ಇದು ಕೊಂಡಾಡಿ ಕೊರಗರ ತುಂಡು ಭೂಮಿಯ ಸ್ವಾತಂತ್ರ್ಯದ ಕಥನ!!

ಇದು ಮಾಮೂಲಿ ವರದಿಯಲ್ಲ! ಕರಾವಳಿಯ ಮೂಲನಿವಾಸಿಗಳು ಒಂದು ತುಂಡು ಭೂಮಿಗಾಗಿ ನಿರಂತರ ಹತ್ತು ವರ್ಷಗಳ ಕಾಲ ಬಡಿದಾಡಿ ಕೊನೆಗೂ ನ್ಯಾಯದ ಬಾಗಿಲಿಗೆ ಬಂದು ತಲುಪಿದ ಹೋರಾಟದ ಹಾಡಿನ ಕಥನ! ಇದು ಕೊಂಡಾಡಿ ಕೊರಗರ ಕಥೆ.. ಆಳುವ ವರ್ಗಕ್ಕೆಲ್ಲಿ ಕಾಣಿಸುತ್ತದೆ ಅಳುವ ವರ್ಗ? ಎನ್ನುವ ಮಾತು ಮತ್ತೆ ಮತ್ತೆ ಇಲ್ಲಿ ಸಾಬೀತಾಗುತ್ತಲೇ ಹೋಗುತ್ತದೆ. ನಿಮಗೆ ಪೂರ್ಣಚಂದ್ರ ತೇಜಸ್ವಿಯವರ ತಬರನಕಥೆ ನಾಟಕ ಗೊತ್ತಿದೆಯಾ? ಆ ನಾಟಕದ ತಬರ ಪಡುವ ಪರಿಪಾಟಲುಗಳ ಬಗ್ಗೆ ನಿಮಗೆ ಗೊತ್ತಿದ್ದರೆ ಅಂಥಹುದೇ ಇನ್ನೊಂದು ಪ್ರಕರಣವಿದು. ಏನಾಯಿತು ಮುಂದೆ ಎನ್ನುವುದನ್ನ ತಿಳಿಯಲು ಈ ಸವಿಸ್ತಾರ ವರದಿಯನ್ನ ನೀವು ಓದಲೇ ಬೇಕು

 ಅದು ಬೊಮ್ಮರ ಬೆಟ್ಟು

ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ ೨೨೯ ರಲ್ಲಿ ೨.೬೧.೫೦ ಎಕ್ರೆ ಜಮೀನಿಗೆ ಸಂಬಂಧಿಸಿದ ಮಹತ್ತರವಾದ ಆದೇಶವನ್ನ ಉಡುಪಿ ಜಿಲ್ಲಾಡಳಿತ ಹೊರಡಿಸಿದೆ. ಐ.ಟಿ.ಡಿ.ಪಿ. ಉಡುಪಿಯ ಸಮನ್ವಯಾಧಿಕಾರಿಗಳ ಮೂಲಕ ಈ ಆದೇಶ ಹೊರಬಿದ್ದಿದೆ. ಕಳೆದ ಒಂಬತ್ತು ವರ್ಷದಿಂದಲೂ ತಬರನಂತೆ ಕಛೇರಿಯಿಂದ ಕಛೇರಿಗೆ ಅಲೆದರೂ  ನಿವೇಶನ ಪತ್ರ ಮಂಜೂರಾಗಿದ್ದೂ ನಿವೇಶನದ ಹಂಚಿಕೆಯಾಗದ ಕೊರಗ ಜನಾಂಗದ ಒಟ್ಟು ಇಪ್ಪತ್ತೊಂಬತ್ತು ಫಲಾನುಭವಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ! ಅನಾಮತ್ತು ಒಂಬತ್ತು ವರ್ಷದಿಂದಲೂ ಆಗದ ಕೆಲಸ ಇದೀಗ ತರಾತುರಿಯಲ್ಲಿ ನಡೆದದ್ದಾದರು ಹೇಗೆ ಎಂದು ಹುಡುಕುತ್ತಾ ಹೊರಟಾಗ ಉಡುಪಿಯ ದಾರ್ಶನಿಕ ಎಂದೇ ಕರೆಯಲ್ಪಡುವ ಡಾ.ರವೀಂದ್ರ ನಾಥ್ ಶಾನಬಾಗ್ ಹೆಸರು ಕೇಳಿಬರುತ್ತದೆ!

ಕೊರಗರ ಪರ ಧ್ವನಿಯಾಗಿ

ಡಾ. ರವೀಂದ್ರನಾಥ ಶಾನಬಾಗ್

ಉಡುಪಿ ಜಿಲ್ಲೆ, ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಬಳಿಯ ಎರಡೂ ಚಿಲ್ಲರೆ ಎಕರೆ ಜಮೀನು ಒಟ್ಟು ಇಪ್ಪತ್ತ ಮೂರು ಕೊರಗ ಕುಟುಂಬಕ್ಕೆ ಮತ್ತು ಆರು ಪರಿಶಿಷ್ಠ ಪಂಗಡದವರಿಗೆ ಮಂಜೂರಾಗಿತ್ತು. ಈ ಇಪ್ಪತ್ತೊಂಬತ್ತೂ ಕುಟುಂಬವೂ ಅತ್ಯಂತ ಕಡು ಬಡತನದ ಬೇಗೆಯಲ್ಲಿ ಬಸವಳಿದ ಕುಟುಂಬ.. ೨೦೧೦ರಲ್ಲಿ ಆಗಿನ ಉಸ್ತುವಾರಿ ಸಚಿವರು ತಲಾ ಎಂಟು ಸೆಂಟ್ಸ್ ಭೂಮಿಯ ಹಕ್ಕುಪತ್ರವನ್ನ ನೀಡಿದ್ದರು. ಹಕ್ಕು ಪತ್ರ ಸಿಕ್ಕಮೇಲೆ ಭೂಮಿ ಸಿಕ್ಕಂತೆ ಅಲ್ಲವೇ? ಆದರೂ ಅಲ್ಲಿ ನಿವೇಶನ ಗಡಿಗುರುತು ಯಾವುದೂ ನಡೆದಿರಲಿಲ್ಲ.  ಬೊಮ್ಮರ ಬೆಟ್ಟು ಸನಿಹದ ಕೊಂಡಾಡಿ ಎನ್ನುವ ಪ್ರದೇಶದಲ್ಲಿ ನಿವೇಶನ ಮಂಜೂರಾದದ್ದು., ನಿವೇಶನ ಪತ್ರ ಸಿಕ್ಕೂ ಭೂಮಿ ಹಂಚಿಕೆ ಆಗಿಲ್ಲ ಎಂದು ಪದೇ ಪದೆ ಅಧಿಕಾರಿಗಳನ್ನ ಸಂಪರ್ಕಿಸಿ ಕೇಳಿದಾಗ ಹಣ ಮಂಜೂರಾಗಿಲ್ಲ. ಆಡಳಿತಾತ್ಮಕ ಮಂಜೂರಾತಿ ಆಗಿಲ್ಲ. ಇನ್ನೂ ಒಂದು ತಿಂಗಳು ಹೋದೀತು.. ನಾಡಿದ್ದು ಬನ್ನಿ ಎಂಬಂತಹ ಉತ್ತರಗಳೇ ಸಿಕ್ಕಿ ಈ ಬಡವರು ಅಲೆದು ಅಲೆದು ಕುಸಿದು ಹೋಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ನಿವೇಶನ ಹಂಚಿಕೆಯ ಹಕ್ಕುಪತ್ರವನ್ನ ವಿತರಿಸಿದಾಗ ನಮಗೂ ಒಂದು ತುಂಡು ಭೂಮಿ ಸಿಕ್ಕಿತಲ್ಲಾ ಎಂದು ಸಂತಸದಿಂದಿದ್ದ ಈ ಬಡವರ ಮೊಗದಲ್ಲಿ ಆ ಸಂತಸ ಹೆಚ್ಚು ದಿವಸ ಉಳಿದಿರಲಿಲ್ಲ. ನಿರಂತರ ಒಂಬತ್ತು ವರ್ಷಗಳ ಅಲೆದಾಟ ಅವರನ್ನ ಅಧೀರರನ್ನಾಗಿಸಿತ್ತು. ಹೋರಾಟದ ಕಾವು ಇಳಿದು ಹೋಗಿತ್ತು. ಕೊಂಡಾಡಿ ಗಿರಿಜನ ಕಾಲೋನಿ ನಿವೇಶನದಾರರ ಸಂಘದ ಸುಬೇದ ಇದರ ನಾಯಕತ್ವ ವಹಿಸಿಕೊಂಡು ನಿರಂತರವಾಗಿ ಕಛೇರಿಯಿಂದ ಕಛೇರಿಗೆ ಅಲೆದು ಕೊನೆಗೆ ಹೈರಾಣಾಗಿ ಕೊನೆಯ ಪ್ರಯತ್ನ ಎಂಬಂತೆ ಬಸ್ರೂರು ಬಳಕೆದಾರರ ವೇದಿಕೆಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ರವೀಂದ್ರನಾಥ ಶಾನಬಾಗ್ ಕಛೇರಿಗೆ ತೆರಳಿದರು..

 ಹಗರಣ ಎಂದರು ಶಾನಬಾಗ್!

ಕೊರಗರಿಗೆ ಆದ ಅನ್ಯಾಯ ಕೇವಲ ಅನ್ಯಾಯ ಮಾತ್ರವಲ್ಲ ಇದು ಒಂದು ಹಗರಣ ಎಂದದ್ದು ರವೀಂದ್ರನಾಥ್ ಶಾನಬಾಗ್! ಬಸ್ರೂರು ಬಳಕೆದಾರರ ವೇದಿಕೆ ಮೂಲಕ ಅದೆಷ್ಟೋ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದ ಶಾನಬಾಗ್ ಎಂಡೋಸಲ್ಫಾನ್ ಪೀಡಿತರ ಪರವಾಗಿ ಸುಪ್ರಿಂ ಕೋರ್ಟ್ ತನಕ ಹೋಗಿ ಪೈಟ್  ಮಾಡಿ ಸಂತ್ರಸ್ಥರಿಗೆ ಐದುನೂರು ಕೋಟಿ ಹಣ ಬಿಡುಗಡೆಯಾಗುವಂತೆ ಆದೇಶ ಹೊರಬರಲು ಕಾರಣರಾದವರು. ಆ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಹೊನಲು ಹೊಮ್ಮಿಸಿದವರು. ಯಾವ ಪ್ರಶಸ್ತಿ, ಪುರಸ್ಕಾರವನ್ನೂ ಬಯಸದೆ ನಿರಂತರವಾಗಿ ಜನಪರ ಜೀವಧ್ವನಿಯಾಗಿ ಹೋರಾಡುವ ಶಾನಬಾಗ್ ಕೋಟ ಶಿವರಾಮ ಕಾರಂತರ ಶಿಷ್ಯ! ಕಾರಂತರ ಹೋರಾಟದ ಪಂಜನ್ನು ಈ ಪೀಳಿಗೆಯ ತನಕ ದಾಟಿಸಿದವರು ಶಾನಬಾಗರು.ಇವರು ಗಲ್ಫ ದೇಶಕ್ಕೆ ಮಾನವ ಸಾಗಾಟ ಪ್ರಕರಣದಲ್ಲಿ ತಲುಪಿದವರನ್ನ, ಅಲ್ಲಿ ಸಂತ್ರಸ್ಥರಾದವರನ್ನ ಮತ್ತೆ ಮರಳಿ ಭಾರತಕ್ಕೆ ಕರೆತರುವಲ್ಲಿ ಮಾಡಿದ್ದು ಒಂದೆರಡು ಪ್ರಕರಣವಲ್ಲ! ಶಾನಬಾಗರ ಹೊರಾಟದ ಕಥೆಗಳನ್ನ ಬರೆಯುತ್ತ ಹೊದರೆ ಅದೊಂದು ಪುಸ್ತಕವಾದೀತು.  ಉಡುಪಿಯ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನದ ಮೂಲಕ ಹೋರಾಡುತ್ತಲೇ ಇರುವ ಶಾನಬಾಗ್ ಭಾರತದಲ್ಲೇ ಮೊತ್ತಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿದವರು! ದೇಶದ ಮೊತ್ತ ಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೆ ಸುಪ್ರಿಮ್ ಕೋರ್ಟ್ ಜಸ್ಟೀಸ್  ಭಗವತಿಯವರು ಪತ್ರಕರ್ತರ ವರದಿಯನ್ನೇ ಸ್ವತ ಆಸಕ್ತಿಯಿಂದ ಸ್ವೀಕರಿಸಿ ಬಾಲಕಾರ್ಮಿಕರ ಪರವಾಗಿ ತಿರ್ಪು ಹೊರಡಿಸಿದ್ದು.. ಆದರೆ ಸುಪ್ರಿಮ್ ಕೋರ್ಟಿಗೆ ಮೊತ್ತ ಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಹಾಕಿದವರು ರವೀಂದ್ರನಾಥ್ ಶಾನಬಾಗ್ ಎನ್ನುವುದು ಐತಿಹಾಸಿಕ ಸತ್ಯ. ಶಾನಬಾಗ್ ಟೇಬಲ್ಲಿಗೆ ಬಂದು ತಲುಪಿದ ಕೊರಗರ ಗೋಳನ್ನ ಸಾವಕಾಶವಾಗಿ ಆಲಿಸಿದ ಶಾನಬಾಗರು ಈಗಾಗಲೇ ತಾನು ನಡೆಸುತ್ತಿರುವ ಸಾವಿರಾರು ಪ್ರಕರಣಗಳಂತೆ ಇದನ್ನೂ ಕೂಡ ಸ್ವೀಕರಿಸಿದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಲೊಖಾಯುಕ್ತ ಅಧಿಕಾರಿಗಳ ಕಛೇರಿಯ ಬಾಗಿಲು ತಲುಪಿತು. ಆಗ ಎಚ್ಚೆತ್ತುಕೊಂಡಿತು ಆಡಳಿತ ಯಂತ್ರ. ಮೊದಲು ರವೀಂದ್ರನಾಥ್ ಶಾನಬಾಗ್ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದರು. ಈ ಹಿಂದೆಯೂ ಕೊರಗ ಸಮುದಾಯ ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿವೆ! ಆದರೂ ಪ್ರಯೋಜನ ಆಗಲಿಲ್ಲ. ರವೀಂದ್ರನಾಥ್ ಶಾನಬಾಗರ ಪತ್ರಕ್ಕೂ ತಕ್ಷಣ ಪ್ರತಿಕ್ರಿಯೆ ಬಾರದಿದ್ದಾಗ ಶಾನಬಾಗ್ ನೇರವಾಗಿ ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದಾರೆ! ಲೋಕಾಯುಕ್ತ ಪ್ರಕರಣವನ್ನ ತನಿಖೆಗಾಗಿ ಕೈಗೆತ್ತಿಕೊಂಡಿದೆ.

ಏನಿದು ಕೊರಗರ ಭೂಮಿ ಗಲಾಟೆ?

ಆರ್ಥಿಕವಾಗಿ ತೀರಾ ಹಿಂದುಳಿದ ಗಿರಿಜನ ಕುಟುಂಬಗಳಿಗೆ ಮನೆ ನಿವೇಶನಗಳನ್ನು ನೀಡುವ ಯೋಜನೆಯೊಂದನ್ನು ಕರ್ನಾಟಕ ಸರಕಾರ ಹಮ್ಮಿಕೊಂಡಿದೆ ಎಂದು ತಿಳಿದ ಅಂಬಾಗಿಲಿನ ಕೊರಗ ಜನಾಂಗದ ವಿಜಯಲಕ್ಷ್ಮಿ, ಸಮೀರಾ, ಅಪ್ಪಿ ಮುಂತಾದ ಮಹಿಳೆಯರು 2010ರಲ್ಲಿ ಉಡುಪಿಯ ಸಮಗ್ರ ಗಿರಿಜನ ಯೋಜನಾಧಿಕಾರಿಯವರನ್ನು ಸಂಪರ್ಕಿಸಿದರು. ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ, ಅಶಿಕ್ಷಿತರೇ ಹೆಚ್ಚಿರುವ ಮಹಿಳೆಯರೆಲ್ಲರೂ ಸೇರಿ ಶಾಲಾ ಶಿಕ್ಷಕರೊಬ್ಬರ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಬರೆದು ಸಂಬಂಧಪಟ್ಟ ಇಲಾಖೆಯನ್ನ ಕೇಳಿದ್ರೆ ಅರ್ಜಿ ಅಲ್ಲುಂಟು ಇಲ್ಲುಂಟು  ಮತ್ತೆ ಬನ್ನಿ ಮತ್ತೆ ಬನ್ನಿ ಎಂದೂ ಸತಾಯಿಸಿದ್ದೂ ಆಯಿತು. ಇದಾಗಿ ಸುಮಾರು ಆರು ತಿಂಗಳು ಕಳೆದವು ಕಂದಾಯ ಇಲಾಖೆಯಿಂದ ಹಿಂಬರಹವೊಂದು ತಲುಪಿತು. ನಮಗೆ ಜಾಗ ಅನುಮೋದನೆ ಆಗಿಯೇ ಹೋಯಿತು ಎಂದು ಭಾವಿಸಿದವರಿಗೆ ನಿರಾಸೆ ಕಾದಿತ್ತು! ’ನಿಮ್ಮದೆಲ್ಲ ಆದಾಯದ ಮಿತಿ ಹೆಚ್ಚಳವಾಗಿರುವ ಕಾರಣಕ್ಕೆ ನಿಮ್ಮ ಅರ್ಜಿಗಳನ್ನ ಪರಿಗಣಿಸಲಾಗುತ್ತಿಲ್ಲ! ಎಂಬ ಹಿಂಬರಹ ಬಂದಿತ್ತು! ನಂತರ ಶಾಸಕರ ಮೂಲಕ ಮತ್ತೆ ಪ್ರಯತ್ನಿಸಿ ತಹಶೀಲ್ದಾರರು ಕೊಟ್ಟ ಆದಾಯ ಪತ್ರಗಳನ್ನೂ ಕೊಟ್ಟು ವಿನಂತಿಸಿಕೊಂಡರು. ಅದಾಗಿ ಮತ್ತೆ ಆರುತಿಂಗಳ ನಂತರ ಬೊಮ್ಮನಬೆಟ್ಟು ಗ್ರಾಮದ ಕೊಂಡಾಡಿ ಎಂಬಲ್ಲಿ ಸರ್ವೆ ನಂಬರ್ ೨೨೯ ರಲ್ಲಿ ೨.೬೧ ಎಕರೆ ಜಾಗದಲ್ಲಿ ಒಟ್ಟು ಇಪ್ಪತ್ತೊಂಬತ್ತು ಕುಟುಂಬಕ್ಕೆ ತಲಾ ಎಂಟು ಸೆಂಟ್ಸ್ ಜಾಗ ನೀಡುವುದು ಎಂಬುದಾಗಿ ಪತ್ರದಲ್ಲಿ ಬರೆಯಲಾಗಿತ್ತು ಸ್ವಾತಂತ್ರ್ಯೋತ್ಸವದ ದಿವಸವೇ ಉಸ್ತುವಾರಿ ಸಚಿವರ ಮತ್ತು ಶಾಸಕರಿಂದ ಹಕ್ಕುಪತ್ರ ವಿತರಣೆಯೂ ನಡೆದು ಹೋಯಿತು. ಅವತ್ತು ಸಂಭ್ರಮಿಸಿತು ಬಡವನ ಬದುಕು! ಆದರೆ ಎಷ್ಟು ದಿವಸ? ಕಾಗದದಲ್ಲಿನ ನಿವೇಶನದಲ್ಲಿ ಮನೆ ಕಟ್ಟಲಾದೀತೆ? ಮತ್ತೆ ಆರಂಭಗೊಂಡಿತು ನಿವೇಶನ ಪಡೆಯುವ ಕಸರತ್ತು!

ಎಲ್ಲುಂಟು ಜಾಗ?

ಹಕ್ಕು ಪತ್ರ ಸಿಕ್ಕ ಮುಂದಿನ ತಿಂಗಳೇ ಎಲ್ಲರೂ ಒಟ್ಟಾಗಿ ಯೋಜನಾಧಿಕಾರಿಗಳನ್ನ ಭೇಟಿಯಾಗಿ ಗಡಿಗುರುತು ಮಾಡಿ ನಮ್ಮ ನಮ್ಮ ಜಾಗವನ್ನ ನಮ್ಮ ಸ್ವಾಧೀನಕ್ಕೆ ನೀಡುವಂತೆಯೂ ವಿನಂತಿಸಿಕೊಂಡರು. ಇಪ್ಪತ್ತೊಂಬತ್ತು ಕುಟುಂಬದ ಮುನ್ನೂರು ತಲೆಗಳೂ ಅಂದು ಬಾಗಿದರು ಅಧಿಕಾರಿಯ ಮುಂದೆ! ಫಲವೇನು ಬಂತು? ಮತ್ತೆ ಅರ್ಜಿಯ ಬೆನ್ನ ಹಿಂದೆ ತಬರನಂತೆ ಅಲೆಯುವುದು ನಿಲ್ಲಲಿಲ್ಲ! ಪತ್ರ ಕೊಟ್ಟು ನಾಲ್ಕು ತಿಂಗಳು ಕಳೆದರೂ ಗಡಿ ಗುರುತು ಬಿಡಿ ಯೋಜನಾಧಿಕಾರಿಗಳ ಕಛೇರಿಯಿಂದ ಆ ಪತ್ರವೇ ಮುಂದಕ್ಕೆ ಹೋಗಲಿಲ್ಲ! ಅದಾಗಿ ನಾಲ್ಕು ತಿಂಗಳ ನಂತರ ಹಾಗೂ ಹೀಗೂ ’ಇವರಿಗೆ ಮಂಜೂರಾದ ಜಾಗ ಸಮತಟ್ಟು ಮಾಡುವ ಅಂದಾಜು ಪಟ್ಟಿ ತಯಾರಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ರವಾನೆ ಆಯಿತು! ಸರ್ಕಾರಿ ಅಧಿಕಾರಿಗಳು ಅಂದಾಜು ವೆಚ್ಚ ಮಾಡುವುದರಲ್ಲಿ ಭಾರೀ ನಿಪುಣರು ನೋಡಿ? ನಂತರದ ಹನ್ನೆರಡು ತಿಂಗಳು ಕಳೆದರೂ ಒಂದೇ ಒಂದುಪತ್ರವೂ ಅಲ್ಲಿಂದ ಮುಂದೆ ಹೊರಡಲಿಲ್ಲ! ೨೦೧೩ ರ ಮಾರ್ಚ್ ತಿಂಗಳಲ್ಲಿ ಬೊಮ್ಮರ ಬೆಟ್ಟು ಗ್ರಾಮದ ಭೂಮಿ ಸಮತಟ್ಟು ಮಾಡಲು ಮೂಲನಿವಾಸಿ ಅಭಿವೃದ್ದಿ ಯೋಜನೆಯಡಿ ಒಂದೂವರೆ ಲಕ್ಷ ರೂಪಾಯಿ ಮಂಜೂರಾದ ಮಾಹಿತಿ ಸಿಕ್ಕಿತು! ಅದರಲ್ಲಿ ತೊಂಬತ್ತೇಳು ಸಾವಿರ ರೂಪಾಯಿ ಬಿಡುಗಡೆಯೂ ಆಯಿತು! ಆ ಬಿಡುಗಡೆ ಆದ ಹಣ ಎಲ್ಲಿಗೆ ಹೋಯಿತು? ಎಲ್ಲಿಗೆ ಹೋಯಿತೋ!!!

ಮತ್ತೆ ಹಣ ಹೊಡೆದರು!

ಅದಾಗಿ ಮತ್ತೆ ಪುನಃ ಕೆಲವು ತಿಂಗಳು ಕಳೆಯುತ್ತಿದ್ದಂತೆಯೇ ಇದೇ ಕೆಲಸಕ್ಕಾಗಿ ಮೂರು ಲಕ್ಷ ರೂಪಾಯಿ ಅನುದಾನಕ್ಕೆ ಕಾರ್ಯಪಾಲಕ ಅಭಿಯಂತರರು ಅಂದಾಜು ಪಟ್ಟಿ ಮಾಡಿ ಅದನ್ನು ಪೊಗದಸ್ತಾಗಿ ಮಡಚಿ ಸರ್ಕಾರಕ್ಕೆ ಸಲ್ಲಿಸಿದರು! ಆಗಲೂ ಮೂರು ಲಕ್ಷ ಮತ್ತೆ ಬಿಡುಗಡೆ ಆಯಿತೆ? ಆದರೆ ಹಣ ಎಲ್ಲಿ ಹೋಯಿತು? ಉಡುಪಿ ಶ್ರೀ ಕೃಷ್ಣನೇ ಬಲ್ಲ!

ನೀವೆ ಮಾಡ್ರಿ ಎಂದ ಡಿ.ಸಿ!

ಇಷ್ಟಾದರೂ ಈ ಗಿರಿಜನ ದಂಡು ಹೋರಾಟವನ್ನ ಬಿಡಲಿಲ್ಲ. ದೇವರು ಕೊಟ್ರೂ ಪೂಜಾರಿ ಬಿಡ ಅಂತಾರಲ್ಲಾ? ಸರ್ಕಾರದಿಂದಲೇ ಹಕ್ಕು ಪತ್ರ ಸಿಕ್ಕರೂ ಜಿಲ್ಲಾಡಳಿತ ಕೊಡವಲ್ಲದಲ್ಲಾ? ಎಂದು ಹೊರಟ ಗಿರಿಜನರ ಹೋರಾಟದ ಹಾಡು ಅಲ್ಲಿಗೆ ಮುಗಿಯಲಿಲ್ಲ. ಮತ್ತೆ ಜಿಲ್ಲಾಧಿಕಾರಿಗಳ ಕಛೇರಿಗೆ ಕಾಲೆಸೆದರು. ಅಲ್ಲಿ ವಿಶಾಲ ಮನೋಭಾವ ಇಲ್ಲದಿದ್ದರೂ ಆಳವಾದ ಪರಿಜ್ಞಾನವಿರುವ ಪಂಡಿತನಂತೆ ಮಾತಾಡುವ ಜಿಲ್ಲಾಧಿಕಾರಿ ಕುಂತಿದ್ದರು. ’ರೀ ಎನ್ ರೀ? ಸರ್ಕಾರ ಕೊಟ್ಟ ಭೂಮಿ ಸಮತಟ್ಟು ಮಾಡೋಕೆ ಸರ್ಕಾರವೇ ಬೇಕಾ? ನೀವೆ ಮಾಡ್ಕೊಳ್ರೀ.. ಎಂದು ಧಬಾಯಿಸಿದ್ದರು ಜಿಲ್ಲಾಧಿಕಾರಿ! ಎಲ್ಲಾ ಫಲಾನುಭವಿಗಳು ಕೈಸಾಲ ತಗೊಂಡು ಮುನ್ನೂರು ಜನರು  ಸೇರಿ ಶ್ರಮಧಾನ ಮಾಡಿದರು! ಅದು ನಿರಂತರ ಹದಿನೇಳು ದಿನಗಳ ಕಾಲ! ಆದರೂ ಭೂಮಿ ಸಂಪೂರ್ಣವಾಗಿ ಸಮತಟ್ಟಾಗಲಿಲ್ಲ.

 ಮಾನವ ಹಕ್ಕು ಆಯೋಗ ಬಂತು ಡಂ ಡಂ ಡಂ!

ಅದಾಗಿ ಮತ್ತೆ ಎರಡು ವರ್ಷಗಳು ಕಳೆದವು. ಉಡುಪಿಗೆ ೨೦೧೫ ರಂದು ಆಗಮಿಸಿದ ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೆ ಲಿಖಿತ ದೂರನ್ನ ಸಲ್ಲಿಸಿತು ಹೋರಾಟ ಸಮೀತಿ. ತಮಗಾದ ಅನ್ಯಾಯಗಳ ವಿವರವನ್ನ ಅಧ್ಯಕ್ಷರಿಗೆ ವಿವರಿಸಿದರು. ಅಧ್ಯಕ್ಷರೂ ಎಲ್ಲವನ್ನೂ ಸರಿ ಪಡಿಸುವ ಭರವಸೆಯನ್ನೂ ಕೊಟ್ಟರು. ಜಿಲ್ಲಾಧಿಕಾರಿ ವಿಶಾಲ್ ಎಂಬ ಪುಣ್ಯಾತ್ಮನನ್ನ ಕರೆದು ತಕ್ಷಣವೇ ಇದೆಲ್ಲಾ ಸಮಸ್ಯೆಗಳೂ ಪರಿಹಾರ ಕಾಣಬೇಕು ಎಂದಿತು ಮಾನವ ಹಕ್ಕು ಆಯೋಗ. ಕೊನೆಗೂ ಮಾನವ ಹಕ್ಕು ಆಯೋಗದಿಂದ ನಮ್ಮ ಸಮಸ್ಯೆ ಬಗೆಹರಿಯುತು ಎಂದಿತು ಗಿರಿಜನ ಹೋರಾಟ ಒಕ್ಕೂಟ! ಪಾಪ ಅದೂ ಈಡೇರಲಿಲ್ಲ ನೋಡಿ! ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿ ಹೋದರು! ಆದರೆ ಇವರ ಕಡತಗಳು ಎಲ್ಲಿಗೂ ವರ್ಗಾವಣೆ ಆಗಲೇ ಇಲ್ಲ. ನಿವೇಶನದ ಹಂಚಿಕೆಯೂ ಆಗಲಿಲ್ಲ. ಕೊರಗರ ಗೋಳಿಗೆ ಕಿವಿಯಾಗುವವರೂ ಯಾರೂ ಇರಲಿಲ್ಲ!ಪುನಃ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದರಾದರೂ ಬರೆದ ಪತ್ರಕ್ಕೆ ಇದುವರೆಗೂ ಮರುತ್ತರ ಬರಲೇ ಇಲ್ಲ!

ಪ್ರತಿಷ್ಠಾನದ ಮೆಟ್ಟಿಲೇರಿದ ಪ್ರಕರಣ!

ಎಲ್ಲಾ ಅವತಾರಗಳೂ ಮುಗಿದ ಮೇಲೆ ಗಿರಿಜನರ ಈ ಗೋಳಿಗೆ ಇನ್ನೆಲ್ಲಿಯೂ ಮುಕ್ತಿ ದೊರಕುವುದೇ ಸಾಧ್ಯವಿಲ್ಲ ಎಂದು ತಿಳಿದ ಮೇಲೆ ಸುಬೇದ ಮತ್ತು ಮಹಾಲಕ್ಷಿ ಎಂಬ ಮಹಿಳೆಯರು ಈ ಹಿಂದೆ ಒಂದಷ್ಟು ಸಲಹೆಯನ್ನೂ ನೀಡಿದ್ದ ಡಾ. ರವೀಂದ್ರನಾಥ್ ಶಾನಬಾಗರ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವನ್ನ, ಸಹಾಯವನ್ನ ಯಾಚಿಸಿ ಬಂದರು! ಸಾವಿರಾರು ಪ್ರಕರಣಗಳ ಬೆನ್ನು ಹತ್ತಿ ಹೊರಟ ಶಾನಬಾಗರಿಗೆ ಈಗ ಮೊದಲಿನ ಕಸುವಿಲ್ಲ! ಆದರೆ ಹುಮ್ಮಸ್ಸು ಇನಿತೂ ಕುಸಿದಿಲ್ಲ! ಇದೂ ಒಂದು ನೋಡಿ ಬಿಡುವ ಎನ್ನುವಂತೆ ಪ್ರಕರಣವನ್ನ ಕೈಗೆತ್ತಿಕೊಂಡರು. ಈಗಾಗಲೇ ಬರೆದಿರುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರು ಅಲ್ಲಿಂದ ಉತ್ತರ ಬಾರದೆ ಇದ್ದಾಗ ಲೋಕಾಯುಕ್ತಕ್ಕೂ ಬರೆದರು. ಕೊರಗರ ಕಾಲೋನಿ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ಐವತ್ತು ಲಕ್ಷ ರೂಪಾಯಿ ಹಣ ಎಲ್ಲೆಲ್ಲಿ ಎಷ್ಟೆಷ್ಟು ವಿನಿಯೋಗವಾಗಿದೆ ಎನ್ನುವುದಕ್ಕೂ ನಿಖರವಾದ ಮಾಹಿತಿಗಳು ದೊರಕುತ್ತಿಲ್ಲ. ಹಣವನ್ನ ವಿಧ್ಯುತ್ ಮತ್ತು ನಳ್ಳಿ ನೀರು ಮುಂತಾದ ಮೂಲಭೂತ ಸೌಲಭ್ಯಗಳಿಗೆ ಬಿಡುಗಡೆಯಾದ ಹಣವದು. ಅದನ್ನು ಹೇಗೆಲ್ಲ ವ್ಯಯಿಸಲಾಗಿದೆ ಎನ್ನುವ ಮಾಹಿತಿಯೂ ಸ್ಪಷ್ಟವಾಗಿ ದೊರಕುತ್ತಿರಲಿಲ್ಲ! ರಾಜಕಾರಣಿಗಳು ಹಕ್ಕು ಪತ್ರ ಕೊಟ್ಟರು ಮತ್ತೆ ಮನೆಗೆ ಹೋದರು ಬಿಟ್ಟರೆ ಇನ್ನೇನಾಯಿತು ಎಂದು ಕೇಳಲಿಲ್ಲ! ಅಧಿಕಾರಿಗಳಿಗೆ ಇವರು ಲಂಚ ಕೊಡುವ ಜನರಲ್ಲ ಎಂದು ತಿಳಿದಿದೆ! ಕೊಡಲಿಕ್ಕೆ ಇವರಲ್ಲಿ ಇರುವುದಾದರೂ ಏನು? ಕರಾವಳಿಯ ಮೂಲ ನಿವಾಸಿಗಳು ಇವರು! ಬಡತನದ ಬಳ್ಳಿಯಲ್ಲೇ ಬದುಕು ಜೀಕುವವರು! ಸಮಾಜಕಲ್ಯಾಣ ಇಲಾಖೆಯ ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಯ ತನಕ ಪತ್ರ ಬರೆದರೇ ಹೊರತು ಉತ್ತರ ಸಮರ್ಪಕವಾಗಿ ದೊರಕಲೇ ಇಲ್ಲ! ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ  ನ್ಯಾಯಾ ಬೇಕು ಎನ್ನುವ ಮಾದರಿಯ ಪ್ರತಿಭಟನೆಗಳು ನಡೆದವಾದರೂ ಅದರಿಂದ ಯಾವ ಉಪಯೋಗವಿದೆ ಹೇಳಿ? ಸರ್ಕಾರದ ಪರವಾಗಿ ಅಧಿಕಾರಿಯೊಬ್ಬ ಬಂದು ಮನವಿ ಸ್ವೀಕರಿಸುತ್ತಾನೆ॒ ತನ್ನ ಚೇಂಬರಿಗೆ ಹೋದವನು ಆ ಮನವಿಯನ್ನ ಅಲ್ಲೆಲ್ಲೋ ಮೂಲೆಗೆಸೆದು ಬಿಡುತ್ತಾನೆ! ಇಷ್ಟೆ. ಇದರಿಂದೆಲ್ಲ ಸಾಮಾಜಿಕ ನ್ಯಾಯ ದೊರಕುತ್ತದಾ? ೨೦೧೭ ರ ಅಗಸ್ಟ್ ತಿಂಗಳಲ್ಲಿ ರವೀಂದ್ರನಾಥ್ ಶಾನಬಾಗ್ ರವರ ಕಛೇರಿಗೆ ತಲುಪುವ ಈ ಪ್ರಕರಣದ ಬೆನ್ನಿಗೆ ಬೀಳುವ ಪ್ರತಿಷ್ಠಾನ ಕಾನೂನು ಹೋರಾಟವನ್ನ ರೂಪಿಸಿವ ನಿಟ್ಟಿನಲ್ಲಿ ಮುಂದಾಗುತ್ತದೆ ಸುಬೇದ ಮತ್ತು ಮಹಲಿಕ್ಷ್ಮಿಯವರ ಮುಂದಾಳತ್ವದಲ್ಲಿ ಕೊಂಡಾಡಿ ಗಿರಿಜನ ಕಾಲೋನಿ ನಿವೇಶನದಾರರ ಸಂಘ ಎಂಬುದನ್ನ ಸ್ಥಾಪಿಸಿ ಇನ್ನು ಮುಂದೆ ಯಾವುದೇ ಅಧಿಕಾರಿಗೂ, ರಾಜಕೀಯ ವ್ಯಕ್ತಿಗೂ ಮನವಿ ಮಾಡುವುದಿಲ್ಲ, ಇನ್ನೇನಿದ್ದರೂ ಕಾನೂನು ಹೋರಾಟ ಎಂದು ನಿರ್ಧಾರಕ್ಕೆ ಬರಲಾಯಿತು. ೨೦೧೭ ರ ನವೆಂಬರ್ ತಿಂಗಳಲ್ಲಿ ಕೊಂಡಾಡಿ ಗಿರಿಜನ ಕಾಲೋನಿ ನಿವೇಶನದಾರರ ಸಂಘದ ಲೆಟರ್ ಹೆಡ್ ನಲ್ಲಿ ಸಮಗ್ರ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಆಗ್ರಹ ಪತ್ರವನ್ನ ಬರೆಯಲಾಯಿತು. ’ಶೀಘ್ರವಾಗಿ ನಮ್ಮ ನಿವೇಶನಗಳ ಗಡಿಗುರುತು ಮಾಡಿಸಿ ಅವುಗಳನ್ನ ಹಸ್ತಾಂತರಿಸುವಂತೆ ಅಗ್ರಹಿಸುತ್ತೇವೆ. ಎಂಬ ಶೀರ್ಷಿಕೆಯ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ದಿನಾಂಕ 12-11-2017ರಂದು ಕೊರಗ ಸಮುದಾಯದ ಮುನ್ನೂರಕ್ಕೂ ಹೆಚ್ಚಿನ ಕಾರ್ಯಕರ್ತರು ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸುಮಾರು ೮೦೦ ಮಂದಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶ್ರಮಾಧಾನ ಆರಂಭಗೊಂಡಿತು. ಅದೆಲ್ಲವೂ ರವೀಂದ್ರನಾಥ್ ಶಾನಬಾಗರ ಮುಂದಾಳತ್ವದಲ್ಲಿ ನಡೆಯಿತು. ಸ್ಥಳಿಯ ಸುದ್ದಿ ಸಂಸ್ಥೆಗಳ ಕ್ಯಾಮರಾವೂ ಆ ಕಡೆ ತಿರುಗುತ್ತದಲ್ಲಾ? ಜಿಲ್ಲಾಧಿಕಾರಿಣಿ ಪ್ರಿಯಾಂಕ ಮೇರಿಯವರೂ  ಅಲ್ಲಿಗೆ ದೌಡಾಯಿಸಿ ಬಂದವರು ಸಧ್ಯದಲ್ಲೇ ಈ ಕಾಮಗಾರಿಯನ್ನು ಮುಗಿಸಿ ಶೀಘ್ರದಲ್ಲೇ ನಿವೇಶನದಾರರಿಗೆ ಹಸ್ತಾಂತರಿಸುವಂತೆ ಸಮಗ್ರ ಗಿರಿಜನ ಯೋಜನ ಅಧಿಕಾರಿಗಳಿಗೆ ಆದೇಶ ಮಾಡಿದರು. ಈ ಬೆಳವಣಿಗೆಗಳಿಗೆ ಮಾಧ್ಯಮಗಳೂ ಭಯಾನಕ ಸ್ಕೋಪ್ ಕೊಟ್ಟು ಬಿಟ್ಟವು..

ಐವತ್ತು ಲಕ್ಷ ಮಂಜೂರು!

ಇದೆ ಸಮಯಕ್ಕೆ ಸರಿಯಾಗಿ ಕೊರಗರ ಸರ್ವತೋಮುಖ ಅಭಿವೃದ್ದಿಗಾಗಿ ಮತ್ತು ಅವರ ಕಾಲೋನಿಗಳ ಮೂಲಭೂತ ಸೌಕರ್ಯಕ್ಕಾಗಿ ರಾಜ್ಯಸರ್ಕಾರದಿಂದ ಹತ್ತುಕೋಟಿ ಹಣದ ಪ್ಯಾಕೇಜ್ ಮಂಜೂರಾಯಿತು. ಕೊಂಡಾಡಿ ಕಾಲೋನಿಯ ಮೂಲಭೂತ ಸೌಕರ್ಯಕ್ಕಾಗಿ ಐವತ್ತು ಲಕ್ಷ ರೂಪಾಯಿ ಅನುದಾನವೂ ಬಂತು ಎಂದು ಸುದ್ದಿ ತಲುಪಿತು.. ಈಗಲಾದರೂ ಸಮಸ್ಯೆ ಬಗೆಹರಿದೀತು ಎಂದು ಕೊರಗರು ನಿಟ್ಟುಸಿರು ಬಿಟ್ಟರು! ಆದರೇನು ಬಂತು? ಅದಾಗಿ ಹದಿನೆಂಟು ತಿಂಗಳಾದರೂ ನಿವೇಶನ ಮಾಡಲಾಗಲೇ ಇಲ್ಲ! ರಸ್ತೆಗಳ ಕಾಮಗಾರಿ ನಡೆದಿಲ್ಲ. ಅವೈಜ್ಞಾನಿಕವಾಗಿ ಸುಮಾರು ೩೦ ಅಡಿ ಆಳಕ್ಕೆ ಗುಡ್ಡ ಕೊರೆದಿದ್ದಾರೆ. ಕೊನೆ ಪಕ್ಷ ಇದಕ್ಕೊಂದು ಕಾಂಕ್ರೀಟ್ ಗೋಡೆಯನ್ನಾದರೂ ಕಟ್ಟಿದ್ದರೆ ಬಛಾವ್! ಇಲ್ಲಿ ಅದೂ ಮಾಡಲಿಲ್ಲ. ಈ ಮಳೆಗಾಲದಲ್ಲಿ ಗುಡ್ಡಗಳು ಮತ್ತೆ ಕುಸಿದಿವೆ. ಕೊರಗರಿಗೆ ನಿವೇಶನ ಹಂಚಿಕೆ ಮಾಡಿದ ಮೇಲೆ ಮತ್ತೆ ಗುಡ್ಡ ಕುಸಿದರೆ ಆಗ ಹೊಣೆ ಹೊರುವವರು ಯಾರು? ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಇದರಲ್ಲಿ ನಡೆದಿರಬಹುದಾದ ಹಗರಣದ ವಾಸನೆಯ ಬೆನ್ನು ಹತ್ತಿ ಲೋಕಾಯುಕ್ತರಿಗೆ ದೂರು ರವಾನೆಯಾಗಿ ಇದಕ್ಕೆ ಬದಲಾಗಿ ಬೇರೆಯದೇ ಜಮೀನಿನಲ್ಲಿ ಜಾಗ ಮಂಜೂರು ಮಾಡುವಂತೆಯೂ ಸರ್ಕಾರವನ್ನ ಕೋರಲಾಗಿದೆ. ಮುಂದೇನಾಗಲಿದೆ? ಈಗಾಗಲೇ ನಿಮ್ಮ ನಿಮ್ಮ ನಿವೇಶನಗಳ ಸ್ವೀಕರಿಸುವಂತೆ ಆದೇಶ ಪ್ರತಿಯೂ ಕೊರಗರಿಗೆ ತಲುಪಿದೆ!ಯೋಜನ ಸಮನ್ವಯಾಧಿಕಾರಿ ಫಲಾನುಭವಿಗಳಿಗೆ ಪತ್ರವನ್ನೂ ರವಾನಿಸಿದ್ದಾರೆ. ೨೯ ಫಲಾನುಭವಿಗಳ ಜಮೀನು ಮಂಜೂರಾಗಿದ್ದು ಸದ್ರಿ ಜಮೀನಿನ ಸಮತಟ್ಟು ಕಾರ್ಯ ಬಹುತೇಕ ಪೂರ್ಣಗೊಂಡಿದ್ದುಸದ್ರಿ ಸಮೀನಿನ ಗಡಿ ಗುರುತು ಮಾಡಿ ದಿನಾಂಕ ೧೩.೦೮.೨೦೧೯ ರ ಪೂರ್ವಾಹ್ನ ಹನ್ನೊಂದು ಗಂಟೆಗೆ ಜಮೀನು ಹಸ್ತಾಂತರಿಸಬೇಕಾಗಿದ್ದು ಸಂಬಂಧಪಟ್ಟ ಫಲಾನುಭವಿಗಳು ಹಾಗು ಅಧಿಕಾರಿಗಳು ಹಾಜರಿರಬೇಕು ಎಂದು ಪ್ರಕಟಣೆ ಹೊರಟು ಬಂದು ತಲುಪಿದೆ. ಇದೀಗ ಇಲಾಖೆ ಚುರುಕಾಗಿದೆ! ಅದು ಸುಮ್ಮನೆ ಚುರುಕಾಗಿಲ್ಲ ಡಾಕ್ಟರ್ ಇಂಜೆಕ್ಷನ್ ಕೊಟ್ಟಿದ್ದಾರೆ॒! ಕೊನೆಗೂ ಕೊಂಡಾಡಿ ಕೊರಗರ ಸಮಸ್ಯೆ ಬಗೆಹರಿದೀತೆ? ಇನ್ನೂ ಕಾದು ನೋಡೋಣ

-ವಸಂತ್ ಗಿಳಿಯಾರ್

Leave a Comment