ಪಡುಕರೆ ಕಳಪೆ ಕಾಮಗಾರಿಗೆ ಕಾರಣ ಯಾವುದು?

ಕೋಟ ಪಡುಕರೆ ಕಾಲೇಜಿನ ಮುಂಬಾಗದಿಂದ ಕೊಮೆ ಕಡೆ ಹೋಗುವ ರಸ್ತೆ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಾಂಕ್ರೀಟಿಕರಣ ರಸ್ತೆಯು ಈಗಾಗಲೇ ಬಿರುಕು ಬಿಟ್ಟಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ತೀವ್ರವಾದ ಆಕ್ಷೇಪವನ್ನ ವ್ಯಕ್ತಪಡಿಸಿ ಗುತ್ತಿಗೆದಾರರನ್ನ ಮತ್ತು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಗ್ರಾಮಸ್ಥರ ಮತ್ತು ಸ್ಥಳೀಯ ಯುವಕರ ಕಾಳಜಿಯ ಕಾರಣಕ್ಕೆ ಬ್ರೇಕ್ ಆದ ಕಾಂಕ್ರೀಟಿಕರಣದ ರಸ್ತೆಯ ವಿಡಿಯೋ ತುಣುಕೂ ವೈರಲ್ ಆಗಿದ್ದು ಸ್ಥಳಕ್ಕೆ AEE ಜಗಧೀಶ್ ಭಟ್ ಕೂಡ ಭೇಟಿ ಕೊಟ್ಟು ಕೋರ್ ತೆಗೆದು ಪರಿಶೀಲನೆಗೆ ಕಳುಹಿಸಿದ್ದಲ್ಲದೆ, ರಸ್ತೆ ಕಾಮಗಾರಿ ಹಂತದಲ್ಲೇ ಇರುವಾಗ ಇದು ತಿಳಿದು ಬಂದಿರುವುದರಿಂದಾಗಿ ಎಲ್ಲಿ ಸಮಸ್ಯೆಯಾಗಿದೆ ಎಂದು ತಕ್ಷಣವೇ ನೋಡಿ ರಸ್ತೆಯನ್ನ ಅತ್ಯಂತ ಗುಣಮಟ್ಟದ ರಸ್ತೆಯನ್ನಾಗಿ ಮಾಡುತ್ತೇವೆ ಎಂದು ಅಭಿಮತಕ್ಕೆ ತಿಳಿಸಿದರು.

ನಾಲ್ಕು ಕೋಟಿ ವೆಚ್ಚದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟವನ್ನ ಪರಿಶೀಲನೆ ನಡೆಸುವ ಅಧಿಕಾರಿಗಳು ಅಲ್ಲೆಲ್ಲೋ ಕುಳಿತು ಕಿಸೆ ತುಂಬಿಸಿಕೊಂಡು ಕೂರುತ್ತಾರೆ. ಈ ಇಂಜಿನಿಯರ್ ಗಳಿಗೂ ಕಾಲ ಕಾಲಕ್ಕೆ ಪರ್ಸೆಂಟೇಜ್ ಕೊಟ್ಟೇ ಬಿಲ್ ಪಾಸ್ ಮಾಡಿಕೊಳ್ಳುವ ಅನಿವಾರ್ಯ! ಬೆಂಗಳೂರಿನ ವಿದಾನ ಸೌಧದಿಂದ ಆರಂಭವಾಗಿ ಸ್ಥಳೀಯ ಇಂಜಿನೀಯರ್ ತನಕವೂ ಕಪ್ಪ ಕೊಡದಿದ್ದರೆ ಬಿಲ್ಲು ಪಾಸಾಗದೆ ಗುತ್ತಿಗೆದಾರ ಹಾಕಿದ ದುಡ್ಡಿಗೆ ಬಡ್ಡಿಯೂ ಹುಟ್ಟದ ಪರಿಸ್ಥಿತಿ ಇದೆ.

ಪಡುಕರೆಯ ಈ ರಸ್ತೆಯಲ್ಲಿ ಗುತ್ತಿಗೆದಾರ ಫಿಲಿಪ್ ಡಿ ಕೋಷ್ಟ ತಮ್ಮ ಸೈಂಟ್ ಅಂಥೋನಿ ಕನ್ಸ್ಟ್ರಕ್ಷನ್ ಕಂಪೇನಿ ಮೂಲಕ ಈ ಹಿಂದಿನ ಬಹುತೇಕ ಯಶಸ್ವಿ ಕಾಮಗಾರಿ ಮಾಡಿದಂತವರು. ಇಲ್ಲಿ ಯಾಕೆ ಯಡವಟ್ಟಾಯಿತೋ ಗೊತ್ತಿಲ್ಲ.

ಆರ್.ಎಂ.ಸಿ. ಮಿಕ್ಸಿಂಗ್ ಕಂಪೇನಿಯಲ್ಲಿ ಬಳಸಿದ ಮಿತಿ ಮೀರಿದ ಕೆಮಿಕಲ್ ಪರಿಣಾಮದಿಂದಲೂ ( ಬೆಗ ಗಟ್ಟಿಯಾಗದೆ ಇರಲಿ ಎಂದು ಅಲ್ಲಿ ಕೆಮಿಕಲ್ ಬಳಸುತ್ತಾರೆ!) ಹೀಗೆ ಆಗಿರುವ ಸಾಧ್ಯತೆಗಳಿವೆ. ಕಾಮಗಾರಿ ಕ್ರ್ಯಾಕ್ ಆದ ತಕ್ಷಣ ಅದಕ್ಕೆ ತಾಂತ್ರಿಕವಾದ ಹಲವಾರು ಕಾರಣಗಳೂ ಇದ್ದೀತು. ಆದರೂ ಗುತ್ತಿಗೆದಾರರಿಗಿಂತಲೂ ಇಂಜಿನಿಯರ್ಸ್ ಸ್ಥಳದಲ್ಲಿ ಇದ್ದು ಸಮರ್ಪಕವಾಗಿ ಪರಿಶೀಲನೆ ಮಾಡಬೇಕಲ್ಲವೆ? ಕುಂದಾಪುರದಲ್ಲಿ ಬಹುತೇಕ ಗುಣಮಟ್ಟದ ಕಾಮಗಾರಿಗಳು ನಡೆಯುವಲ್ಲಿಯೂ ಇಂಜಿನಿಯರ್ಸ್ ಮತ್ತು ಗುತ್ತಿಗೆದಾರ ಪಾತ್ರವೇ ಪ್ರಮುಖ. ಎನ್ನುವುದನ್ನೂ ಈ ಸಂದರ್ಭದಲ್ಲಿ ಅಲ್ಲಗಳೆಯುವಂತಿಲ್ಲ.

ಇನ್ನು ಇಲಾಖೆಗಳಲ್ಲಿ ದುರ್ಗಾದಾಸ್ ಎಂಬಂತಹ ಮಹಾನ್ ಭ್ರಷ್ಟ, ಲಂಚಕೋರ ಅಧಿಕಾರಿಗಳು ಗುತ್ತಿಗೆದಾರಿಂದಲೇ ಮನೆಗೆ ತರಕಾರಿಯನ್ನೂ ತರಿಸಿಕೊಳ್ಳುವ ಇಂಜಿನಿಯರ್ಸ್ ಕೂಡ ಇದ್ದಾರೆ.ಕೆಲವು ಇಂಜಿನಿಯರ್ಸ್ ಗಳಿಗೆ ಗುತ್ತಿಗೆದಾರರೇ ಸ್ಕಾಚ್ ಬಾಟಲಿ, ಅಂಕದ ಕೋಳಿ ಮಾಂಸ, ಹಂದಿ ಕಾಲುಗಳನ್ನೂ ಆಮೀಷವಾಗಿ ನೀಡುವ ಉದಾಹರಣೆಗಳಿವೆ. ಅದರ ಬಗ್ಗೆ ಮುಂದೆ ಸವಿಸ್ತಾರವಾಗಿ ಬರೆಯೋಣ.

ಪಡುಕರೆ ರಸ್ತೆಯ ವಿಷಯದಲ್ಲಿ ಕ್ಲಪ್ತ ಸಮಯದಲ್ಲಿ ಸಂಬಂಧಪಟ್ಟವರ ಗಮನ ಸೆಳೆದ ಪಡುಕರೆಯ ಜನತೆಯನ್ನ ಶ್ಲಾಘಿಸಲೇ ಬೇಕಿದೆ.

Leave a Comment