ವಾರಾಹಿ ಯೋಜನೆಗೆ ಸಾವಿರಾರು ಕೋಟಿ ವ್ಯಯ, ಸಕ್ಕರೆ ಕಾರ್ಖಾನೆಗೆ ಹಣ ಯಾಕಿಲ್ಲ ಸ್ವಾಮಿ?!!

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ನೂರಾ ಹತ್ತು ಎಕರೆ ಜಾಗದಲ್ಲಿ ಇಪ್ಪತ್ತೈದು ಎಕರೆ ಜಾಗವನ್ನ ಬಳಸಿಕೊಂಡು ಮೆಡಿಕಲ್ ಕಾಲೇಜು ಮಾಡುವ ಅರ್ಥಾತ್ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಉದ್ದೇಶವೊಂದಿದೆ ಎನ್ನುವ ಮಾಹಿತಿ ಬಲ್ಲ ಮೂಲದಿಂದ ತಿಳಿದು ಬಂದಿದೆ. ಹಾಗೊಂದು ವೇಳೆ ಸಕ್ಕರೆ ಕಾರ್ಖಾನೆ ಮಗ್ಗುಲಲ್ಲೇ ಸರ್ಕಾರಿ ಮೆಡಿಕಲ್ ಕಾಲೇಜು ಮಾಡುವುದೇ ಹೌದಾದರೆ ಮುಂದೆ ಒಂದೋ ಸಕ್ಕರೆ ಕಾರ್ಖಾನೆಯನ್ನ ಸ್ಥಗಿತಗೊಳಿಸಬೇಕಾಗುತ್ತದೆ ಅಥವಾ ಮೆಡಿಕಲ್ ಕಾಲೇಜು ಬಂದ್ ಆಗುತ್ತದೆ! ಅದಾಗದೇ ಇರಬೇಕಾದರೆ ಪರ್ಯಾಯ ವ್ಯವಸ್ಥೆಯನ್ನು ಹುಡುಕಿಕೊಳ್ಳಬೇಕಾಗುತ್ತದೆ॒! ಅದೇನೆಂದರೆ…

ಪರ್ಯಾಯ ಜಾಗ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿರುವ ನೂರಾಹತ್ತು ಎಕರೆ ಜಾಗದಲ್ಲಿ ಕೃಷಿಗೆ ಸಂಬಂಧಿಸಿದ್ದೇನನ್ನಾದರೂ ಮಾಡಬಹುದು. ಸಕ್ಕರೆ ಕಾರ್ಖಾನೆಯಲ್ಲಿ ಪವರ್ ಉತ್ಫಾದನೆ ಮಾಡಿ ಇಲ್ಲಿ ಬಳಸಿದ ನಂತರ ಇಂಡಸ್ಟ್ರಿಗಳಿಗೆ ರವಾನೆ ಮಾಡುವಂತ ವ್ಯವಸ್ಥೆಯನ್ನೂ ಜಾರಿಗೆ ತರಬಹುದು ಎನ್ನುತ್ತಾರೆ ತಜ್ಞರೊಬ್ಬರು. ಸಕ್ಕರೆ ಕಾರ್ಖಾನೆಯ ಪಕ್ಕದ ಜಾಗ ಇಂಡಸ್ಟ್ರೀಯಲ್ ಎಸ್ಟೇಟ್ ಆದರೇನೇ ಉಪಯೋಗ ಎನ್ನುವುದು ನಮ್ಮ ಅಭಿಪ್ರಾಯ.. ಮೆಡಿಕಲ್ ಕಾಲೇಜು ಎನ್ನುವುದನ್ನ ಕೇಳಲಿಕ್ಕೆ ಸಾಕಷ್ಟು ಸಂತಸವಾಗುತ್ತದೆ! ಆದರೆ ಅದು ಆಗುವುದು ಯಾವ ಕಾಲಕ್ಕೋ ಗೊತ್ತಿಲ್ಲ. ಆದರೆ ಹೀಗೊಂದು ಪ್ರಪೋಸಲ್ ಇರುವುದು ಒಳ್ಳೆಯದೆ. ಒಂದು ವೇಳೆ ಮೆಡಿಕಲ್ ಕಾಲೇಜನ್ನು ಸ್ಥಾಪನೆ ಮಾಡುವುದೇ ಹೌದಾದರೆ ಬ್ರಹ್ಮಾವರ ಕೃಷಿಕೇಂದ್ರಕ್ಕೆ ಸಂಬಂಧಿಸಿದಂತೆ ಬೇಕಾದಷ್ಟು ಜಾಗವಿದೆ. ಅದನ್ನ ಧಾರಾಳವಾಗಿ ಬಳಸಿಕೊಳ್ಳ ಬಹುದು ತಾನೆ?


ಬ್ರಹ್ಮಾವರ ಸಕ್ಕರೆ ಕಾರ್ಖಾನೆ

ಕಾರ್ಖಾನೆಯ ಕಥೆ ಏನು?

ಇದೀಗ ಮತ್ತೆ ಶುರುವಾದೀತು ಎನ್ನುವ ಆಶಾಭಾವ ಹುಟ್ಟಿಸಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಈಗಾಗಲೇ ಕಬ್ಬಿನ ಸಸಿಯನ್ನ ವಿತರಣೆ ಮಾಡಿಯಾಗಿದೆ.. ಬಹುತೇಕ ರೈತರು ಅದಕ್ಕೆ ಪೂರಕವಾಗಿ ಸ್ಪಂದಿಸಿಯೂ ಆಗಿದೆ. ಈಗಾಗಲೇ ಕಾರ್ಖಾನೆಯ ಪುನರುತ್ಥಾನಕ್ಕೆ ಸರ್ಕಾರ ಹಣವನ್ನ ಬಿಡುಗಡೆ ಮಾಡುವ ಕುರಿತು ನಿರ್ಣಯವನ್ನೂ ಕೈಗೊಳ್ಳಬೇಕಿತ್ತು. ಅದಕ್ಕೆ ನಮ್ಮ ರಾಜಕೀಯ ನೇತಾರರ ಒತ್ತಡವೂ ಬೇಕು. ಆದರೆ ರಾಜಕೀಯ ನಾಯಕರು ಬಹುತೇಕ ಈ ಕುರಿತು ತೀವ್ರವಾದ ಆಸಕ್ತಿಯನ್ನ ತಳೆಯುವಂತೆ ಕಾಣುತ್ತಿಲ್ಲ.ಈ ನಡುವೆಯೇ ವಿಧಾನಪರಿಷತ್  ಸಭಾಪತಿ ಕೆ ಪ್ರತಾಪಚಂದ್ರ ಶೆಟ್ಟರು ಸಕ್ಕರೆ ಕಾರ್ಖಾನೆ ಆರಂಭವಾಗುವುದಿದ್ದರೆ ಅದಕ್ಕೆ ಒಂದೇ ಹಂತದ ಬೆಳವಣಿಗೆ ಬೇಕೇ ಹೊರತು ಹಂತ ಹಂತವಾಗಿ ಕ್ರೂಡಿಕರಣ ನಡೆಸಿಕೊಂಡು ಹೋಗತಕ್ಕುದ್ದಲ್ಲ.. ಇದುವರೆಗೂ ಅದರ ಸಾಧಕ ಬಾಧಕಗಳ ಸ್ಪಷ್ಟವಾದ ಚಿತ್ರಣವೇ ದೊರಕಲಿಲ್ಲ ಎನ್ನುತ್ತಾರೆ. ಆದರೆ ಸಕ್ಕರೆ ಕಾರ್ಖಾನೆ ಆರಂಭವಾಗುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಎನ್ನುತ್ತಾರೆ..

ಸರ್ಕಾರಕ್ಕೆ ಗಮನವಿರಲಿ

ಆಡಳಿತದಲ್ಲಿರುವ ಸರ್ಕಾರ ರಾಜ್ಯದ ಬೇರೆ ಜಿಲ್ಲೆಗಳ ರೈತರ ಸಮಸ್ಯೆ ಬಂದಾಗ ಅದಕ್ಕೆ ತಕ್ಷಣವೇ ಸ್ಪಂದಿಸುತ್ತದೆ, ಸಕ್ಕರೆ ಕಾರ್ಖಾನೆಯ ಬಾಕಿ ಹಣವನ್ನೂ ತಕ್ಷಣವೇ ಬಿಡುಗಡೆ ಮಾಡುತ್ತದೆ. ಆದರೆ ಆವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಆಂದೋಲನಗಳು ಆಗದೇ ಇರುವುದರಿಂದಾಗಿ ಮತ್ತು ಇದು ಜನತೆಯ ನಡುವಿನ ಕೂಗು ಅಲ್ಲದೇ ಇರುವ ಕಾರಣದಿಂದಾಗಿ ಸರ್ಕಾರವೂ ಇದರ ಕಡೆ ಗಮನ ಹರಿಸುತ್ತಿಲ್ಲ ಮತ್ತು ನಮ್ಮ ಜನಪ್ರತಿನಿಧಿಗಳೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿಲ್ಲ. ಆದರೆ ಹಿರಿಯ ರಾಜಕಾರಣಿ ಓಸ್ಕರ್ ಪರ್ನಾಂಡಿಸ್ ಸಕ್ಕರೆ ಕಾರ್ಖಾನೆಯನ್ನ ಮತ್ತೆ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಒಂದಷ್ಟು ಕೆಲಸವನ್ನೂ ಮಾಡುತ್ತಿದ್ದು ಅದು ಸರ್ಕಾರದ ಮಟ್ಟದಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದನ್ನ ಇನ್ನಷ್ಟೇ ಕಾದುನೋಡಬೇಕಾಗಿದೆ! ಒಂದು ವೇಳೆ ಸರ್ಕಾರ ಸಕ್ಕರೆ ಕಾರ್ಖಾನೆ ಐವತ್ತು ಕೋಟಿ ಹಣವನ್ನ ಬಿಡುಗಡೆ ಮಾಡಿತೆಂದರೆ ಅದು ಎರಡು ಜಿಲ್ಲೆಯ ಕಬ್ಬು ಬೆಳೆಗಾರರ ಅಭ್ಯುದಯಕ್ಕೇ ಸರ್ಕಾರ ಕೊಟ್ಟ ಬಹುದೊಡ್ಡ ಕೊಡುಗೆ ಅಂತನ್ನಿಸಿಕೊಳ್ಳುತ್ತದೆ. ವಾರಾಹಿ ಯೋಜನೆಗೆ ಎರಡು ಸಾವಿರ ಕೋಟಿ ವೆಚ್ಚವಾಗುತ್ತಿರುವ ಈ ಹೊತ್ತಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕನಿಷ್ಟ ಐವತ್ತು ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲವೇ ಎನ್ನುವುದು ಪತ್ರಿಕೆಯ ಪ್ರಶ್ನೆ

-ಗಿಳಿಯಾರ್

Leave a Comment