ಬಡತನವನ್ನೂ ಮೀರಿ ಬೆಳೆದ ಸೀತಾರಾಮ್ ಶೆಟ್ಟಿಯ ಯಶೋಗಾಥೆ!


ಸಾಧನೆ ಮಾಡಲು ಹೊರಡುವವರಿಗಿಂತ ಸಾದ್ನಿ ಮಾಡುವವರೇ ಈಗ ಹೆಚ್ಚು! ಇವನು ನೋಡಿ ನಮ್ಮ ಸೀತರಾಮ. ನಮ್ಮದೇ ಮೂಡುಗಿಳಿಯಾರು ಶಾಲೆಯಲ್ಲಿ ಓದಿದ ಹುಡುಗ. ಮನೆಯಲ್ಲಿ ತುಂಬು ಬಡತನವಿತ್ತು. ಆದರೂ ಸ್ವಾಭಿಮಾನಿ ಕುಟುಂಬ. ಗುಳ್ಳಾಡಿಯ ಟ್ಯಾಲೆಂಟ್ ಫ್ರೆಂಡ್ಸ್ ಇವನ ಜೊತೆಗಾರರು. ಸುತ್ತ ಮುತ್ತಲಿನ ಹತ್ತೂರಿನಲ್ಲಿಯೂ ಸೀತಾರಾಮನಿಗೆ ಗೆಳೆಯರಿದ್ದಾರೆ. ಇಂಥಾ ಸೀತಾರಾಮ ಪ್ರಾಯದ ಎಲ್ಲಾ ಹುಡುಗರಂತೆ ತಾನೂ ಜಿಮ್ಮಿಗೆ ಸೇರುತ್ತಾನೆ, ದೇಹ ದಂಡಿಸುತ್ತಾನೆ, ಕಸರತ್ತು ಮಾಡುತ್ತಾನೆ ಅಲ್ಲಿಂದ ಹೊರಟವನು ಹೊಟೇಲ್ ಒಂದರಲ್ಲಿ ಮೈ ಮುರಿಯೆ ದುಡಿಯುತ್ತಾನೆ.

ಹೀಗೆ ಹೋಟೇಲಿನಲ್ಲಿ ದುಡಿಯುತ್ತಲೇ ತನ್ನ ದೇಹವನ್ನೂ ದಷ್ಟಪುಷ್ಟವಾಗಿ ಇರಿಸಿಕೊಂಡು ಬದುಕಿದ್ದರೆ ನಾನಿಲ್ಲಿ ಸೀತಾರಾಮನ ಬಗ್ಗೆ ಯಾಕಾದರು ಬರೆದೇನು ಹೇಳಿ? ಇವನು ಅಸಾಧಾರಣ ಪ್ರತಿಭೆ. ನಿಮಗೂ ಗೊತ್ತಿದೆ. ನಾವಿಂದು ಸಿನೇಮಾದಲ್ಲಿ ನೋಡುವ ನಾಯಕರುಗಳ ದಷ್ಟಪುಷ್ಟ ದೇಹವಿದೆಯಲ್ಲಾ? ಅದು ಸುಮ್ಮನೆ ಬರುವುದಿಲ್ಲ. ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ, ಅವರಿಗೇ ಪ್ರತ್ಯೇಕವಾದ ಟ್ರೈನರುಗಳಿರುತ್ತಾರೆ, ಇಂತಿಷ್ಟು ಹೊತ್ತಿಗೆ ಇಂತಿಷ್ಟೇ ತಿನ್ನಬೇಕು ಎಂದು ಬೆಂಬಿಡದೆ ಸಲಹೆ ಕೊಡುವವರಿದ್ದಾರೆ. ಅವರ ಆ ದೇಹದ ಹಿಂದೆ ಹಲವು ಲಕ್ಷ ರೂಪಾಯಿ ಬೆವರಿನಂತೆಯೇ ಕರಗಿಯೂ ಹೋಗುತ್ತದೆ. ಆದರೆ ಇವನೆಲ್ಲಿಂದ ಲಕ್ಷಗಟ್ಟಲೆ ಹಣ ತಂದಾನು ಸೀತಾರಾಮ? ತಿಂಗಳ ಸಂಬಳ ಬಂದಿಲ್ಲವೆಂದರೆ ಮನೆಯ ಚಕ್ಕಡಿ ನಡೆಯುವುದೂ ಕಷ್ಟ ಕಷ್ಟ ಎನ್ನುವ ಪರಿಸ್ಥಿತಿಯಿಂದ ಬಂದ ಸೀತಾರಾಮ. ಆದರೂ ಇವನ ಸಾಹಸಕ್ಕೆ ನೀವು ಚಪ್ಪಾಳೆಯಾಗಲೇ ಬೇಕು.

ಸೀತಾರಾಮ ದೇಹಧಾರ್ಡ್ಯ ಸ್ಪರ್ಧೆಗೆ ನಿಲ್ಲುತ್ತೇನೆ ಎನ್ನುತ್ತಾನೆ. ಜಿಮ್ಮಿನಲ್ಲಿದ್ದ ಕೆಲವು ಹುಡುಗರು ಇವನನ್ನ ನೋಡಿ ನಗುತ್ತಾರೆ. ’ಲೋ ಸೀತರಾಮ ಬಾಡಿ ಬಿಲ್ಡಿಂಗ್ ಕಾಂಫಿಟೇಶನ್ನಿಗೆ ಹೋಗೋದು ಅಂದ್ರೇನು ತಮಾಷೆ ಅಂದ್ಕಂಡಿದ್ದೀಯಾ? ಸಿಕ್ಕಾಪಟ್ಟೆ ಕಾಸೂ ಬೇಕು.. ಅದಕ್ಕೆ ಅದರದ್ದೇ ಆದ ಪುಡ್ ಸಿಸ್ಟಮ್ ಇದೆ ಮಾರಾಯ’ ಎಂದು ಛೇಡಿಸಿದ್ದರು. ಆದರು ಈ ಹುಡುಗ ಧೃತಿಗೆಡಲಿಲ್ಲ. ಟ್ರೈನಿಂಗ್ ಪಡೆದ.! ಬ್ರಹ್ಮಾವರದ ಡೈಮಂಡ್ ಜಿಮ್ಮಿನ ಮಹೇಶ್ ಸುವರ್ಣ ಸೀತಾರಾಮನಿಗೆ ಸರಿಯಾದ ಟ್ರೈನರ್ ಆಗಿ ಸಿಕ್ಕರು. ಸೀತಾರಾಮ ಹಿಂದಿರುಗಿ ಕಂಡಿಲ್ಲ ಮತ್ತೆ! ಮಿಸ್ಟರ್ ಉಡುಪಿಯಲ್ಲಿ ಪ್ರಥಮ ಬಹುಮಾನ ಹೊಡೆದ, ಮಿಸ್ಟರ್ ಕರ್ನಾಟಕದಲ್ಲಿಯೂ ಮತ್ತೆ ಇವನೇ ಮೊದಲಿಗ! ಮಿಸ್ಟರ್ ಇಂಡಿಯಾದಲ್ಲಿ ಐದನೆ ಲೆವೆಲ್ಲಿಗೆ ಬಂದದ್ದೇ ಗ್ರೇಟ್! ಅದನ್ನೂ ಮೀರಿಸುವಂತೆ ಮಿಸ್ಟರ್ ಏಶ್ಯಾದಲ್ಲಿ ಆರನೆ ಸ್ಥಾನವನ್ನ ಪಡೆದು ಮಹತ್ತರವಾದ ಸಾಧನೆ ಮಾಡಿದ ಸೀತಾರಾಮನ ಸಾಧನೆಯನ್ನ ಗುರುತಿಸಿ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಫೆಬ್ರವರಿ ತಿಂಗಳ ಎಂಟನೇ ತಾರೀಕು ನಡೆಯುವ ಅಭಿಮತ ಸಂಭ್ರಮದಲ್ಲಿ
’ಯಶೋಗಾಥೆ’ ಗೌರವಾರ್ಪಣೆ ಮಾಡಿ ಪುರಸ್ಕರಿಸಲಿದೆ. ಅವತ್ತು ನೀವು ಬರಬೇಕು ಚಪ್ಪಾಳೆಯಾಗಲು

ಬನ್ನಿ ಗಿಳಿಯಾರಿಗೆ; ತೀರಾ ನಿಮ್ಮದೇ ಎನಿಸುವ ಊರಿಗೆ

Leave a Comment