ಮಂಗನ ಕಾಯಿಲೆ: ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆಯಲ್ಲ!

ಇದು ವೈರಾಣುಗಳಿಂದ ಬರುವ ಕಾಯಿಲೆ. ನಿಫಾ ಜ್ವರ ,ಹಕ್ಕಿ ಜ್ವರ , ಹಂದಿಜ್ವರ , ಚಿಕೂನ್ ಗುನ್ಯಾ , ಮತ್ತು ಈ ಮಂಗನ ಕಾಯಿಲೆ ಎಲ್ಲವೂ ವೈರಾಣುಗಳಿಂದ ಬರುತ್ತವೆ , ಇವುಗಳ ಮೂಲ ಕುಲ ವೈರಸ್ ಆದರೆ ಜಾತಿ ಬೇರೆ ಬೇರೆ !

ಇತಿಹಾಸ ಮತ್ತು ಇರುವಿಕೆ

1957ರಲ್ಲಿ ಮೊತ್ತ ಮೊದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಹಲವಾರು ಮಂಗಗಳ ಸಾವಿನ ಜೊತೆ ಕಂಡುಬಂದಿದ್ದರಿಂದ ಈ ಕಾಯಿಲೆಗೆ ಕ್ಯಾಸನೂರು ಕಾಡಿನ ಕಾಯಿಲೆ ಎಂದ ಕರೆಯಲಾಯಿತು . ಸ್ಥಳಿಯವಾಗಿ ಇದನ್ನು ಮಂಗನ ಕಾಯಿಲೆ ಎಂದು ಕರೆಯುತ್ತಾರೆ . ಈ ವೈರಸ್ ಮಂಗಗಳಷ್ಟೆ ಅಲ್ಲದೆ ಇಲಿ ಅಳಿಲು ಮುಳ್ಳುಹಂದಿ ಗಳಲ್ಲಿ ಕಂಡುಬಂದಿದೆ . ಇದು ಮುಖ್ಯವಾಗಿ ದಕ್ಷಿಣ ಭಾರತದ ಹಾಗೂ ಗುಜರಾತ್ ಗಳಲ್ಲಿ ಕಂಡುಬರುವ ರೋಗ.

ಹರಡುವಿಕೆ

ಇದು ಉಣ್ಣೆಗಳಿಂದ ಹರಡುತ್ತದೆ (ವನಗು)
ಈ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ , ಮಂಗಗಳಿಂದ ಮಂಗಗಳಿಗೆ ಹರಡುವುದಿಲ್ಲ.ಆದ್ದರಿಂದ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಯಾರಿಗಾದರೂ ಮಂಗನ ಕಾಯಿಲೆ ಇದ್ದಲ್ಲಿ ಅವರ ಸಂಪರ್ಕದಲ್ಲಿ ಇರುವವರಿಗೆ ನೇರವಾಗಿ ಹರಡುವ ಭೀತಿ ಇಲ್ಲ.

ರೋಗದ ಮುಖ್ಯ ಲಕ್ಷಣಗಳು

ರೋಗ ತಗುಲಿದ ಮೂರರಿಂದ ಎಂಟು ದಿನಗಳ ನಂತರ ರೋಗದ ಲಕ್ಷಣಗಳು ಕಾಣಬರುತ್ತವೆ . ಹಠಾತ್ ಶುರುವಾಗುವ ತೀವ್ರ ಜ್ವರ ಶೀತ ತಲೆನೋವು ವಾಂತಿ ವಿಪರೀತ ಕೈಕಾಲು‌ ನೊವು , ಸೊಂಟ ನೋವು ನಿಶ್ಯಕ್ತಿ ಕೆಂಪಾದ ಕಣ್ಣುಗಳು ಈ ಮೇಲಿನ ಲಕ್ಷಣಗಳು ಬಂದ ಮೂರು ದಿನಗಳ ನಂತರ ಮೂಗು ಬಾಯಿ ಗುದದ್ವಾರದಿಂದ ರಕ್ತಸ್ರಾವ ಆಗಬಹುದು .ಕುಗ್ಗಿದ ರಕ್ತದೊತ್ತಡ (ಬಿ.ಪಿ) ರಕ್ತಕಣಗಳ ಇಳಿಕೆ (low plat late RBC & WBC )

ಈ ರೋಗದ ಲಕ್ಷಣಗಳು ಬಂದ ಒಂದರಿಂದ ಎರಡು ವಾರದಲ್ಲಿ ಎಂಬತ್ತರಿಂದ ತೊಂಬತ್ತರಷ್ಟು ರೋಗಿಗಳು ಗುಣಮುಖರಾಗುತ್ತಾರೆ , ಉಳಿದ ಹತ್ತರಿಂದ ಇಪ್ಪತ್ತು ಶೇಕಡಾ ಜನರಲ್ಲಿ ರೋಗ ಉಲ್ಬಣಗೊಂಡು ಸನ್ನಿವಾತ , ಮೆದುಳು ಜ್ವರದ ಲಕ್ಷಣಗಳಾದ ವಿಪರೀತ ತಲೆನೋವು , ಮಾನಸಿಕ ಅಡಚಣೆ , ನಡುಕ , ದೃಷ್ಟಿಹೀನತೆ ಉಂಟಾಗಬಹುದು . ಸುಮಾರು ಮೂರರಿಂದ ಐದು ಶೇಕಡಾ ರೋಗಿಗಳು ಸಾವನಪ್ಪುವ ಸಂಭವ ಇರುತ್ತದೆ .

ಚಿಕಿತ್ಸೆ

ಈ ರೋಗಕ್ಕೆ ನಿರ್ಧಿಷ್ಟವಾದ ಔಷಧಿ ಇರುವುದಿಲ್ಲ. ಜ್ವರ ಶೀತ ಮೈಕ್ ನೋವಿಗೆ ಉಪಚಾರ ಔಷಧಗಳನ್ನಷ್ಟೆ ನೀಡಬಹುದು . ಈ ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿದೆ . ಎರಡು ಲಸಿಕೆಯನ್ನು ಒಂದು ತಿಂಗಳಿನ ಅಂತರದಲ್ಲಿ ತೆಗೆದುಕೊಂಡಲ್ಲಿ ಸುಮಾರು ಅರವತ್ತೈದು ಪ್ರತಿಶತ ಪರಿಣಾಮಕಾರಿ . ಇನ್ನೊಂದು ಹೆಚ್ಚುವರಿ ಲಸಿಕೆ ತೆಗೆದುಕೊಂಡಲ್ಲಿ ಎಂಭತ್ತಮೂರು ಪ್ರತಿಶತ ಪರಿಣಾಮಕಾರಿ. ಪ್ರತಿವರ್ಷ ಬಲವರ್ಧಕ ಲಸಿಕೆಯನ್ನು ಹಾಕಿಕೊಳ್ಳಬೇಕು . ಎರಡನೇ ಲಸಿಕೆ ಹಾಕಿಸಿಕೊಂಡ ಒಂದು ತಿಂಗಳ ನಂತರವೇ ನಿರೋಧಕ ಶಕ್ತಿ ಬರುತ್ತದೆ .

ಮುಂಜಾಗ್ರತ ಕ್ರಮ

ಇದು ಉಣ್ಣೆಗಳಿಂದ ( ಬಣಗು) ಹರಡುವ ರೋಗ ಆದ್ದರಿಂದ ಉಣ್ಣೆಗಳು ನಮ್ಮ ದೇಹದ ಮೇಲೆ ಬಾರದ ಹಾಗೆ ಮಾಡಬೇಕು. ಹೇಗೆ ? ಕಾಡಿನಲ್ಲಿ , ದಟ್ಟವಾದ ಹುಲ್ಲಿನಲ್ಲಿ ಸಂಚರಿಸುವಾಗ ಮೈತುಂಬ ಬಟ್ಟೆ ಧರಿಸಬೇಕು . ಮಂಗ ಸಾಯುತ್ತಿರುವ ಕಾಡಿನಲ್ಲಿ ಸಂಚರಿಸುವಾಗ ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡುವ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡ ಹೋಗಬೇಕು .‌ಕಾಡಿನಿಂದ ಬಂದ ನಂತರ ಬಿಸಿ ನೀರಿನಿಂದ ಸೋಪು ಹಚ್ಚಿ ಚೆನ್ನಾಗಿ ತಿಕ್ಕಿ ಸ್ನಾನ ಮಾಡಬೇಕು . ಬಟ್ಟೆಗಳನ್ನು ಬಿಸಿನೀರಿನಿಂದ ಸೋಪು ಹಚ್ಚಿ ಒಗೆಯಬೇಕು ‌. ಮಂಗಗಳು ಸತ್ತಿರುವುದು ಕಂಡೊಡನೆ ಸ್ಥಳಿಯ ಆರೋಗ್ಯ ಸಿಬ್ಬಂದಿಗೆ ತಿಳಿಸುವುದು ಮಂಗ ಸತ್ತ ಅವಶೇಷಗಳನ್ನು ಸುಡುವುದು ಹಾಗೂ ಐವತ್ತೂ ಮೀಟರ್ ಪರೀಧಿಯಲ್ಲಿ ಮೆಲಾಥಿನ್ ದ್ರಾವಣವನ್ನು ಸಿಂಪಡಿಸುವುದು .

ಈ ಮಂಗನ ಕಾಯಿಲೆ ಸಸ್ತನಿಗಳಿಗೆ ಮಾರಕವಾದ ನರ ಕಾಯಿಲೆ ಆಗಿರುವುದರಿಂದ ಮುಂಜಾಗ್ರತಾ ಅಗತ್ಯ . ಮುಖ್ಯವಾಗಿ ಬಣಗು ಹುಲ್ಲುಗಳ ಸಂಪರ್ಕಕ್ಕೆ ಬರುವ ಬೇಟೆಯಾಡುವವರು , ರೈತರು , ಪಶುಸಂಗೋಪನೆ ಯಲ್ಲಿ ಇರುವವರು , ಕಾಡಿನಲ್ಲಿ ಕೆಲಸ ಮಾಡುವವರು ಜಾಗ್ರತೆಯಲ್ಲಿ ಇರುವುದು ಆರೋಗ್ಯಕರ .

  • ಡಾ. ಶ್ರೀಕಾಂತ್ ಶೆಟ್ಟಿ
    ನೇತ್ರ ತಜ್ಞರು ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ

Leave a Comment