ಕೊರವಡಿ ಲಲಿತಾ ಪೂಜಾರಿ ಗೆ ಯಶೋಗಾಥೆ ಪುರಸ್ಕಾರ


“ನನ್ನ ಒಡಲಾಳದ ನೋವುಗಳೇ ನನ್ನ ಸಾಧನೆಗೆ ಸ್ಪೂರ್ತಿ” ಎಂದು ಈಕೆ ಹೇಳುವಾಗ ಯಾರ ಕೊರಳ ಸೆರೆಯಾದರೂ ಉಬ್ಬಿ ಬರುತ್ತದೆ! ಮಾತು ಮೂಖವಾಗುತ್ತದೆ! ಕಂಗಳು ತೇವಗೊಳ್ಳುತ್ತದೆ. ಈಕೆ ಅಸಾಮಾನ್ಯ ಸಾಧಕಿ. ತೀರ ಮೊನ್ನೆ ಮೊನ್ನೆ ಉಡುಪಿ ಜಿಲ್ಲೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಲಲಿತರನ್ನ ಪುರಸ್ಕರಿಸಿದಾಗ   ’ನನ್ನ  ಬದುಕನ್ನೂ ಗಮನಿಸುವವರಿದ್ದಾರಲ್ಲಾ? ಇಷ್ಟು ಸಾಕು, ಇಷ್ಟೇ ಸಾಕು’ ಎಂದೆನಿಸಿತಂತೆ.

ಕುಂಭಾಶಿಯ ಮಹಾಗಣಪತಿ ಕಣ್ಣುಬಿಟ್ಟರೆ ಈಕೆಯ ಮನೆಯ ನೇರಕ್ಕೆ ದೃಷ್ಠಿ ಹರಿದೀತು! ಅದೇ  ಕುಂಭಾಶಿಯ ಕೊರವಡಿ ಗ್ರಾಮದ  ಕೃಷಿಕ ಕುಟುಂಬದ ಮಹಾಬಲ ಪೂಜಾರಿ ಮತ್ತು ಗುಲಾಬಿ ಪೂಜಾರಿಯವರ  ಐವರು ಮಕ್ಕಳ ತುಂಬು ಸಂಸಾರಕ್ಕೆ ನಾಲ್ಕು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ. ಮಿಕ್ಕೆಲ್ಲಾ ಮಕ್ಕಳೂ ಮದುವೆಯಾಗಿ ಅವರವರ ಬದುಕು ಕಂಡುಕೊಂಡು ಸೌಖ್ಯದಲ್ಲಿದ್ದಾರೆ ಎಂಬ ಸಂತೃಪ್ತಿಈ ಕುಟುಂಬಕ್ಕಿದೆ. ಕೊರವಡಿಯ ಹೊಳೆಸಾಲಿನಿಂದ ಹದಿನಾರು ಹೆಜ್ಜೆ ಮುಂದೆ ಹೋದರೆ ಬಲಬಾಗದ ಬಯಲಿನಲ್ಲಿ ಇವರ ಮನೆಯಿದೆ. ಮನೆಯ ಹೆಸರು ಸೂರ್ಯ.  ಆ ಮನೆಯೊಳಗಿದೆ ನಿಜದ ಬೆಳಗು. ಆ ಬೆಳಗಿನ ಹೆಸರು ಲಲಿತಾ ಪೂಜಾರಿ.

ಪುಟ್ಟ ಕಂದ ಲಲಿತಾ ತೊಟ್ಟಿಲಲ್ಲಿದ್ದಾಗ ತಿಂಗಳ ಬೆಳಕಿನಂತಿದ್ದವಳು. ಚಟುವಟಿಕೆಯ ಮಗು. ತೊಟ್ಟಿಲಿಳಿದು ಅಂಬೆಗಾಲಿಟ್ಟು ತನ್ನ ಪುಟ್ಟ ಪುಟ್ಟ ಕಾಲುಗಳಲ್ಲಿ ಮನೆ ತುಂಬಾ ಓಡಾಡಿಕೊಂಡಿದ್ದ ಕಂದನಿಗೆ ಪ್ರಾಯ ಐದು ಮೀರಿ ಕೆಲ ತಿಂಗಳಾಗಿ ಇನ್ನೇನು ಅಕ್ಷರಲೋಕಕ್ಕೆ ತೆರಳಬೇಕೆನುವಷ್ಟರಲ್ಲಿ ಅದೊಂದು ದುಷ್ಟದಿವಸ  ಮಗುವಿಗೆ ಮೈಸುಡುವ ಜ್ವರ. ಔಷಧ ತಂದು ಕೊಟ್ಟರೂ ಜ್ವರ ತುಸುವೂ ಕಡಿಮೆಯಾಗಲಿಲ್ಲ. ಅದು ಲಲಿತಾಳ ಬದುಕಿಗೇ ಬಂದೆರಗಿದ ಜ್ವರ. ವಾರ ಕಳೆಯುವಷ್ಟರಲ್ಲಿ ಮನೆಯವರಿಗೆ ಗೊತ್ತಾಗಿದ್ದು ಲಲಿತಾ ಪೊಲಿಯೋಗೆ ತುತ್ತಾದ ಸತ್ಯ!

ಅದಾಗಿ ವರ್ಷ ಹಲವು ಕಳೆದವು. ಮಿಕ್ಕ ಮಕ್ಕಳೆಲ್ಲರೂ ಬಲಿತರು, ಎಲ್ಲರು ಆರೋಗ್ಯದಿಂದ ಓಡಾಡಿ, ಓದು ಕಲಿತು ಮದುವೆಯೂ ಆಗಿ ಹೋದರು. ಆದರೆ ಈ ಲಲಿತಾ ಎದ್ದು ನಿಲ್ಲಲಾಗದೆ, ಮಗ್ಗಲು ಬದಲಿಸಲಾಗದೆ, ತಕ್ಷಣಕ್ಕೆ ಕೈ ನೀಡಲೂ ಆಗದೆ ರೆಕ್ಕೆ ಮುರಿದ ಗುಬ್ಬಿಯಂತೆ ಮನೆಯಲ್ಲೇ ಉಳಿದು ಬಿಟ್ಟಳಾದರೂ ಅವಳ ಒಂದೊಂದೇ ಕನಸುಗಳು ಹೆಣೆದುಕೊಳ್ಳಲು ಆರಂಭಿಸಿತು. ಕಸ ರಸವಾಗಿ, ಕಾಗದ ಹೂವಾಗಿ, ನೂಲು ಕನಸಿನ ಬುಟ್ಟಿಯಾಗುತ್ತಲೇ ಲಲಿತಾ ತನ್ನ ಬದುಕನ್ನ ವಿಸ್ತರಿಸಿಕೊಳ್ಳುತ್ತಲೇ ಬಂದಳು

ಈ ಆಧುನಿಕ ಕಾಲದಲ್ಲಿ ಕಸೂತಿ ಕಲಿತ ಹುಡುಗಿಯರೂ ಮಾಡಲಾಗದಷ್ಟು ಚೆಂದನೆಯ ಉಲ್ಲನ್ ಬುಟ್ಟಿಯನ್ನ ಲಲಿತ ಹೆಣೆಯುತ್ತಾಳೆ, ತೂಗು ಬಿದ್ದ ಹೂಬಳ್ಳಿ ಅಸಲಿಯಲ್ಲ ಎಂದರೆ ದೇವರೂ ನಂಬದಷ್ಟು ನಾಜೂಕಾಗಿ ಅಲಂಕಾರಿಕ ಪ್ಲವರ್ ಫಾಟ್ ರಚಿಸುವುದು ಲಲಿತೆಯಿಂದ ಸಾಧ್ಯವಾಗಿದೆ. ನೀವು ವರದಿ ಓದಿ ನಾಳಿನ ರದ್ದಿ ಎಂದು ಮೂಲೆಗೆಸೆವ ಪೇಪರ್ರೂ ಲಲಿತಕ್ಕನ ಕೈನಲ್ಲಿ ಹೂಕುಂಡವಾಗಿಯೋ, ಅಲಂಕಾರಿಕ ವಸ್ತುಗಳಾಗಿಯೋ ಮರುಸೃಷ್ಠಿಯಾಗುತ್ತದೆ. ಹೀಗೆ ಲಲಿತಾ ಪೂಜಾರಿಯವರು ಆ ಸೂರ್ಯ ಎಂಬ ಮನೆಯ ಪುಟ್ಟ ನಡುಕೋಣೆಯೊಳಗೆ ತನ್ನದೇ ಬದುಕಿನ ಸೂರ್ಯನ ಕಿರಣಗಳನ್ನ ನೂಲ ಎಳೆಗಳಲ್ಲಿ ಕಂಡವರು. ಅವರಲ್ಲಿ ತನ್ನ ಮುಂದೆ ಹರವಿಕೊಂಡದ್ದು ಅವರ ಕನಸುಗಳನ್ನೇ ಹೊರತು ಇನ್ನೇನನ್ನೂ ಅಲ್ಲ

ಈಕೆಯ ಅಸಾಮಾನ್ಯ ಸಾಧನೆಯನ್ನ ಗುರುತಿಸಿ ನಮ್ಮ ಜಿಲ್ಲಾಡಳಿತ ಜಿಲ್ಲಾರಾಜ್ಯೋತ್ಸವದಿಂದ ಪುರಸ್ಕರಿಸಿದೆ. ನಿನ್ನೆ ದಿನ ಟೀಮ್ ಅಭಿಮತ ಲಲಿತಕ್ಕನ ಮನೆಗೆ ಹೋಗಿ ಅವರ ಪಕ್ಕದಲ್ಲೇ ಕುಳಿತು ಅವರನ್ನ ಸುಮ್ಮನೆ ಆಲಿಸಿ ಬಂತು. ನಾಡಿದ್ದು ಫೆಬ್ರವರಿ ಎಂಟರ ’ಅಭಿಮತ ಸಂಭ್ರಮ’ ಕಾರ್ಯಕ್ರಮದಲ್ಲಿ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಲಲಿತಕ್ಕನಿಗೆ ’ಯಶೋಗಾಥೆ ಗೌರವಾರ್ಪಣೆಯ ಮೂಲಕ ಪುರಸ್ಕರಿಸಲಿದೆ. ಅವತ್ತು  ಅಲ್ಲಿ ನೀವೂ ಚಪ್ಪಾಳೆಯಾಗಬೇಕು. ಚಪ್ಪಾಳೆಯಾಗುವ ನಿಮ್ಮ ಕಣ್ಣಲ್ಲೂ ಈ ಲಲಿತಕ್ಕನ ಕಣ್ಣಲ್ಲೂ ಹನಿತೆರೆಗಳಿರದಿದ್ದರೆ ಕೇಳಿ ಮತ್ತೆ!

ಬನ್ನಿ ಗಿಳಿಯಾರಿಗೆ;ತೀರಾ ನಿಮ್ಮದೇ ಎನಿಸುವ ಊರಿಗೆ

-ಟೀಮ್ ಅಭಿಮತ – We Are A Team

Leave a Comment