ಲವ್ ಕಾಲಂ…

ಪ್ರೀತಿ ಹುಡುಗಿ,

ಜಗತ್ತಿಗೆ ರಜೆಯಿದೆ ಎನ್ನುವಷ್ಟು ನನ್ನನ್ನಾವರಿಸುತ್ತಿದ್ದ ನಿದ್ರೆ ನೀ ವಾಕಿಂಗು ಬರುತ್ತೀ ಎಂದು ತಿಳಿದ ತರುವಾಯ ರಜಾ ಹಾಕಿ ಹೊರಟು ಹೋಯಿತು ..!! ಅದು ಅರ್ಜಿ ಕೊಟ್ಟು ರಜೆಯ ಮಂಜೂರು ಮಾಡಿಸಿಕೊಳ್ಳುವ ಕಾಮನ್ ಸೆನ್ಸು ಕೂಡ ತೋರಿಸಲಿಲ್ಲ..!! ನಿದಿರೆ ಎಂಬುದು ಹಾಗೆ ಹೊರುಟು ಹೋದುದಕ್ಕೊ ಏನೋ,ಇದೀಗ ನನ್ನ ಮುಂಜಾವುಗಳು ಬೇಗನೆ ತೆರದು ಕೊಳ್ಳುತ್ತವೆ, ಬ್ರಿಡ್ಜು ಸುವರ್ಣೆಯ ಮೇಲೆ ಉದ್ದಕ್ಕೂ ಹಾದು ಹೋದ ದಾರಿಯಲ್ಲಿ ಚುಮು ಚುಮು ಚಳಿಯೊಂದಿಗೆ ಮೆಲ್ಲಗೆ ವಾಕಿಂಗು ಹೊರಡುತ್ತೇನೆ, ಕಡುಕಪ್ಪು ಸ್ವೆಟರ್ರು ತಲೆಗೊಂದು ಮಂಕಿ ಕ್ಯಾಪು ಸಿಕ್ಕಿಸಿಕೊಂಡು ದಡಬಡಿಸಿಕೊಂಡು ನೀನು ಬರುತ್ತಿದ್ದರೆ ನನ್ನವೂ ಹೆಜ್ಜೆಗಳು ಕಳ್ಳ ಬೀಳುತ್ತವೆ, ಹೆಣ್ಣೇ ನೀನು ಥೇಟು ಕಿರಿಕ್ ಪಾರ್ಟಿಯ ರಶ್ಮಿಕಾ!! ನಾನು ಕರ್ಣ!!

ಆ ರಭಸದ ನಡಿಗೆಯ ಎದುರುಸಿರಿನ ನಡುವೆಯೂ ಸಿಂಗಲ್ ನಗುವ ಬಿಸಾಕುವ ದಯೆ ತೋರಿಸದೇ ಹೊರಟು ಹೋಗುವ ನಿನ್ನ ಅಹಂಕಾರವೇ ನನ್ನ ಮೊದಲ ಶತ್ರು !! ವಾಪಾಸು ತಿರುಗಿ ನೋಡುತ್ತೀ ಎಂದು ನೋಡುತ್ತಾ ನಿಂತರೆ,ನನ್ನ ಅಣಕಿಸಿ ನಗುವ ನಿನ್ನ ಜಡೆಗಳಿಗೆ ನಿನಗಿಂತಲೂ ದುಪ್ಪಟ್ಟು ಅಹಂ!! ಆದರೂ ನನ್ನ ಪ್ರಯತ್ನ ಜಾರಿಯಲ್ಲಿಡುತ್ತೇನೆ!!ನಂಗೊತ್ತು ನಾಳೆಯೂ ಇವತ್ತಿನಷ್ಟೆ ಚಳಿ ಇರುತ್ತದೆ, ನದಿಯೊಳಗೆ ಚಂದ್ರ ಬಿದ್ದು ಹಾಲು ಹುಯ್ಯುತ್ತಾನೆ, ಮುಂಜಾವು ವೇಷ ಕಟ್ಟುವ ಹೊತ್ತಿಗೆ ನಿನ್ನ ನಗುವ ಅರಸಿಕೊಂಡು ನಾನು ಮತ್ತೆ  ವಾಕಿಂಗು ಬರಲಿದ್ದೇನೆ .. ಹೆಣ್ಣೆ ಒಂದು ಕನಕಾಂಬರ ತೂಕದ ನಗು ಬಿಸಾಕಿ ದಯೆ ತೋರಿಸು …ಈ ಹಾಳು ಜನ್ಮಕ್ಕೆ ಅಷ್ಟು ಸಾಕು!!
ಇತೀನಿಷ್ಪಾಪಿ ಹುಡುಗ

ಪ್ರವೀಣ್ ಯಕ್ಷಿಮಠ.

Leave a Comment