ಅಭಿನವ ಶನೀಶ್ವರ ಖ್ಯಾತಿಯ ಜಲವಳ್ಳಿ ವೆಂಕಟೇಶ ರಾವ್ ಇನ್ನಿಲ್ಲ.

ಸಭಿಕರ ಗಮನ ಸೆಳೆಯುವ ಸ್ವರಭಾವ, ಎರಡನೇ ವೇಷದ ಗತ್ತು-ಗೈರತ್ತು, ಅತಿ ಎನಿಸದ ಮಿತವಾದ ರಂಗ ಸಂಚಾರ. ಅಭಿನವ ಶನೀಶ್ವರ ಖ್ಯಾತಿಯ ಜಲವಳ್ಳಿ ವೆಂಕಟೇಶ ರಾವ್ (86) ಮಂಗಳವಾರ ನಿಧನರಾದರು.

ಬೊಮ್ಮ ಮಡಿವಾಳ ಮತ್ತು ದೇವಿ ದಂಪತಿಗಳ ಪುತ್ರ ಜಲವಳ್ಳಿ. 1933ರಲ್ಲಿ ಜನನ. 2ನೇ ತರಗತಿಗೇ ಸಾಮಾನ್ಯ ಶಿಕ್ಷಣಕ್ಕೆ ವಿದಾಯ. ಲೋಕ ಶಿಕ್ಷಣ ಪಾಠಶಾಲೆಯಲ್ಲಿ ಜೀವನದ ಪಾಠಗಳನ್ನು ಕಲಿಯುತ್ತಾ, ಹದಿನಾರನೇ ವಯಸ್ಸಿಗೇ ಗುಂಡಬಾಳ ಮೇಳದಲ್ಲಿ ಯಕ್ಷಕಲಾದೀಕ್ಷೆ ಪಡೆದು, ತಿರುಗಾಟಕ್ಕೆ ಹೊರಟು ನಿಂತವರು. ಮುಂದೆ ಇಡಗುಂಜಿ, ಕೊಳಗೀಬೀಸ್‌ ಮೇಳಗಳಿಂದ ಹಿಡಿದು, ತೆಂಕಿನಲ್ಲಿ ಸುರತ್ಕಲ್‌ ಮೇಳಗಳವರೆಗೆ ಕೆಲವು ವರ್ಷ ತಿರುಗಾಟ ಪೂರೈಸಿ, ಬಡಗಿನ ಗಜಮೇಳವೆನಿಸಿಕೊಂಡ ಸಾಲಿಗ್ರಾಮ ಮೇಳದಲ್ಲಿ ಸುದೀರ್ಘ‌ 25 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಅಮೃತೇಶ್ವರೀ ಮೇಳ, ಕಮಲಶಿಲೆ ಮುಂತಾದ ಮೇಳಗಳಲ್ಲೂ ಕಲಾವಿದರಾಗಿ ದುಡಿದ ಜಲವಳ್ಳಿ, ಆರು ದಶಕಗಳ ಕಾಲ ವೃತ್ತಿ ಮೇಳಗಳಲ್ಲಿ ದುಡಿದವರು.

“ಗದಾಯುದ್ಧ’ದ ಭೀಮ, “ವಲಲ’ ಭೀಮ, “ಕಂಸವಧೆ’ಯ ಕಂಸ, ರಕ್ತಜಂಘ, ಯಮಧರ್ಮ ಮುಂತಾದ ಪಾತ್ರಗಳಿಗೆ ಅಪೂರ್ವವಾಗಿ ಜೀವತುಂಬಿ ಪ್ರಸಿದ್ಧಿಯನ್ನು ಪಡೆದ ಜಲವಳ್ಳಿ ಅವರಿಗೆ ಶನೀಶ್ವರ ಮಹಾತ್ಮೆಯ “ಶನೀಶ್ವರ’ ಅತ್ಯಂತ ಪ್ರಸಿದ್ಧಿಯನ್ನು ತಂದುಕೊಟ್ಟ ಪಾತ್ರ. ಜಲವಳ್ಳಿ ಇರುವ ಮೇಳಗಳಲ್ಲಿ “ಶನೀಶ್ವರ ಮಹಾತೆ¾’ ಪ್ರಸಂಗ ಅತಿಹೆಚ್ಚು ಪ್ರದರ್ಶನಗೊಂಡಿದೆ, ಶನೀಶ್ವರ ಎಂದರೆ ಜಲವಳ್ಳಿ ಎಂಬಷ್ಟರ ಮಟ್ಟಿಗೆ ಜನಪ್ರಿಯತೆ. ಕೆರೆಮನೆ ಶಿವರಾಮ ಹೆಗಡೆ, ಕೊಂಡದಕುಳಿ ರಾಮ-ಲಕ್ಷ್ಮಣ ಹೆಗಡೆ, ಮೂರೂರು ದೇವರು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ ಮುಂತಾದ ಯಕ್ಷದಿಗ್ಗಜರ ಒಡನಾಟ ಹೊಂದಿದವರು ಜಲವಳ್ಳಿ. ಚಿಟ್ಟಾಣಿ ಜೊತೆಗಿನ ಇವರ ವೇಷ ಯಕ್ಷರಂಗದಲ್ಲಿ ಹೊಸ ಅಲೆ ಎಬ್ಬಿಸಿರುವುದು ಈಗ ಇತಿಹಾಸ.

“ಯಕ್ಷಗಾನದ ಶಕ ಪುರುಷ ಶೇಣಿ ಗೋಪಾಲಕೃಷ್ಣ ಭಟ್ಟರ ಒಡನಾಟ ತಮ್ಮ ಕಲಾ ಬದುಕಿಗೆ ಹೊಸ ತಿರುವು ನೀಡಿತು’ ಎಂದು ಅಭಿಮಾನದಿಂದ ನುಡಿಯುವ ಜಲವಳ್ಳಿ ಅವರು ಯಕ್ಷಗಾನ ಯುಗ ಪ್ರವರ್ತಕ ಕಾಳಿಂಗ ನಾವುಡರ ಭಾಗವತಿಕೆಗೆ ವೇಷಗಳನ್ನು ನಿರ್ವಹಿಸಿದ್ದು ವೃತ್ತಿ ಬದುಕಿನ ಅತ್ಯಂತ ಸಂತೃಪ್ತಿಯ ಕ್ಷಣವೆನ್ನುತ್ತಾರೆ. ಪೌರಾಣಿಕ ಪ್ರಸಂಗಗಳ ಕುರಿತು ಹೆಚ್ಚು ಒಲವು ಹೊಂದಿದರೂ ಹೊಸ ಪ್ರಸಂಗ, ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದವರು. ಯಕ್ಷರಂಗದ ಇತಿಹಾಸದಲ್ಲಿಯೇ 6 ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯನ್ನು ಮಾಡಿದ ಜಲವಳ್ಳಿಯವರ ಸಾಧನೆಗೆ ಸಂದ ಪ್ರಶಸ್ತಿ, ಸನ್ಮಾನ, ಗೌರವ ಅನೇಕ. ರಾಜ್ಯ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ, ಅಖೀಲ ಭಾರತ 76ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಪ್ರಮುಖವಾದುವು.

ಇವರ ಪುತ್ರ ಜಲವಳ್ಳಿ ವಿದ್ಯಾದರ ರಾವ್ ಈಗೀನ ಯಕ್ಷಗಾನ ಕಾಲಘಟದಲ್ಲಿ ಸರ್ವ ಶ್ರೇಷ್ಠ ಕಲಾವಿದರಾಗಿದ್ದು, ಜಲವಳ್ಳಿ ಮೇಳವೆಂಬ ಡೇರೆ ಮೇಳವನ್ನು ನಡೆಸುತ್ತಿದ್ದಾರೆ.

Leave a Comment