ಧೋ ಎಂಬ ಮಳೆ ಸುರಿಯುತ್ತಿರುವಾಗಲೆ ನಾವೆಲ್ಲ ಆ ಸುದ್ದಿ ಕೇಳಿದ್ದು…

ಜೋರು ಮಳೆ. ಮನೆಯಿಂದ ಹೊರಗಡೆ ಹೋಗಲಾಗುವುದಿಲ್ಲ. ಆ ಪಡು ದಿಕ್ಕಿನಲ್ಲಿ ನೋಡಿದರೆ ಯಾರೂ ಕಾಣಿಸುತ್ತಿಲ್ಲ. ದಟ್ಟ ಮಂಜು ಕಟ್ಟಿಕೊಂಡಂತಿದೆ.. ಮನೆಯ ಒಳಗಡೆ ಮಬ್ಬುಗತ್ತಲು, ಕರೆಂಟ್ ಇದ್ದಿರಲಿಲ್ಲ. ಖಾಲಿ ಪಾತ್ರೆಗಳೆ ತುಂಬಿರುವ ಅಡುಗೆ ಮನೆಗೆ ಹೋದರೆ, ಕೆಟ್ಟ ಹಸಿವು. ಆ ಬ್ರಾಹ್ಮಣರ ಮನೆಯಲ್ಲಿ ಮಾಡಿದ ತಿಂಡಿಯ ಪರಿಮಳ ಮೂಗಿಗೆ ಬಡಿದಂತೆ! ಮನೆಯ ಒಳಗೂ ಹೊರಗೂ ಒಡಾಡುವುದು, ಅದೆನನ್ನೋ ಯೋಚಿಸುವುದು. ಅಮ್ಮನನ್ನು ನೆನೆಯುವುದು.ದೂರದಲ್ಲಿ ಕಾಣುವ ಬಯಲಿನ ಕಡೆಗೆ ನೋಡಿ, ಅಲ್ಲಿ ಅಮ್ಮನ ಸೀರೆ ಕಂಡರೆ ಸಮಾಧಾನ ಪಟ್ಟುಕೊಳ್ಳುವುದು.. ಮಳೆ ಬಂತೆಂದರೆ ಬಾಲ್ಯದ ಆಟ, ತುಂಟಾಟಗಳ ಮೆರವಣಿಗೆ. ಬಹುಷಃ ಇಷ್ಟೆ ಮಳೆಯಿದ್ದಿರಬಹುದು. ಪಡುಹೊಳೆ ತುಂಬಿ ಹರಿಯುತ್ತಿತ್ತು. ಧೋ..ಎಂಬ ಮಳೆ ಸುರಿಯುತ್ತಿರುವಾಗಲೆ ನಾವೆಲ್ಲಾ ಆ ಸುದ್ದಿ ಕೇಳಿದ್ದು!! ಹೊಳೆಯಲ್ಲಿ ಮುಳುಗಿ ಹೋದರಂತೆ! ಜೀವವೇ ಹೋಯಿತಂತೆ!! ನಮ್ಮ ಮನೆಯ ಹಿಂಬದಿಯಲ್ಲಿ ಸಾಗಿದರೆ ದೂರಕ್ಕೆ ಕಾಣ ಸಿಗುವ ಆ ಹೆಂಚಿನ ಮನೆಯ ತಾಯಿಯೆ, ಇನ್ನಿಲ್ಲವಾದದ್ದು! ಅವರ ಮಗನೂ ನಮ್ಮದೇ ಶಾಲೆಗೆ ಬರುತ್ತಾನೆ. ನೋಡನೋಡುತ್ತಿದ್ದಂತೆ
ಅವರ ಮನೆಯ ಎದುರೆಲ್ಲಾ ಜನವೋ ಜನ. ಸತ್ತವರು ಮರಳಿ ಬರುವುದಿಲ್ಲವಂತೆ!! ಎಂಥಹ ಭೀಕರ!! ನನಗೆ ನನ್ನ ಶಾಲೆಗೆ ಬರುವ ಆ ಹುಡುಗನದ್ದೆ ಚಿಂತೆಯಾಗಿತ್ತು. ಅವನ ಜೀವ ತನ್ನ ತಾಯಿಗಾಗಿ ಎಲ್ಲೆಂದರಲ್ಲಿ ಹುಡುಕುತ್ತಿರಬಹುದು. ಹಸಿವಿನಿಂದ ಕಣ್ಣೀರಾಗುತ್ತಿರಬಹುದು, ತಾಯಿಯ ಮಡಿಲಿಗೆ ಕರುಳು ಗೋಗರೆಯುತ್ತಿರಬಹುದು. ಎನೇನೊ ಮರುಗಿದೆ. ಸಾವು-ಬದುಕಿನ ಭಯಾನಕತೆ, ಭಾವುಕತೆ, ಪ್ರೀತಿಯ ಸೆಳೆತ ಯಾರನ್ನು ಬಿಟ್ಟಿದೆ ಹೇಳಿ..

ನಾನು ಐದು ಅಥವಾ ಆರು ವರ್ಷದವನಿರಬಹುದು. ನನ್ನ ಅಕ್ಕಂದಿರಾದ ಶೋಭಾ, ಶಾಲಿನಿ, ಮತ್ತು ನಾಗನ ಜೊತೆಯಲ್ಲಿ ಇದೇ ಮಳೆಯಲ್ಲಿ ಆಟವಾಡುತ್ತಾ ಅದೊಂದು ನಿರ್ಧಾರಕ್ಕೆ ಬಂದೆವು. ಮನೆಯಲ್ಲಿ ಯಾರೂ ಹೇಳುವವರು ಕೇಳುವವರು ಇರಲಿಲ್ಲ. ಎಲ್ಲರೂ ಕೃಷಿ ಕೆಲಸದಲ್ಲಿ ಮಗ್ನ. ನನ್ನ ತಂದೆಯ ಮನೆ ನಮ್ಮ ಮನೆಯ ನೇರಕ್ಕೆ ಆದರೂ ಮೂರು ಹಸಿರಾದ ವಿಶಾಲ ಬಯಲುಗಳನ್ನು ಕ್ರಮಿಸಬೇಕು. ಎರಡು ದೊಡ್ಡ ತೋಡುಗಳನ್ನು ದಾಟಬೇಕು. ಆ ಒಂದು ವಿಶಿಷ್ಟವಾದ ಕೆರೆ ; ಜಕ್ಕನ ಕೆರೆಯ ದಂಡೆಯ ಮೇಲೂ ಸಾಗಬೇಕು. ಆ ಕೆರೆ ಅಂದು ಸಂಪೂರ್ಣ ಕಮಲದ ಎಲೆಗಳಿಂದ ಆವೃತವಾಗಿದ್ದು ಹಸಿರು ಬಣ್ಣದ ನೀರಿನಿಂದ ಕೂಡಿತ್ತು. ನೀರಿನ ಆ ಹಸಿರು ಬಣ್ಣಕ್ಕೆ ಕಾರಣ ಉಮ್ಮಲ್ತಿ ಎಂದು ಊರಿನ ಕೆಲವರು ಹೇಳುತ್ತಿದ್ದರು. ನನ್ನ ತಂದೆಯ ಮನೆಗೆ, ಎಲ್ಲರೂ ಹೋಗಿ ಬರೋಣ ಅಂದೆ. ಎಲ್ಲರೂ ಒಪ್ಪಿದರು. ಉದ್ದನೆಯ ಒಂದೆರಡು ಛತ್ರಿಗಳಿದ್ದವು. ಒಂದು ಕಂಬಳಿಯಂತಹದ್ದೊಂದು ಪ್ಲಾಸ್ಟಿಕ್ ಇತ್ತು. ಮಳೆಯಲ್ಲಿ ನನೆಯುವುದೆ ಉದ್ದೇಶವಾದರೂ ಮನೆಯವರ ಬಿಸಿಬಿಸಿ ಕಡುಬಿಗೆ ಅಂಜಿ ಅದನ್ನೆಲ್ಲಾ ತಲೆಗೆ ಅಡ್ಡ ಹಿಡಿದುಕೊಂಡು ಹೊರಟೆವು. ಮಳೆ ಅಂದರೆ ಮಳೆ. . ದಾರಿಗೆ ಎದುರಾದ ಕೆಲವರು; ಅಲ್ಲಿ ತೋಡು ತುಂಬಿ ಹರಿಯುತ್ತಿದೆ. ನೀರು ಹೆಚ್ಚಾಗಿ ಗದ್ದೆಯ ಮೇಲೆ ಬಂದು ಅಂಚಿನ ಮೇಲೆಲ್ಲಾ ಹರಿಯುತ್ತಿದೆ. ನಿಮ್ಮ ಸವಾರಿ ಎಲ್ಲಿಗೆ ಹೊರಟಿದ್ದು? ಮನೆಗೆ ಹೋಗಿ ಎಂದು ಗದರಿದರು. ಅವರ ಮಾತಿಗೆ ಕಿವಿಗೊಡದ ನಾವು ಸರದಿಯಲ್ಲಿ ಹೊರಟೆವು. ಗಾಳಿಯೂ ಜೋರಾಗಿತ್ತು. ಆ ಬಿರುಸಾದ ಗಾಳಿ ಒಮ್ಮೊಮ್ಮೆ ನಮ್ಮನ್ನು ಅಂಚಿನಿಂದ ಕೆಳಗೆ ತಳ್ಳುತ್ತಿತ್ತು. ಎತ್ತಿ ಹಿಡಿದ ಕೊಡೆ ತಿರುವುಮುರುವಾಯಿತು. ನೀರೆಲ್ಲಾ ರಭಸವಾಗಿ ಹರಿಯುತ್ತಿದ್ದವು. ತೋಡು ಹತ್ತಿರಕ್ಕೆ ಬರುತ್ತಿದ್ದಂತೆ ನಾಗೇಶ ಮಾಷ್ಟ್ರ ಗದ್ದೆಯ ಚಿಕ್ಕ ನೀರಿನ ಸಂಕ ದಾಟಬೇಕಿತ್ತು. ಆದರೆ ಆ ಸಂಕ ಇರಲಿಲ್ಲ. ಮಳೆಯ ರಭಸಕ್ಕೆ ಅಂಚು ಕಿತ್ತುಕೊಂಡು ಹೋಗಿತ್ತು. ಸುಮಾರು ಹತ್ತು ಹನ್ನೆರಡು ಅಡಿ ಉದ್ದಕ್ಕೆ ನೀರು, ಮೇಲು ಗದ್ದೆಯಿಂದ ಕೆಳಗೆದ್ದೆಗೆ ಹರಿಯುತ್ತಾ ಕಣಿವೆ ಉಂಟಾಗಿತ್ತು!! ಎನೂ ಅರಿವಿರದ ನಾವು ,ಒಬ್ಬೊಬ್ಬರೆ ಕೆಳಗಿಳಿದು ಕಾಲಿಡುತ್ತಿದ್ದಂತೆ, ನೀರಿನ ರಭಸ, ಕಾಲುಗಳನ್ನು ಎಳೆದುಕೊಂಡು ಹೋಗಿ ಉದ್ದನೆಯ ನೀರಿನ ಕಣಿವೆಗೆ ಎಸೆಯಿತು. ದೇಹ ನೀರಿನಲ್ಲಿ ಮುಳುಗೇಳಲು ಪ್ರಾರಂಭಿಸಿತ್ತು.ಮೂಗಿನೊಳಕ್ಕೆ ನೀರು ಹೋಗಿ ಒದ್ದಾಡಿದೆವು. ಸಾಯುತ್ತೇವೆಯಾ ಎಂಬರಿಕೆಯಿಂದಲೆ ಏಳಲಾಗದೆ , ಕೈಕಾಲು ಸೋತು, ಮುಳುಗಲಾರಂಭಿಸಿದೆವು. ಆ ನೀರಿನೊಳಗೇ ನನ್ನ ತಾಯಿ ನೆನಪಾದಳು. ದೇವರನ್ನು ನೆನೆದೆ. ತತ್‌ಕ್ಷಣವೇ ಅದೆಲ್ಲಿಂದಲೋ ಬಂದ ಹೋಸಮನೆ ಗಿರಿಜಕ್ಕ ಮತ್ತು ಮತ್ತೋಬ್ಬಾಕೆ ನಮ್ಮನ್ನೆಲ್ಲಾ ನೀರಿನಲ್ಲಿ ಜಾಲಾಡಿ, ಕಪ್ಪೆಗಳಂತೆ ಎತ್ತಿ, ಮೇಲ್ದಂಡೆಗೆ ಹಾಕಿ ಸಂತೈಸಿದರು.. ಮನೆಗೆ ಹೋಗಿ ಎಂದು ಗದರಿದರು.ಆಗೆಲ್ಲಾ ಟಿವಿಯಲ್ಲಿ ಬರುವ ಮಹಾಭಾರತದ ಕೃಷ್ಣ ಹೀಗೆಯೆ ರಕ್ಷಿಸುತ್ತಿದ್ದ.‌ ಬದುಕಿದೆಯಾ ಅನಿಸಿತು. ಮನೆಗೆ ಬಂದೆವು.ಬಟ್ಟೆ ಬದಲಾಯಿಸಿದೆವು. ಒಬ್ಬರಿಗೊಬ್ಬರು ಮೌನದಿಂದ್ದೆವು. ಇವಿಷ್ಟೂ ವಿಚಾರ ಸಂಜೆ ತಿಳಿದ ನನ್ನಮ್ಮ ;ಇದಿಷ್ಟೆ ಆಗಿದ್ದಕ್ಕೆ ಆಯಿತು. ಎನಾದರು ಹೆಚ್ಚುಕಡಿಮೆಯಾಗಿದ್ದರೆ ಎನು ಗತಿ ಎಂದು ಪರಿತಪಿಸುತ್ತಾ, ಬೈಗುಳಗಳ ಸುಪ್ರಭಾತ ರಾತ್ರಿಯವರೆಗೂ ಹೇಳಿದ್ದರು..
ರಾಘವೇಂದ್ರ ಹಿರಿಯಣ್ಣ ಗುಂಡ್ಮಿ

Leave a Comment