ಪಟ್ಲರಿಗೆ ನ್ಯಾಯಕ್ಕಾಗಿ ಅಭಿಮಾನಿಗಳ ಆಗ್ರಹ

ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳು ಮತ್ತಿತರ ಸಂಘ ಸಂಸ್ಥೆಗಳು ಸೇರಿ ಆಯೋಜಿಸಿದ ಬೆಂಗಳೂರಿನ ಟೌನ್ ಹಾಲ್ ಮುಂದಿನ ’ನ್ಯಾಯಕ್ಕಾಗಿ ಆಗ್ರಹ’ ಪ್ರತಿಭಟನ ಸಭೆ ಯಶಸ್ವಿಗೊಂಡಿತು.

ಕಟೀಲು ದುರ್ಗಾಪರಮೇಶ್ವರಿ ಯಕ್ಷಾಗಾನ ಮೇಳದ ಪ್ರಧಾನ ಭಾಗವತರಾರ ಪಟ್ಲ ಸತೀಶ್ ಶೆಟ್ಟಿಯವರಿಗೆ ಅವಮಾನ ಮಾಡಿ ರಂಗಸ್ಥಳದಿಂದ ಕೆಳಕ್ಕಿಳಿಸಿದ ಪ್ರಕರಣ ಯಕ್ಷಗಾನ ಮತ್ತು ಪಟ್ಲರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಟ್ಲ ಅಭಿಮಾನಿಗಳು ಒಂದಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ಕೂಡ ಈ ಹಿಂದೆ ಪ್ರತಿಭಟಿಸಿದ್ದರು.

ಇವತ್ತು ಬೆಂಗಳೂರಿನಲ್ಲಿರುವ ಪಟ್ಲ ಅಭಿಮಾನಿಗಳು ನಗರದ ಟೌನ್ ಹಾಲ್ ಮುಂದೆ ಪ್ರತಿಭಟಿಸಿ ಪಟ್ಲರಿಗೆ ನ್ಯಾಯ ಸಲ್ಲಲೇ ಬೇಕು ಎಂದು ಆಗ್ರಹಿಸಿದ್ದಲ್ಲದೆ ’ಬೇಕೆ ಬೇಕು ಕಟೀಲು ಮೇಳಕ್ಕೆ ಪಟ್ಲ ಬೇಕು, ಎಂಬಂತೆ ಘೋಷಣೆಯನ್ನ ಕೂಗಿದರು.

ವಾರದ ನಡುವಿನ ದಿನವಾದರೂ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿರುವುದು ಎಲ್ಲರ ಗಮನ ಸೆಳೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಮೊಗವೀರ ಮುಂದಾಳು ಬೀಜಾಡಿ ನರಸಿಂಹ, ಸಾಂಸ್ಕೃತಿಕ ಚಿಂತಕ ದೀಪಕ್ ಬಾರ್ಕೂರ್, ಜೈ ಭಾರ್ಗವ ಬಳಗದ ಅಜಿತ್ ಕಿರಾಡಿ, ಯಕ್ಷದ್ರುವ ಪಟ್ಲ ಫೌಂಡೇಶನ್ನಿನ ಪದಾದಿಕಾರಿಗಳಾದ ದಿನೇಶ್ ವೈದ್ಯ ಅಂಪಾರು ಮತ್ತು ಉದಯ್ ಹಾಲಾಡಿ, ಬಂಟ್ಸ್ ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಯಕ್ಷಗಾನ ಅಕಾಡಮಿಯ ಕೆ.ಎಂ. ಶೇಖರ್, ಯಕ್ಷಗಾನ ಕಲಾವಿದ, ಸಂಘಟಕ ಶಿವಕುಮಾರ್ ಬೇಗಾರ್ , ಚಲನಚಿತ್ರ ನಟ ಮಠ ಕೊಪ್ಪಳ್ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಐದುನೂರಕ್ಕೂ ಹೆಚ್ಚು ಪಟ್ಲ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Leave a Comment