ಕಿರುಕಥೆ: ಸೀತಾರಾಮನ ವಾಲಗ

ಸೀತಾರಾಮನ ಮದುವೆ ವಾಲಗ ಲಕ್ಷ್ಮೀದೇವಿ ಮಂಟಪದಲ್ಲಿ ಭರ್ಜರಿ ಸದ್ದು ಮಾಡಿತು..!! ಸೀತಾರಾಮ ಭಾರೀ ಭಯಂಕರ ಖುಷಿಯಲ್ಲಿದ್ದ!! ಮದುವೆಯಲ್ಲಿ ಹೊಟ್ಟೆ ಬಿರಿಯೇ ಉಂಡವರೆಲ್ಲ ಖುಷಿಯಾಗಿ ಊಟವನ್ನು ಹೊಗಳಿ ಸೀತಾರಾಮನ ಕೈ ಕುಲುಕಿ ಹೋಗುತ್ತಿದ್ದರು; ಭುಜಕ್ಕೆ ಭುಜ ತಾಗಿಸಿ ವಯ್ಯಾರದ ಪೋಸು ಕೊಡುತ್ತಿದ್ದ ತನ್ನ ಅರ್ಧಾಂಗಿಯನ್ನು ಕಂಡಷ್ಟೂ ಸೀತಾರಾಮ ಒಳಗೊಳಗೆ ಪುಳಕಿತನಾಗುತ್ತಿದ್ದ!! ಮನಸ್ಸಿನೊಳಗೆ ಸೇರುಗಟ್ಟಲೆ ಮಂಡಕ್ಕಿ ಮೇಯುತ್ತಲೇ ಮದುವೆಗಂಡು ಬಂದವರಿಗೆಲ್ಲಾ ಕೃತಕವಾಗಿ ಕಿರುನಗೆ ಬೀರುತ್ತಿದ್ದ! ಎದುರು ಸಾಲಿನಲ್ಲಿ ಕುಳಿತ ಒಂದಷ್ಟು ಹೆಂಗಸರು ಮದುವೆ ಹೆಣ್ಣಿನ ಕುತ್ತಿಗೆಯಲ್ಲಿದ್ದ ಆಭರಣಗಳ ತೂಕವನ್ನು ಕಣ್ಣಿನಲ್ಲೇ ಅಳೆದು ತೂಗಿ ಲೆಕ್ಕ ಹಾಕುದರಲ್ಲಿ ಮಗ್ನವಾಗಿದ್ದರು!! ಆದರೆ ಹೆಣ್ಣುಕೊಟ್ಟ ಮಾವನ ಮುಖ ಮಾತ್ರ ಕಪ್ಪೇರತೊಡಗಿತ್ತು! ಏಕೆಂದರೆ ಊಟದ ಚಪ್ಪರವೆಂಬುದು ತುಂಬಿತುಳುಕುತ್ತಿತ್ತು; ಸೀತಾರಾಮನ ಅಪ್ಪ ನೆರೆದಿದ್ದ ಜನಸ್ತೋಮ ನೋಡಿ ಹೆಮ್ಮೆಯಿಂದ ಬೀಗುತ್ತಾ ಪಂಚೆ ಬಿಗಿದು ಕಟ್ಟುತ್ತಿದ್ದರೆ,
ಒಂದುವರೆ ಸಾವಿರ ಜನ ಉಂಡು ಬಾಳೆಲೆ ಮಡಚಿ ಎದ್ದು ಹೋಗಿದ್ದರೂ ಉಣ್ಣಲು ಬಾಕಿ ಇದ್ದವರ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತಿರುವುದನ್ನು ನೋಡಿ ಸೀತಾರಾಮನ ಹೆಣ್ಣುಕೊಟ್ಟ ಮಾವನ ದಿಗಿಲು ಹಾರಿಹೋಗತೊಡಗಿತು!!

ಉಕ್ಕಿಹರಿಯುತ್ತಿರುವ ಜನಸ್ತೋಮ ನೋಡಿ ನಿಂತ ನೆಲವೇ ಕಂಪಿಸುತ್ತಿರುವ ಅನುಭವ ವಾದಂತಾಗಿ ಹಿರಿಯ ಜೀವ ನಡುಗತೊಡಗಿತು!
ನಿಮಿಷಕ್ಕೊಮ್ಮೆ ಉಗ್ರಾಣಕ್ಕೂ ಅಡುಗೆ ಕೋಣೆಗೂ ಹೊಕ್ಕಿ ಅಡಿಗೆಯವರಿಗೆ ದುಂಬಾಲು ಬಿದ್ದು ಓಡಾಡತೊಡಗಿದರು! ಗಡಿಬಿಡಿಗೆ ಬಿದ್ದ ಅಡಿಗೆ ಭಟ್ಟರು ಬೆವರು ಸುರಿಸಿಕೊಂಡು ಮತ್ತಷ್ಟೂ ಬೋಜನ ತಯಾರಿಸುವ ತುರ್ತು ಸನ್ನಿವೇಶಕ್ಕೆ ಸಿಲುಕಿದರು !! ಬೆಂಕಿಯ ಝಳಕ್ಕೆ ಪಾಕತಜ್ಞರ ಹೊಳೆಯುವ ಮೈಮೇಲಿಂದ ಇಳಿಯುತ್ತಿದ್ದ ಲೀಟರುಗಟ್ಟಲೆ ಬೆವರು ಸಾರಿನ ಪಾತ್ರೆಯಲ್ಲಿ ಲೀನವಾಗಿ ಅಡುಗೆ ರುಚಿಯನ್ನು ಇಮ್ಮಡಿಗೊಳಿಸುತ್ತಲಿದ್ದರೆ, ಭೋಜನಶಾಲೆಯೆಂಬುದು ತುಂಬು ಗಡಿಬಿಡಿಯೊಂದಿಗೆ ಕುಣಿದು ಕುಪ್ಪಳಿಸುತ್ತಿರುವಂತೆ ಕಂಡಿತು…

ಸೇರಿದ ಜನ ಯಾವ ಕಡೆಯದ್ದು ಎನ್ನುವ ಪ್ರಶ್ನೆ ಮದುವೆ ಮನೆಯುದ್ದಕ್ಕೂ ಸರಸರನೇ ಹರಿದಾಡತೊಡಗಿತು! ಸೀತಾರಾಮನ ಮಾವನಿಗೆ ಊಟದ ಕ್ಯೂನಲ್ಲಿದ್ದ ಮುಕ್ಕಾಲು ಭಾಗ ಜನಸ್ತೋಮದ ಗುರುತು ಯಾವ ದಿಕ್ಕಿನಿಂದಲೂ ಸಿಗುವ ಲಕ್ಷಣವೇ ಕಾಣಿಸಲಿಲ್ಲ!!
ಬೀಗರ ಕಡೆಯಿಂದ ಐನೂರು ಸಂಖ್ಯೆ ಮೀರುದಿಲ್ಲ ಎಂದಿದ್ದರಿಂದಲೇ ಒಂದು ಸಾವಿರ ಜನರಿಗೆ ಭೋಜನದ ವ್ಯವಸ್ಥೆ ಮಾಡಿಸಲಾಗಿತ್ತು .. ಆದರೇ ಪ್ರವಾಹೋಪಾದಿಯಾಗಿ ನುಗ್ಗಿದ ಅಪರಿಚಿತ ನೆಂಟರು ಹೆಣ್ಣಿನ ಮನೆಯವರನ್ನು ಭಾರೀ ಫಜೀತಿಗೆ ಸಿಕ್ಕಿಸಿ ಹಾಕಿಬಿಟ್ಟಿದ್ದರು..ಮದುವೆ ಮುಗಿದ ತರುವಾಯ ಬರಲಿದ್ದ ಊಟದ ಬಿಲ್ಲಿನ ಉದ್ದವನ್ನು ಎಣಿಸಿಕೊಂಡು ಹೆಣ್ಣಿನ ಅಪ್ಪ ಉಗ್ರಾಣದ ಮೂಲೆಯಲ್ಲಿ ತಲೆಮೇಲೆ ಕೈ ಹೊತ್ತು ಕುಳಿತು ಯೋಚನೆಗೆ ಬಿದ್ದಿದ್ದರೆ, ಅತ್ತ ಚುನಾವಣಾ ಸಮಾವೇಶಕ್ಕೆ ಬಂದಿದ್ದ ಅಪರಿಚಿತ ನೆಂಟರು ಹೊಟ್ಟೆ ಬಿರಿಯೇ ಉಂಡು ವಾಪಾಸು ತಮ್ಮ ನಾಯಕನ ವಿಭೀಷಣ ಭಾಷಣ ಕೇಳುವ ಗಡಿಬಿಡಿಯೊಂದಿಗೆ ಹಿಂದಿರುಗುತ್ತಿದ್ದರು ….

-ಪ್ರವೀಣ್ ಯಕ್ಷಿಮಠ

Leave a Comment