಳು ಪಡೆದುಕೊಂಡಿವೆ. ಅಷ್ಟರ ಮಟ್ಟಿಗೆ ಕಾಡಿನ ಪ್ರಾಣಿಗಳ ಜೊತೆಗೆ ಇಲ್ಲಿನ ಜನರ ಜೀವನ ವ್ಯವಸ್ಥೆ ಹೊಂದಿಕೊಂಡಿದೆ. ಮಂಗಗಳು ಊರಿನ ಜನರ ಜೊತೆಗೆ ಬೆರೆತು, ಕಲೆತು, ಊರಿನ ಮಕ್ಕಳಂತೆ ಆಡಿಕೊಂಡು ಬೆಳೆದಿವೆ. ತೋಟದಲ್ಲಿ ಬೆಳೆದಿದ್ದನ್ನು ತಿಂದುಕೊಂಡು ಇಲ್ಲಿನ ಜನರಿಗೆ ತೊಂದರೆ ಕೊಟ್ಟುಕೊಂಡು ಬದುಕುವುದು ಅವುಗಳಿಗೆ ಗೊತ್ತಿದೆ. ಮನೆಯ ಮಕ್ಕಳೆ ತಪ್ಪು ಮಾಡುವಾಗ ಮಂಗಗಳು ಇನ್ಯಾವ ಲೆಕ್ಕ ಬಿಡಿ ಅಂತ ಬೈದು ಸುಮ್ಮನಾಗುವುದು ಇಲ್ಲಿನ ಜನರಿಗೂ ಗೊತ್ತಿದೆ. ಇಂತಹ ಅದ್ಭುತ ಪರಿಸರ ಪ್ರೀತಿಯನ್ನ ಈ ಪಶ್ಚಿಮ ಘಟ್ಟಗಳಲ್ಲಿ ಮಾತವಲ್ಲದೇ ಬೇರೆ ಇನ್ನೆಲ್ಲಿ ಹುಡುಕೋದಕ್ಕೆ ಸಾಧ್ಯ ಅಲ್ವಾ?

1957 ರಿಂದ 2020 ರ ತನಕ ಈ ಕೆಎಫ್ ಡಿ ವೈರಸ್ ಉಸಿರಾಡುತ್ತಿದೆ. ಆದರೆ ಇಷ್ಟು ವರ್ಷಗಳವರೆಗೂ ಆ ವೈರಸ್ ಸಾಯಿಸಲು ಮಾತ್ರ ಸಂಶೋಧನೆಗಳಿಂದ ಸಾಧ್ಯವಾಗಿಲ್ಲ. ಶಾಶ್ವತವಾದ ವ್ಯಾಕ್ಸಿನೇಷನ್‌ನ ಅನ್ವೇಷಣೆ ಸಂಪೂರ್ಣ ನೆಲಕಚ್ಚಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿನಲ್ಲಿ ಸಂಶೋಧನೆಯೇನೋ ನಡೆದಿದೆ. ಅದರ ಪ್ರಕಾರ ಸತ್ತ ಮಂಗನ ಮೇಲೆ ಉಣುಗುಗಳು ಹತ್ತಿಕೊಂಡು ನಂತರ ಆ ಉಣುಗುಗಳು ಕಾಡಿನ ಕೆಲಸಗಳಿಗೆ ಹೋಗುವ ಜನರ ಮೈಮೇಲೆ ಹತ್ತಿಕೊಂಡು ರಕ್ತ ಹೀರುವುದರಿಂದ `ಫ್ಲೇವಿ’ ಎಂಬ ವೈರಸ್‌ನಿಂದ ಮಂಗನ ಕಾಯಿಲೆ ಹರಡುತ್ತದೆ ಎಂದು ಮಾಹಿತಿ ಕೊಟ್ಟಿದೆಯೇ ವಿನಃ ‘ವ್ಯಾಕ್ಸಿನೇಷನ್ ‘ ಕೊಟ್ಟಿಲ್ಲ. ಕಳೆದ 50 ವರ್ಷಗಳ ಹಿಂದೆಯಿದ್ದ ಹೊಸದಾಗಿ ಸಂಶೋಧಿಸದ ಹಳೆಯ ಮಾದರಿಯ ಚುಚ್ಚುಮದ್ದುಗಳನ್ನೇ ಇನ್ನು ಬಳಸುತ್ತಿದ್ದಾರೆ. ಇಷ್ಟೇ ಅಲ್ಲದೆ 5 ವರ್ಷಗಳ ಹಿಂದೆ ಸಾಗರ ತಾಲೂಕಿನಲ್ಲಿ ವೈರಾಣು ರೋಗ ಸಂಶೋಧನೆಗೆ 5 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯವನ್ನು ತಲೆಯೆತ್ತಿಸಲು ಸರ್ಕಾರ ಹಣ ಬಿಡುಗಡೆ ಮಾಡಿತ್ತು. ದುರಂತವೆಂದರೆ ಇದುವರೆಗೂ ಆ ಪ್ರಯೋಗಾಲಯ ತಲೆಯೆತ್ತಲಿಲ್ಲ. ಮಂಗನಕಾಯಿಲೆಯ ಕುರಿತಾಗಿ ಈ ಬಾರಿಯ ಸದನದಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಧ್ವನಿ ಎತ್ತಿದರೂ ಅದೊಂದು ಗಂಭೀರ ವಿಷಯ ಅನ್ನುವಂತೆ ಚರ್ಚೆಯೇ ಆಗಲಿಲ್ಲ, ಸಮರ್ಪಕ ಉತ್ತರವಂತೂ ಸಿಗಲೇ ಇಲ್ಲ. ಪಶ್ಚಿಮ ಘಟ್ಟಗಳ ನಿರ್ಲಕ್ಷ್ಯಗಳ ಮದ್ಯೆ ಅಲ್ಲಿನ ಜನತೆಗೆ ಅನಿಸುವುದಿಷ್ಟೇ ಪ್ರಕೃತಿಯಿಂದಲೇ ಹುಟ್ಟಿದ ಸಮಸ್ಯೆಗೆ ಪ್ರಕೃತಿಯಲ್ಲೆ ಉತ್ತರ ಸಿಗಬಹುದು ಎನ್ನುವುದು ಅಸಹಾಯಕತೆಯ ಕಣ್ಣುಗಳಲ್ಲಿರುವ ಇಲ್ಲಿನ ಜನರ ನಂಬಿಕೆಯಷ್ಟೆ ಉಸಿರಾಡುತ್ತಿದೆ.

 

Leave a Comment