ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಯಾರಿಗೆ??

ಅಂತೂ ಕಾಲ ಕೂಡಿ ಬಂದಿದೆ,ಚುನಾವಣೆ ನಡೆದು ಸುಮಾರು ಒಂದುವರೆ ವರುಷಗಳ ನಂತರ ಉಡುಪಿ ಜಿಲ್ಲೆಯ ಏಕೈಕ ಪಟ್ಟಣ ಪಂಚಾಯತ್ ಎನಿಸಿಕೊಂಡ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಆಡಳಿತ ಯಂತ್ರಕ್ಕೆ ಜೀವ ಬರುವ ಭವ್ಯ ಲಕ್ಷಣಗಳು ಎದ್ದು ಕಾಣಿಸುತ್ತಿದೆ.. ಎರಡು ಸಾವಿರದ ಹದಿನೆಂಟರ ಸೆಪ್ಟೆಂಬರ್ ತಿಂಗಳಲ್ಲಿ ಘೋಷಣೆಗೊಂಡ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶದ ನಂತರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯ ಗೊಂದಲಗಳು ಮುಗಿದು ಹೋಗಲು ಒಂದುವರೆ ವರುಷಗಳಷ್ಟು ಸಮಯ ತೆಗೆದು ಕೊಂಡು ಇದೀಗ ಪುನಃ ಮೀಸಲಾತಿ ಪ್ರಕಟಣೆ ಹೊರಬಿದ್ದಿದೆ, ಹಾಗೆ ರಾಜಪತ್ರ ಹೊರಬೀಳುತ್ತಲೆ ಅಧ್ಯಕ್ಷ ಉಪಾದ್ಯಕ್ಷ ಗಾದಿಗೆ ಏರಲು ಕಸರತ್ತುಗಳು ಸರ್ವ ದಿಕ್ಕಿನಿಂದಲೂ ಆರಂಭಗೊಂಡಿದೆ. ಹದಿನಾರು ವಾರ್ಡುಗಳ ಪೈಕಿ ಹತ್ತು ಬಿಜೆಪಿ, ಐದು ಕಾಂಗ್ರೇಸ್ ಹಾಗೂ ಏಕೈಕ ಪಕ್ಷೇತರ ಸದಸ್ಯರಿರುವ ಈ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಡಸಾಲೆ ಒಳಗೆ ಇಣುಕಿ ನೋಡಿದರೆ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದಲೇ ನಾಲ್ಕು ಆಕಾಂಕ್ಷಿಗಳು ಕಾಣಸಿಗುತ್ತಾರೆ. ಕಾರ್ಕಡ ಬಡಾಹೋಳಿ ವಾರ್ಡ್‌ನ ಸಂಜೀವ ದೇವಾಡಿಗರ ಹೆಸರು ಭಯಂಕರ ಜೋರಾಗಿ ಕೇಳಿ ಬರುತ್ತಿದ್ದು ಅವರೇ ಅಧ್ಯಕ್ಷರಾಗಿ ಬಿಡುತ್ತಾರೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನ ಲೆಕ್ಕಾಚಾರಕ್ಕೆ ಬಿದ್ದಿದ್ದಾರೆ, ಅತ್ತ ಕಾರ್ತಟ್ಟು ವಾರ್ಡಿನ ವಕೀಲ ಶ್ಯಾಮಸುಂದರ್ ನಾಯರಿ ಕೂಡ ಬಲವಾದ ಆಕಾಂಕ್ಷಿತನವನ್ನು ಹೊರಹಾಕಿದ್ದಾರೆ, ಗುಂಡ್ಮಿ ದೊಡ್ಮನೆಬೆಟ್ಟಿನ ಸದಸ್ಯೆ ಮಾಜಿ ಉಪಾಧ್ಯಕ್ಷೆ ಸುಲತಾ ಹೆಗ್ಡೆ ಕೂಡ ಈ ಅಧ್ಯಕ್ಷ ಗಿರಿಯ ರೇಸಿನಲ್ಲಿ ಕಾಣಿಸಿಕೊಂಡಿದ್ದಾರೆ, ಆದರೆ ಈೆ ಸಾಲಿಗ್ರಾಮ ಪಟ್ಟಣ ಪಂಚಾಯತಿಯ ರಾಜಕೀಯ ಚದುರಂಗದಾಟದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ನಡೆಯಲಿರುವ ವಿದ್ಯಾಮಾನಗಳೇ ಬೇರೆ ಇದೆ..

ಕಾರ್ಕಡಪಡು ಹೋಳಿ ವಾರ್ಡಿನಿಂದ ಸತತವಾಗಿ ಆರಿಸಿ ಬರುತ್ತಿರುವ, ಮಾಜಿ ಪಟ್ಟಣ ಪಂಚಾಯತ್ ಅದ್ಯಕ್ಷ ಕಾರ್ಕಡ ರಾಜುಪೂಜಾರಿಯೇ ಕೊನೆಗಳಿಗೆಯಲ್ಲಿ ಅಧ್ಯಕ್ಷ ಗಿರಿಯ ಮೇಲೆ ಬಂದು ಕುಳಿತುಕೊಳ್ಳುವ ಲಕ್ಷಣಗಳು ಢಾಳಾಗಿ ಗೋಚರಿಸುತ್ತಿದೆ.. ಬಿಜೆಪಿಯ
ಹತ್ತು ಸದಸ್ಯ ಬಲದಲ್ಲಿ ಏಳು ಮಂದಿ ಒಲವು ಈಗಾಗಲೇ ರಾಜು ಪೂಜಾರಿಯತ್ತ ವಾಲಿರುವುದು ಗುಟ್ಟಾಗಿ ಉಳಿದಿಲ್ಲ, ಹಾಗೇನಾದರೂ ಅವಶ್ಯ ಬಿದ್ದರೆ ಪಕ್ಷೇತರ ಸದಸ್ಯೆ, ಹಾಗೂ ಕಾಂಗ್ರೇಸಿನ ಎರಡು ತಲೆಗಳು ಕೂಡ ಬಂದು ಕಾರ್ಕಡ ರಾಜು ಪೂಜಾರಿಯ ಪಕ್ಕದಲ್ಲಿ ಬಂದು ನಿಲ್ಲುವ ಸಾಧ್ಯತೆಗಳಿವೆ..ಒಂದು ವೇಳೆ ರಾಜು ಪೂಜಾರಿ ರೇಸಿನಿಂದ ಹಿಂದೆ ಸರಿದರೆ ಸಂಜೀವ ದೇವಾಡಿಗರ ಹಾದಿ ಸುಗಮವಾಗಲಿದೆ, ಹಾಗೆಯೇ
ಅಧ್ಯಕ್ಷಗಿರಿಯ ಸಾಧ್ಯತೆಗಳ ಮೇಲೆಯೆ ಉಪಾಧ್ಯಕ್ಷ ಸ್ಥಾನದ ಆಯ್ಕೆಯೂ ನಿರ್ಧಾರವಾಗಲಿದೆ.. ರೇಖಾ ಕೇಶವ್, ಗಿರಿಜಾ ಪೂಜಾರ್ತಿ, ಮುಂತಾದವರು ಉಪಾಧ್ಯಕ್ಷ ಪಟ್ಟದ ರೇಸಿನಲ್ಲಿದ್ದರೂ ಕೂಡ ಕೊನೆಗಳಿಗೆಯಲ್ಲಿ ಯಕ್ಷಿಮಠ ವಾರ್ಡಿನ ಭಾಸ್ಕರ ಬಂಗೇರ ಉಪಾಧ್ಯಕ್ಷರಾಗಿ ಆಯ್ಕೆ ಯಾದರೂ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ.
ಸದ್ಯ ಅಧ್ಯಕ್ಷಗಿರಿಯ ಆಕಾಂಕ್ಷಿತರಲ್ಲಿ ನಾಲ್ವರೂ ಕೂಡ ಸಮರ್ಥರೇ ಆಗಿದ್ದು ಭಾರತೀಯ ಜನತಾ ಪಕ್ಷದ ಕುಂದಾಪುರ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

ಪ್ರವೀಣ್ ಯಕ್ಷಿಮಠ.

Leave a Comment