ಒಮ್ಮೊಮ್ಮೆ ಸೋತು ಬಿಡುತ್ತೇನೆ

ಈಗೆಲ್ಲ ನಾನು ಸೋತುಬಿಡುವುದನ್ನು ಕಲಿತಿದ್ದೇನೆ
ಗೆದ್ದೇನು ಮಾಡಲಿ ಹೇಳಿ..?
ಗೆಲ್ಲುವ ಅವಕಾಶಗಳೆಲ್ಲವೂ
ನನ್ನೆಡೆಗೇ ಇದ್ದರೂ
ಗೆಲುವು ಬೇಕೆನಿಸುವುದೇ ಇಲ್ಲ
ಈ ಸೋಲು ಹಾಯಾಗಿದೆ..
ಸುಮ್ಮನೆ ಸೋತುಬಿಡುತ್ತೇನೆ..
ಯಾರಿಗೂ ಹೇಳಬೇಡಿ.

ಮೊದಲೆಲ್ಲ
ಭಾರಿ ಪೈಪೋಟಿಗಿಳಿಯುವುದಿದ್ದಿತ್ತು..
ಗೆಲ್ಲಲೇಬೇಕೆಂಬ ಹಟವೊಂದು ಮನದಲ್ಲಿ
ಮನೆಮಾಡಿತ್ತು..
ಈಗ ಕೇಳಿ..ಕಾಲ ಬದಲಾಗಿದೆ ಎಂಬ ಉವಾಚ.
ಹೌದು,
ಇಷ್ಟಕ್ಕೂ ಗೆದ್ದೇನು ಮಾಡುವುದು ಹೇಳಿ..?
ಈ ಸೋಲು ಹಾಯಾಗಿದೆ..
ಸುಮ್ಮನೆ ಸೋತುಬಿಡುತ್ತೇನೆ..
ಯಾರಿಗೂ ಹೇಳಬೇಡಿ.

ಈ ಬದುಕ ಸತತ ಹೋರಾಟದಲ್ಲಿ
ಗೆದ್ದವರೂ ಸೋತರು ಹಾಗೂ
ಸೋತವರೂ ಗೆದ್ದರು..
ಮತ್ತದೇ ಕಾಲನ ಉವಾಚ, ಕೇಳಿ..
ಸೋತುಬಿಡುವುದರಲ್ಲಿದ್ದಷ್ಟು ಖುಷಿ
ಗೆದ್ದಾಗ ಸಿಗುತ್ತಿಲ್ಲ..ಕೇಳಿ
ಇಲ್ಲಿ ಕೇಳಿ ಒಮ್ಮೆ..ಈ ಸೋಲು ಹಾಯಾಗಿದೆ..
ಸುಮ್ಮನೆ ಸೋತುಬಿಡುತ್ತೇನೆ..
ಯಾರಿಗೂ ಹೇಳಬೇಡಿ.

ಬದುಕ ಓಟದಲ್ಲಿ
ಗೆದ್ದವರ ಹಿಂದೆ ಎಲ್ಲರೂ ಇರುವಾಗ
ಸೋತವರದು ಎಂದಿಗೂ ಏಕಾಂಗಿ ಬದುಕೇ
ಈ ಏಕಾಂಗಿತನ ಯಾಕೋ ಇತ್ತೀಚೆಗೆ ಇಷ್ಟ
ಸೋತ ಬದುಕ ಗಮನಿಸುವವರೇ
ಇಲ್ಲದೆ ಇರುವಾಗ
ಈ ಸೋಲು ಹಾಯಾಗಿದೆ..
ಒಮ್ಮೆ ಸೋತುಬಿಡುತ್ತೇನೆ..
ಯಾರಿಗೂ ಹೇಳಬೇಡಿ.

  • ವಿನಯಾ ಶೆಟ್ಟಿ

Leave a Comment